ಉದ್ಯಮಿ ಜತೆ ಸಾಹುಕಾರ್ ₹10 ಕೋಟಿ ವ್ಯವಹಾರ!

ಉದ್ಯಮಿ ಮನೆ ಮೇಲೆ ದಾಳಿ ವೇಳೆ ಹಣಕಾಸು ದಾಖಲೆ ಪತ್ತೆ, ಟ್ರಸ್ಟ್ ಹೆಸರಿನ ಶಾಲೆಗೆ ಕೋಟ್ಯಂತರ ರೂ. ನಿಧಿ ಸಂಗ್ರಹ
KPSC Scame
KPSC Scame
Published on: 

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಹಗರಣದ ತನಿಖೆ ಮುಂದುವರೆಸಿರುವ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಪ್ರಭಾವಿ ಉದ್ಯಮಿಯೊಂದಿಗೆ ಸೇರಿ ₹ 10 ಕೋಟಿ ರೂ.ಹಣಕಾಸು ವ್ಯವಹಾರ ನಡೆಸಿರುವುದು ತನಿಖೆ ವೇಳೆ ಬಯಲಾಗಿದೆ.

ಆರೋಪಿ ಸಾಹುಕಾರನನ್ನು ಇಡಿ ಅಧಿಕಾರಿಗಳು ಅ.7 ರಿಂದ 19ರವರೆಗೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ ವೇಳೆ ಪಶುವೈದ್ಯಾಧಿಕಾರಿ 400 ಹುದ್ದೆಗಳು ಸೇರಿ ವಿವಿಧ ನೇಮಕಾತಿಯಲ್ಲಿ ಅಕ್ರಮ ನಡೆಸಿ ಬಂದ ಹಣವನ್ನು ಉದ್ಯಮಿಯೊಬ್ಬರ ಮೂಲಕ ಅಕ್ರಮ ವ್ಯವಹಾರ ನಡೆಸಿರುವುದು ಪತ್ತೆಯಾಗಿದೆ. ಕಳೆದ ಎರಡು ವಾರಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸಾಹುಕಾರ್ ಅಕ್ರಮಗಳು ಒಂದೊಂದಾಗಿ ಬಯಲಾಗುತ್ತಿದೆ.

ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಗರದ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಯಲ್ಲಿ ಸಾಹುಕಾರ್ ಹತ್ತುಕೋಟಿಗೂ ಹೆಚ್ಚು ಅಕ್ರಮ ಹಣಕಾಸು ವ್ಯವಹಾರ ನಡೆಸಿರುವ ಮಹತ್ವದ ದಾಖಲೆಗಳನ್ನು ಪತ್ತೆ ಮಾಡಿದೆ.

ಉದ್ಯಮಿ ಮನೆ ಮೇಲೆ ದಾಳಿ:

ಸಾಹುಕಾರ್ ಜತೆ ಸಂಪರ್ಕ ಹೊಂದಿದ್ದ ಉದ್ಯಮಿ ನಿವಾಸದ ಮೇಲೆ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳಿಗೆ ಕಾರಿನಲ್ಲಿ ಕೈಬರಹದ ಲೆಕ್ಕಪತ್ರದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಆ ದಾಖಲೆಗಳಲ್ಲಿ ಸಾಹುಕಾರ್ ಅವರ ಹೆಸರು ಮತ್ತು ದೂರವಾಣಿ ಸಂಖ್ಯೆಗಳು ಉಲ್ಲೇಖಿಸಲಾಗಿತ್ತು ಎಂದು ಇ.ಡಿ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಯಲ್ಲಿ ತಿಳಿಸಿದೆ.

ಕಳೆದ ಆಗಸ್ಟ್, 2025ರಿಂದ ಡಿಸೆಂಬರ್ ಅವಧಿಯಲ್ಲಿ ಸಾಹುಕಾರ್ ಅವರಿಂದ ಉದ್ಯಮಿ 5 ಕೋಟಿ ರೂ. ಪಡೆದಿದ್ದಾರೆ. ಇವರಿಬ್ಬರ ನಡುವಿನ ಒಟ್ಟು ಹಣಕಾಸಿನ ವಹಿವಾಟು 10 ಕೋಟಿಗೂ ಅಧಿಕವಾಗಿದೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿರುವುದನ್ನು ತನಿಖಾ ಮೂಲಗಳು ತಿಳಿಸಿವೆ.

