ರಕ್ತದಾನದಿಂದ ಅಮೂಲ್ಯ ಜೀವ ರಕ್ಷಣೆ

ಸಿಂದಗಿ ತಾಲೂಕಿನ ಹೊನ್ನಳ್ಳಿ-ಬ್ರಹ್ಮದೇವನಮಡು ಗ್ರಾಮದ ಕಲ್ಯಾಣದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ರಕ್ತದಾನ ಶಿಬಿರಕ್ಕೆ ಕಲ್ಯಾಣದಯ್ಯ ಸ್ವಾಮೀಜಿ ರಕ್ತದಾನ ಮಾಡುವದರ ಮೂಲಕ ಚಾಲನೆ ನೀಡಿದರು. ರುತುಜಾ ಮೈಸೂರ, ಡಾ. ಪ್ರವೀಣ ಅಮರಗೋಳ, ಡಾ. ಅರ್ಷದ ಮುಂಡರಗಿ ಇತರರಿದ್ದರು.
ಸಿಂದಗಿ ತಾಲೂಕಿನ ಹೊನ್ನಳ್ಳಿ-ಬ್ರಹ್ಮದೇವನಮಡು ಗ್ರಾಮದ ಕಲ್ಯಾಣದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ರಕ್ತದಾನ ಶಿಬಿರಕ್ಕೆ ಕಲ್ಯಾಣದಯ್ಯ ಸ್ವಾಮೀಜಿ ರಕ್ತದಾನ ಮಾಡುವದರ ಮೂಲಕ ಚಾಲನೆ ನೀಡಿದರು. ರುತುಜಾ ಮೈಸೂರ, ಡಾ. ಪ್ರವೀಣ ಅಮರಗೋಳ, ಡಾ. ಅರ್ಷದ ಮುಂಡರಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲ್ಯಾಣದಯ್ಯ ಗದ್ದುಗೆಮಠ ಸ್ವಾಮೀಜಿ ಹೇಳಿಕೆ
  • ಕಲ್ಯಾಣದೇಶ್ವರ ಜಾತ್ರಾ ಮಹೋತ್ಸವ
ಬ್ರಹ್ಮದೇವನಮಡು: ಜನರ ಜೀವ ರಕ್ಷಣೆಗೆ ರಕ್ತ ಅತ್ಯವಶ್ಯಕವಾಗಿದ್ದು, ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ರಕ್ತದಾನದ ಮೂಲಕ ಅಮೂಲ್ಯ ಜೀವ ರಕ್ಷಣೆಗೆ ಮುಂದಾಗಬೇಕು ಎಂದು ಕಲ್ಯಾಣದೇಶ್ವರ ಮಠದ ಪೀಠಾಧಿಪತಿ ಕಲ್ಯಾಣದಯ್ಯ ಗದ್ದುಗೆಮಠ ಸ್ವಾಮೀಜಿ ಹೇಳಿದರು.
ಸಿಂದಗಿ ತಾಲೂಕಿನ ಹೊನ್ನಳ್ಳಿ-ಬ್ರಹ್ಮದೇವನ ಮಡು ಗ್ರಾಮದ ಕಲ್ಯಾಣದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಸ್ವತಃ ರಕ್ತದಾನ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಾನವನಿಗೆ ಆಕಸ್ಮಿಕ ಸಂದರ್ಭಗಳಲ್ಲಿ ತ್ವರಿತವಾಗಿ ಬೇಕಾಗುವ ರಕ್ತ ಅಮೂಲ್ಯ ಜೀವ ಉಳಿಸುತ್ತದೆ ಎಂದು ಹೇಳಿದರು.
ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಅರ್ಷದ ಮುಂಡರಗಿ ಮಾತನಾಡಿ, ರಕ್ತದಾನ ಮಾಡಿದರೆ ತಮ್ಮ ದೇಹದ ಕೊಬ್ಬಿನಾಂಶ ಕಡಿಮೆಯಾಗಿ ಹೊಸ ರಕ್ತ ಉತ್ಪತ್ತಿಯಾಗಲಿದೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಿತ ರಕ್ತದಾನ ಮಾಡಬೇಕು ಎಂದರು. ರಕ್ತದಾನ ನೀಡಿ ಮಾತನಾಡಿದ ಶಿಕ್ಷಕ ಈರಣ್ಣ ಡಿಗ್ಗಿ, ಕೃತಕವಾಗಿ ಎಲ್ಲವನ್ನು ಸೃಷ್ಟಿ ಮಾಡಬಹುದು. ರಕ್ತವನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ರಕ್ತದಾನ ಪುಣ್ಯದ ಕೆಲಸವಾಗಿದೆ ಎಂದರು. ಜಿಲ್ಲಾ ರಕ್ತನಿಧಿ ಕೇಂದ್ರದ ರುತುಜಾ ಮೈಸೂರ, ಅರುಣ ಕುಮಾರ, ಅಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ರೇಷ್ಮಾ ಬಿ. ನಾಯಕ, ಸುಚಿತ್ರಾ ಪಾಟೀಲ, ಶಿವನಗೌಡ ಬೇನಾಳ ಸಿಬ್ಬಂದಿ ಇದ್ದರು.
ಸಂಗಮೇಶ ಡಿಗ್ಗಿ, ಅರವಿಂದ ಸಾಹು ಕುರಳಗೇರಾ, ಕೆ.ಬಿ. ಮನಗೂಳಿ, ರಮೇಶ ಸಾಸಾಬಾಳ, ಈರಣ್ಣ ಭಜಂತ್ರಿ, ಶರಣು ಮನಗೂಳಿ, ರಮೇಶ ಬಮ್ಮನಳ್ಳಿ, ಡಾ.ಪ್ರವೀಣ ಅಮರಗೋಳ ಸೇರಿ ನೂರಾರು ಜನರು ರಕ್ತದಾನ ಮಾಡಿದರು.

