ಚಿಕ್ಕಲ್ಲೂರಿನಲ್ಲಿ ರುದ್ರಾಕ್ಷಿ ಮಂಟಪೋತ್ಸವ ಅದ್ದೂರಿ

ಶ್ರೀ ಸಿದ್ದಪ್ಪಾಜಿ ದೇವಾಲಯ ಆವರಣದಲ್ಲಿ ನೆರೆದಿರುವ ಭಕ್ತರು.
ಶ್ರೀ ಸಿದ್ದಪ್ಪಾಜಿ ದೇವಾಲಯ ಆವರಣದಲ್ಲಿ ನೆರೆದಿರುವ ಭಕ್ತರು.
Published on
ಕೊಳ್ಳೇಗಾಲ: ಏಕತೆ, ಜಾತ್ಯತೀತತೆ, ಸೌಹಾರ್ದ ಹಾಗೂ ಸಮನ್ವಯ ಸಾರುವ ನೀಲಗಾರರ ಸಂಸ್ಕೃತಿ ಆಚರಣೆ ಮಾಡುವ ಚಿಕ್ಕಲ್ಲೂರಿನ ಶ್ರೀ ಸಿದ್ದಪ್ಪಾಜಿ ಜಾತ್ರೆ ಮಹೋತ್ಸವದಲ್ಲಿ ಮೂರನೇ ದಿನವಾದ ಸೋಮವಾರ ರುದ್ರಾಕ್ಷಿ ಮಂಟಪೋತ್ಸವ (ಮುಡಿಸೇವೆ) ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ರಾಜ ಬೊಪ್ಪೇಗೌಡನ ಪುರದ ಪೀಠಾಧಿಪತಿ ಶ್ರೀ ಜ್ಞಾನಾನಂದ ಚೆನ್ನರಾಜೇ ಅರಸ್ ಅವರು ದೇವರಿಗೆ ಮೊದಲು ಮುಡಿ ಕೂದಲನ್ನು ಅರ್ಪಿಸಿ ಆಚರಣೆಗೆ ಚಾಲನೆ ನೀಡಿದರು. ನಂತರ ಸಿದ್ದಪ್ಪಾಜಿ ಒಕ್ಕಲಿಗೆ ಸೇರಿದ ನೂರಾರು ಭಕ್ತರು ಶ್ರೀ ಸಿದ್ದಪ್ಪಾಜಿ ಗದ್ದುಗೆ ಸುತ್ತಲೂ ಮಹಿಳೆಯರು, ಪುರುಷರು, ಮಕ್ಕಳು ಸಿದ್ದಪ್ಪಾಜಿ ಗದ್ದುಗೆ ಸುತ್ತಲೂ ಉರುಳು ಸೇವೆ ಮಾಡಿದರು.

