

ಬೆಂಗಳೂರು : ಡಾ.ರಾಜಕುಮಾರ್ ಅವರ ಪ್ರಸಿದ್ದ ‘ಸಂಪತ್ತಿಗೆ ಸವಾಲ್’ ಸಿನಿಮಾ ತೆರೆಕಂಡು 52 ವರ್ಷ ಕಳೆದಿದ್ದು, ಇಂದಿಗೂ ಜನರ ಆಸಕ್ತಿ ಕಡಿಮೆಯಾಗಿಲ್ಲ. ಅದೇ ಕಥೆಯನ್ನು ಇರಿಸಿಕೊಂಡು ಪಿ.ಬಿ.ಧುತ್ತರಗಿ ರಚಿಸಿರುವ ಸಂಪತ್ತಿಗೆ ಸವಾಲ್ ನಾಟಕವು ಆಧುನಿಕ ಸ್ಪರ್ಶದೊಂದಿಗೆ ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ಕಂಡಿದ್ದು, ಜನಮನ ಗೆದ್ದಿದೆ.
ಕೆ.ಎಸ್.ಡಿ.ಎಲ್.ಚಂದ್ರು ನಿರ್ದೇಶನದಲ್ಲಿ, ಹೊಳೆಹುಚ್ಚೇಶ್ವರ ನಾಟ್ಯ ಸಂಘ ಕಮತಗಿ ಕಲಾವಿದರು ಹೊಸ ರೂಪದಲ್ಲಿ ನಾಟಕ ಪ್ರದರ್ಶಿಸಿದರು. ಹೊಸ ಸ್ವರೂಪದಲ್ಲಿ ಈಗಾಗಲೆ ದಾವಣಗೆರೆಯಲ್ಲಿ 20 ಪ್ರದರ್ಶನಗಳನ್ನು ಯಶಸ್ವಿಯಾಗಿ ಪೂರೈಸಿರುವ ಸಂಸ್ಥೆಯು, ಬೆಂಗಳೂರಿನ ಪ್ರೇಕ್ಷಕರ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ.
3 ಗಂಟೆ ಅವಧಿಯ ಸುದೀರ್ಘ ನಾಟಕವನ್ನು ಪೂರ್ಣ ವೀಕ್ಷಿಸಿದ ಪ್ರೇಕ್ಷಕರು ಚಪ್ಪಾಳೆಯ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿದರು. ಸಾಹುಕಾರನ ಮಗಳು ದುರ್ಗಿ ಪಾತ್ರದಲ್ಲಿ ಕಲಾವಿದೆ ಕನಕಲಕ್ಷ್ಮಿ ಶಿರಸಿ, ಸಾಹುಕಾರ ಮರಿಯಪ್ಪನ ಪಾತ್ರದಲ್ಲಿ ಸಂಕೇತ್ ಮಂಗಳೂರು ಮತ್ತು ವೆಂಕಪ್ಪ ಕುಲಕರ್ಣಿ ಪಾತ್ರದಲ್ಲಿ ಆನಂದ ಪತ್ತಾರ ಮತ್ತಿತರ ಪಾತ್ರಗಳು ಸಿನಿಮಾ ದೃಶ್ಯವನ್ನು ಯಥಾವತ್ತಾಗಿ ಕಟ್ಟಿಕೊಟ್ಟವು.