ಸಂಪಾಕೀಯ: ಕರ್ನಾಟಕ ಇಂದು ದೇಶದಲ್ಲೆ ಅತಿ ಹೆಚ್ಚು ತಲಾದಾಯವನ್ನು (2,04,605 ರೂ.) ಹೊಂದಿದೆ. ಇದು ರಾಷ್ಟ್ರೀಯ ಸರಾಸರಿಯಾದ 1,14,710 ರೂ.ಗಿಂತ ಹೆಚ್ಚು. ದೇಶದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್ಟಿ) ಎರಡನೇ ಅತಿದೊಡ್ಡ ಕೊಡುಗೆ ನೀಡುವ ರಾಜ್ಯವಾಗಿದೆ. 2024&25ರಲ್ಲಿ ಶೇ. 12.8ರಷ್ಟು ಒಟ್ಟು ರಾಜ್ಯ ಆಂತರಿಕ ಉತ್ಪನ್ನದ (ಜಿಎಸ್ಡಿಪಿ) ಬೆಳವಣಿಗೆ ದಾಖಲಿಸಿದೆ. ವೇಗವಾಗಿ ಬೆಳೆಯುತ್ತಿರುವ ದೊಡ್ಡ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದಲ್ಲಿ ವಿರೋಧಾಭಾಸವೆಂಬಂತೆ, ಇಡೀ ದೇಶದಲ್ಲೆ ಅತಿ ಹೆಚ್ಚು ಬಡತನ ರೇಖೆಗಿಂತ ಕೆಳಗಿರುವವರ (ಬಿಪಿಎಲ್) ಪಡಿತರ ಚೀಟಿಗಳು ಇವೆ! ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೇ ಇದನ್ನು ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ರಾಜ್ಯದ ಜನಸಂಖ್ಯೆಯ ಶೇ. 73ರಿಂದ 75ರಷ್ಟು ಜನ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವುದು ಆಶ್ಚರ್ಯಕರವಾಗಿದೆ. ಹೆಚ್ಚಿನ ಆದಾಯವಿರುವ ರಾಜ್ಯವೊಂದಕ್ಕೆ ಇದು ಅತ್ಯಂತ ಅಸಹಜವಾದ ಅಂಕಿಅಂಶ. ಈವರೆಗಿನ ಸರ್ಕಾರಗಳ ಆಡಳಿತ ವೈಫಲ್ಯಕ್ಕೆ ಸಾಕ್ಷಿ.