ಇಂದು ರಥೋತ್ಸವ

ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಹೊನ್ನಳ್ಳಿ-ಬ್ರಹ್ಮದೇವನಮಡು ಗ್ರಾಮದ ಕಲ್ಯಾಣದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಏ. 20ರಂದು ಸಂಜೆ 6ಕ್ಕೆ ಆಲೂರು ಸಂಸ್ಥಾನ ಹಿರೇಮಠದ ಕೆಂಚವೃಷಭೇಂದ್ರ ಶಿವಾಚಾರ್ಯರ ಅಮೃತ ಹಸ್ತದಿಂದ ಕಳಸಾರೋಹಣ ನಂತರ ಮಹಾ ರಥೋತ್ಸವ ನಡೆಯಲಿದೆ. ಸಂಜೆ 4ಕ್ಕೆ ಧರ್ಮಸಭೆ ಹಾಗೂ ಪ್ರವಚನ ಮಂಗಲ ಕಾರ್ಯಕ್ರಮ ನಡೆಯಲಿದೆ. ಚಿಣಮಗೇರಿಮಠದ ವೀರಮಹಾಂತ ಶಿವಾಚಾರ್ಯರು ಧರ್ಮ ಸಭೆಯ ದಿವ್ಯ ಸಾನ್ನಿಧ್ಯ ವಹಿಸುವರು. ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಕಾರ್ಯಕ್ರಮ ಉದ್ಘಾಟಿಸಿಲಿದ್ದಾರೆ. ಶಾಸಕರಾದ ಅಶೋಕ ಮನಗೂಳಿ ಅಧ್ಯಕ್ಷತೆ, ಅಜಯಸಿಂಗ್ ಧರ್ಮಸಿಂಗ್ ಜ್ಯೋತಿ ಬೆಳಗಿಸುವರು. ರಾಜುಗೌಡ ಪಾಟೀಲ, ಅಲ್ಲಮಪ್ರಭು ಪಾಟೀಲ ಮತ್ತಿತರು ಭಾಗವಹಿಸಲಿದ್ದಾರೆ ಎಂದು ಕಲ್ಯಾಣದಯ್ಯ ಗದ್ದುಗೆಮಠ ಸ್ವಾಮೀಜಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net