ಟ್ರಸ್ಟ್ ಹೆಸರಲ್ಲಿ ಕೋಟ್ಯಂತರ ನಿಧಿ ಸಂಗ್ರಹ:

ಶಿವಶಂಕರಪ್ಪ ಸಾಹುಕಾರ್ ಅಕ್ರಮದಿಂದ ಬಂದ ಹಣವನ್ನು ಗದಗ ಜಿಲ್ಲೆಯಲ್ಲಿನ ಟ್ರಸ್ಟ್‌ನಿಂದ ನಡೆಯುತ್ತಿದ್ದ ಖಾಸಗಿ ಶಾಲೆ ನಿರ್ಮಾಣಕ್ಕೆ 3.36 ಕೋಟಿ ನಿಧಿ ಸಂಗ್ರಹಣೆ ಮಾಡಿದ್ದಾರೆ ಎಂದು ಇಡಿ ಆರೋಪಿಸಿದೆ. ಈ ಬಗ್ಗೆ ತನಿಖೆ ಚುರುಕುಗೊಳಿಸಿರುವ ಅಧಿಕಾರಿಗಳು ವಿವಿಧ ಆಯಾದಲ್ಲಿ ಹಣದ ಮೂಲದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಕೋರ್ಟ್‌ನಲ್ಲಿ ಶಿವಶಂಕರಪ್ಪ ಸಾಹುಕಾರ್ ಪರ ವಾದ ಮಂಡಿಸಿರುವ ವಕೀಲರು, ಇ ಡಿ ವಶಪಡಿಸಿಕೊಂಡಿರುವ ಕೈಬರಹದ ಹಾಳೆಗಳಿಗೂ ಜನವರಿ 2026ರ ಕೆಪಿಎಸ್‌ಸಿ ಪರೀಕ್ಷಾ ಹಗರಣಕ್ಕೂ ಯಾವುದೇ ನೇರ ಸಂಬಂಧವಿಲ್ಲ ಎಂದು ವಾದಿಸಿದ್ದಾರೆ. ತಮ್ಮ ಕಕ್ಷಿದಾರರು 300 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಅವರು ಆರ್ಥಿಕವಾಗಿ ಸಬಲರಾಗಿದ್ದಾರೆ. ಇ.ಡಿ ಅಧಿಕಾರಿಗಳು ಸಲ್ಲಿಸಿರುವ ವರದಿಯನ್ನು ಪುನಃ ಪರಿಶೀಲನೆ ಮಾಡಬೇಕೆಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಅಭ್ಯರ್ಥಿಗಳೊಂದಿಗೆ ಲಂಚದ ಹಣ ಪಡೆದಿರುವ ಆರೋಪದಲ್ಲಿ ಸಾಹುಕಾರ್ ಮತ್ತು ಸದಸ್ಯೆ ಬಿ.ವಿ.ಗೀತಾ ಅವರನ್ನು ಅ.7ರಂದು ಬಂಧಿಸಿರುವ ಅಧಿಕಾರಿಗಳು ಹಲವು ಸಾಕ್ಷಾೃಧಾರಗಳನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸಿದ್ದರು. ಅವರ ಹೇಳಿಕೆ ಹಾಗೂ ತಾಂತ್ರಿಕವಾಗಿ ದೊರೆತ ಮಾಹಿತಿಗಳ ಆಧಾರದ ಮೇಲೆ ತನಿಖೆ ಮುಂದುವರೆಸಿದ್ದಾರೆ. ಇದೆ ವೇಳೆ ಉದ್ಯಮಿಯೊಂದಿಗೆ ಕೋಟ್ಯಂತರ ರೂ. ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ. ಇಷ್ಟೊಂದು ಬೃಹತ್ ಮೊತ್ತದ ಹಣಕಾಸು ವ್ಯವಹಾರ ನೇಮಕಾತಿಗೆ ಸಂಬಂಧಿಸಿವೆಯೇ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಬೇಕಿದೆ.