ಜೈಲು ಮಂತ್ರಿಯಾದವರು ಸಿಎಂ ಆಗ್ತಾರೆ; ನೀನು ಆಗ್ತಿಯಾ ಎಂದು ಡಿಕೆಶಿ ಭವಿಷ್ಯ ನುಡಿದಿದ್ದ ಎಸ್​.ಬಂಗಾರಪ್ಪ: ಯಾರ್‍ಯಾರು ಸಿಎಂ ಆಗಿದ್ದು? | D K Shivakumar

ಎಸ್​.ಬಂಗಾರಪ್ಪ, ಡಿ.ಕೆ.ಶಿವಕುಮಾರ್, ದೇವರಾಜ್ ಅರಸು
ಎಸ್​.ಬಂಗಾರಪ್ಪ, ಡಿ.ಕೆ.ಶಿವಕುಮಾರ್, ದೇವರಾಜ್ ಅರಸು
Published on
ಬೆಂಗಳೂರು: ಬಂಧಿಖಾನೆ ಸಚಿವನಾಗು ಮುಂದೊಂದು ನೀನು ಸಿಎಂ ಆಗ್ತಿಯಾ ಎಂದು ನನ್ನನ್ನು ಮೊದಲು ಸಚಿವರನ್ನಾಗಿ ಮಾಡಿದ್ದು, ನನ್ನ ಗುರುಗಳಾದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು ಎಂದು ಖಾಸಗಿ ಚಾನಲ್​ನಲ್ಲಿ ಹೇಳಿದ್ದ ಡಿ.ಕೆ.ಶಿವಕುಮಾರ್(DK Shivakumar) ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಅವರು ರಾಜ್ಯದ ಸಿಎಂ ಆಗುವ ಹೊಸ್ತಿಲಿನಲ್ಲಿದ್ದಾರೆ. ಆದರೆ ಜೈಲು ಮಂತ್ರಿಯಾದವರು ಸಿಎಂ ಆಗ್ತಾರೆ ಎಂಬುದು ನಿಜವೇ? ಈ ವರದಿ ಓದಿ.
ಕಾಂಗ್ರೆಸ್​ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯಾಗಿದ್ದು, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದು, ಮುಂದಿನ ಸಿಎಂ ಆಗಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸನಿಹದಲ್ಲಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ರಾಜ್ಯದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಡಿ.ಕೆ.ಶಿವಕುಮಾರ್ ಹೇಳಿದ್ದೇನು?

ಈ ಹಿಂದೆ ನಟ ರಮೇಶ್ ನಡೆಸಿಕೊಡುತ್ತಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿ.ಕೆ.ಶಿವಕುಮಾರ್ ತಮ್ಮ ರಾಜಕೀಯ ಪಯಣವನ್ನು ಮೆಲುಕು ಹಾಕಿದ್ದರು. ಈ ವೇಳೆ ಬಂಧಿಖಾನೆ ಸಚಿವನಾಗು ಮುಂದೊಂದು ನೀನು ಸಿಎಂ ಆಗ್ತಿಯಾ ಎಂದು ಬಂಗಾರಪ್ಪ ಹೇಳಿದ್ದ ಮಾತನ್ನು ನೆನಪಿಸಿಕೊಂಡಿದ್ದರು.
ಎಸ್​ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ನನ್ನ ಕೈಯಲ್ಲಿ ಖಾತೆ ಹಂಚಿಕೆಯನ್ನು ಬರೆಸುತ್ತಿದ್ದರು. ಆಗ ಅವರು ಏ, ಡಿಕೆ ಮೊದಲು ನಾನು ಜೈಲು ಮಂತ್ರಿಯಾಗಿ ಮುಖ್ಯಮಂತ್ರಿಯಾಗಿದ್ದೀನಿ, ಹಿಂದೆ ದೇವರಾಜು ಅರಸು ಅವರು ಜೈಲು ಮಂತ್ರಿಯಾಗಿ ಸಿಎಂ ಆಗಿದ್ದರು, ನೀನು ಮುಂದೆ ಮುಖ್ಯಮಂತ್ರಿಯಾಗ್ತಿಯಾ ತಗೋ ಬಂಧಿಖಾನೆ ಸಚಿವನಾಗು ಎಂದು ನನ್ನನ್ನು ಬಂಧಿಖಾನೆ ಸಚಿವನನ್ನಾಗಿ ಮಾಡಿದ್ದರು ಎಂದು ಮೆಲುಕು ಹಾಕಿದ್ದರು.

ಜೈಲು ಮಂತ್ರಿ ಟು ಸಿಎಂ ಆದವರು

ದೇವರಾಜು ಅರಸು: 1972 ರಿಂದ 1980ರವರೆಗೆ ರಾಜ್ಯದಲ್ಲಿ ಎರಡು ಬಾರಿ ಸಿಎಂ ಆಗಿದ್ದ ದೇವರಾಜು ಅರಸು ಅವರನ್ನು ಹಿಂದುಳಿದ ವರ್ಗಗಳ ಹರಿಕಾರರೆಂದೇ ಕರೆಯುತ್ತಾರೆ. ಭೂ ಸುಧಾರಣೆ & ಉಳುವವನೇ ಹೊಲದೊಡೆಯ ಕಾನೂನುಗಳನ್ನು ಜಾರಿಗೆ ತಂದು ಭೂಮಿ ಇಲ್ಲದವರಿಗೆ ಭೂಮಿ ಹಂಚಿದರು. ಅದಕ್ಕೂ ಮೊದಲು ಅವರು ಎಸ್​ ನಿಜಲಿಂಗಪ್ಪ ಸರ್ಕಾರದಲ್ಲಿ ಕಾರ್ಮಿಕ, ಸಾರಿಗೆ ಬಂಧಿಖಾನೆ ಸೇರಿ ಹಲವು ಖಾತೆಗಳನ್ನು ನಿಭಾಯಿಸಿದ್ದರು.
ಎಸ್​ ಬಂಗಾರಪ್ಪ: ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಸ್. ಬಂಗಾರಪ್ಪ ಅವರು ಬಂದೀಖಾನೆಯ ಜತೆಗೆ ಗೃಹಖಾತೆಯ ಸಚಿವರಾಗಿದ್ದರು. ಮುಂದೆ 1990ರಲ್ಲಿ ಸಿಎಂ ಆಗಿದ್ದರು.
ಡಿ.ಕೆ.ಶಿವಕುಮಾರ್: ಮುಂದಿನ ಎರಡ್ಮೂರು ದಿನಗಲ್ಲಿ ರಾಜ್ಯದ ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ್ ಅವರು ಎಸ್. ಬಂಗಾರಪ್ಪ 1990ರಿಂದ 1992ರ ಅವಧಿಯ ಅವರ ಸಂಪುಟದಲ್ಲಿ ಮೊದಲಿಗೆ ಬಂದೀಖಾನೆ ಸಚಿವರಾಗಿದ್ದರು. ಅದಾದ ಬಳಿಕ ಸುಮಾರು 36 ವರ್ಷಗಳ ಬಳಿಕ ಈಗ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ.
ಬಂಧಿಖಾನೆ ಸಚಿವರಾದವರು ಸಿಎಂ ಆಗ್ತಾರೆ ಎಂಬ ಬಂಗಾರಪ್ಪ ಅವರ ಮಾತು ಕಾಕಾತಾಳಿಯವಾದ್ರೂ ಡಿಕೆಶಿ ಅವರ ವಿಚಾರದಲ್ಲಿ ಸತ್ಯವಾಗುವ ಲಕ್ಷಣಗಳು ಕಾಣುತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net