ಕಲಬುರಗಿಯಲ್ಲಿ ಓರ್ವ ಶಂಕಿತ ಉಗ್ರನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ ಬೆನ್ನಲ್ಲೇ ಬೆಂಗಳೂರಲ್ಲಿ ಅಡಗಿದ್ದ ಶಂಕಿತ ಉಗ್ರನೊಬ್ಬನನ್ನು ಎಲೆಕ್ಟ್ರಾನಿಕ್ಸ್ ಸಿಟಿ ವಿಭಾಗದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಹೆಬ್ಬಗೋಡಿ ಸಮೀಪದ ಜಿಗಣಿ ಬಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿದ್ದ ಪಶ್ಚಿಮ ಬಂಗಾಳದ ಅಸಾಪೂಲ್ ಮಲ್ಲಿಕ್ ಬಿನ್ ಅಬೆದ್ ಮಲ್ಲಿಕ್ (25) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಹೀಕ್ ಇ ತಾಲಿಬಾನ್ ಪಾಕಿಸ್ತಾನ್ (ಟಿಟಿಕೆ) ಉಗ್ರ ಸಂಘಟನೆ ಸದಸ್ಯರ ಜತೆ ಸಂಪರ್ಕ ಹೊಂದಿರುವುದು ಈವರೆಗಿನ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸಾಪೂಲ್ ಮಲ್ಲಿಕ್, ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ. ಮುಸ್ಲಿಂರ ಮೇಲೆ ದೌರ್ಜನ್ಯ ಎಸಗುವ ಕಡೆಗಳಲ್ಲಿ ದಾಳಿಗೆ ಸಂಚು ರೂಪಿಸಿದ್ದ. ಪಾಕಿಸ್ತಾನ, ಭಾರತ ಸೇರಿ ಕೆಲ ದೇಶಗಳ ಮೇಲೆ ದಾಳಿಗೆ ಸಂಚು ರೂಪಿಸಿದ್ದ. ಟಿಟಿಕೆಯ ಸದಸ್ಯ ಅಫ್ಘಾನಿಸ್ತಾನದ ಇಮ್ರಾನ್ ಅಹಿಂದರ್ ಎಂಬಾತನನ್ನು ಪರಿಚಯ ಮಾಡಿಕೊಂಡು ಆತನ ಜತೆ ನಿರಂತರ ಸಂಪರ್ಕದಲ್ಲಿದ್ದ.
ಪ್ರತೀಕಾರಕ್ಕೆ ಸಂಚು
ಪಾಕಿಸ್ತಾನದಲ್ಲಿ ಮಸೀದಿಗಳ ಮೇಲೆ ಮತ್ತು ಅಲ್ಲಿನ ಜನರ ಮೇಲೆ ಪಾಕಿಸ್ತಾನ ಸೇನೆಯಿಂದ ನಡೆಯುವ ದೌರ್ಜನ್ಯ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ವಿವಾದದಲ್ಲಿ, ಇಸ್ರೇಲ್ ಪರವಾಗಿ ಪಾಕಿಸ್ತಾನ ಸೇನೆ ಸಹಾಯ ಮಾಡುತ್ತಿದೆ. ಪ್ಯಾಲೆಸ್ತೇನ್ ಮುಸಲ್ಮಾನರಿಗೆ ಸಹಾಯ ಮಾಡುತ್ತಿಲ್ಲವೆಂಬ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ. ಉಗ್ರ ಸಂಘಟನೆಯೊಂದಿಗೆ ಸೇರಿ ಪಾಕಿಸ್ತಾನ ಸೇನೆ ಮೇಲೆ ಮತ್ತು ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಸಂಚು ರೂಪಿಸಿದ್ದ. ಪಶ್ಚಿಮ ಬಂಗಾಳದಿಂದ ಈತ ಎರಡನೇ ಬಾರಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದ. ಶಂಕಿತ ಉಗ್ರನ ಜತೆ ಮತ್ತೊಬ್ಬ ವ್ಯಕ್ತಿ ರೂಮಿನಲ್ಲಿ ಇದ್ದ ಎಂಬ ಮಾಹಿತಿಯು ಲಭ್ಯವಾಗಿದೆ.
ಮೊಬೈಲ್‌ನಲ್ಲಿ ಮಾಹಿತಿ
ಅಫ್ಘಾನಿಸ್ತಾನಕ್ಕೆ ಹೋಗಲು ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ ಮಲ್ಲಿಕ್, ವೀಸಾಗಾಗಿ ಅರ್ಜಿ ಸಲ್ಲಿಸಿದ್ದ. ಆದರೆ, ಕಾರಣಾಂತರಗಳಿಂದ ಅಫ್ಘಾನಿಸ್ತಾನಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಉಗ್ರ ಸಂಘಟನೆಗೆ ಸಂಬಂಧಿಸಿದ ವಿಡಿಯೋಗಳು, ಸಂದೇಶಗಳು ಶಂಕಿತನಿಂದ ಜಪ್ತಿ ಮಾಡಿರುವ ಮೊಬೈಲ್‌ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.