ದೇವರಿಗೆ ಮುಡಿಕಟ್ಟೆಯಲ್ಲಿ ತಲೆ ಕೂದಲನ್ನು ಸಮರ್ಪಿಸಿ ಹರಕೆ ಆಚರಣೆ ನೆರವೇರಿಸಿದರು. ಬಳಿಕ ಸ್ನಾನ ಮಾಡಿ ಮಡಿಯಾಗಿ ದೇವಾಲಯ ಮುಂಭಾಗ ಸಿದ್ದಪ್ಪಾಜಿಗೆ ಪ್ರಿಯವಾದ ಧೂಪ-ಕರ್ಪೂರ ಹಚ್ಚಿ ಕರವೆತ್ತಿ ಕೈಮುಗಿದು ಭಕ್ತಿ ಮೆರೆದರು. ಹೂ, ಹಣ್ಣು, ಕಾಯಿ ಸಮರ್ಪಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಈ ಪವಿತ್ರ ದಿನದಲ್ಲಿ ಒಕ್ಕಲಿಗೆ ಸೇರಿದ ಕುಟುಂಬದ ಹಿರಿಯ ಮಗನಿಗೆ ನೀಲಗಾರನ ದೀಕ್ಷೆ ನೀಡುವುದು ವಾಡಿಕೆಯಾಗಿದ್ದು, ಭಕ್ತರು ದೇವಾಲಯ ಆವರಣದಲ್ಲಿರುವ ಹೊನ್ನ ಹುತ್ತ ಮಂಟಪದಲ್ಲಿ ನೀಲಗಾರರ ದೀಕ್ಷೆ ಕೊಡಿಸಿದರು. ರಾತ್ರಿ ಗದ್ದುಗೆಗೆ ರಾಜ ಬೋಪೆಗೌಡನ ಪುರದ ಶ್ರೀ ಜ್ಞಾನಾನಂದ ಚೆನ್ನರಾಜೇ ಅರಸ್ ಅವರು ಗದ್ದುಗೆಗೆ ಪೂಜೆ ಸಲ್ಲಿಸಿ ರುದ್ರಾಕ್ಷಿ ಲಿಂಗ ಪ್ರತಿಷ್ಠಾಪನೆ ಮಾಡಿ ಸಿದ್ಧಪಡಿಸಿದ್ದ ರುದ್ರಾಕ್ಷಿ ಮಂಟಪಕ್ಕೆ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಮಾಡಲಾಯಿತು. ಸಾವಿರಾರು ನೀಲಗಾರರು ಜಾಗಟೆ, ಡೊಳ್ಳು, ತಮಟೆ, ಕಂಸಾಳೆ ಸದ್ದಿನಲ್ಲಿ ಕುರುಬನಕಟ್ಟೆ ಚೆನ್ನಯ್ಯ-ಲಿಂಗಯ್ಯ ಕಂಡಾಯಗಳು, ಸತ್ತಿಗೆ, ಸೂರಾಪಾನಿ, ಛತ್ರಿ, ಚಾಮರಗಳ ಸಮೇತ ಉತ್ಸವಕ್ಕೆ ಮೆರಗು ನೀಡಿತು.
ಸೇವೆ ದುಬಾರಿ : ದೇವಾಲಯ ಸಮೀಪದಲ್ಲಿದ್ದ ಹೊನ್ನ ಹುತ್ತದ ಮಂಟಪದ ಬಳಿ ನೀಲಗಾರರ ಧೀಕ್ಷೆ ಸೇವೆ ನೆರವೇರಿತು. ಮಠದ ಕಡೆಯಿಂದ ಧೀಕ್ಷೆ ಪಡೆಯಲು 610 ರೂ. ಶುಲ್ಕ ನಿಗದಿಪಡಿಸಲಾಗಿತ್ತು. ನೀಲಗಾರರ ಧಾರ್ಮಿಕ ವಿಧಿ-ವಿಧಾನದಲ್ಲಿ ಧೀಕ್ಷೆ ನೀಡಿದ ದೇವರು ಗುಡ್ಡರಿಗೆ 501 ರೂ. ಭಕ್ತರು ನೀಡಬೇಕಿತ್ತು. ದೀಕ್ಷೆ ಪಡೆದವರಿಗೆ ಜೋಳಿಗೆ, ಬೆತ್ತ, ಮಣಿ ನೀಡಲಾಗುತ್ತಿತ್ತು. ದೇವಾಲಯ ಆವರಣದಲ್ಲಿ ಕಜ್ಜಾಯ, ಕಲ್ಲುಸಕ್ಕರೆ, ತೀರ್ಥದ ಬಾಟಲಿ, ಕಪ್ಪು-ದೂಳ್ತಕ್ಕೆ 120 ರೂ. ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿತ್ತು. ಮುಡಿಗೆ 70.ರೂ ನಿಗದಿ ಪಡಿಸಲಾಗಿತ್ತು. ಮುಡಿಯ ಬಳಿಕ ಭಕ್ತರಿಂದ ಮುಡಿ ಮಾಡಿದವರು 50.ರೂ ಪಡೆಯುತ್ತಿದ್ದರು. 1 ಬಕೆಟ್ ಸ್ನಾನದ ಬಿಸಿ ನೀರಿಗಾಗಿ 30 ರೂ. ಟೆಂಡರ್‌ದಾರರು ನಿಗದಿಗೊಳಿಸಿದ್ದರು. ಮಠದ ವತಿಯಿಂದ ಸ್ನಾನದ ಮನೆಗಳು, ಶೌಚಗೃಹ ವ್ಯವಸ್ಥೆ ಮಾಡಲಾಗಿತ್ತು, ಭಕ್ತರ ಸಂಖ್ಯೆಯೂ ಹೆಚ್ಚಿದ್ದರಿಂದ ಭಕ್ತರು ಸಮೀಪಿದಲ್ಲಿದ್ದ ಚೆಕ್‌ಡ್ಯಾಮ್, ತೊಂಬೆಗಳಲ್ಲಿ ಸ್ನಾನ ಮಾಡಬೇಕಾಯಿತು.

7ರಂದು ಪಂಕ್ತಿ ಸೇವೆ:
ಐದು ದಿನಗಳ ಜಾತ್ರೆಯಲ್ಲಿ ಮೊದಲ ದಿನವಾದ ಚಂದ್ರ ಮಂಡಲದಲ್ಲಿ ಲಕ್ಷಕ್ಕೂ ಅಧಿಕ ಭಕ್ತರು ಜಾತ್ರೆ ಮಾಳದಲ್ಲಿ ನೆರೆದಿದ್ದರು. 2ನೇ ದಿನ ಹುಲಿವಾಹನ ಉತ್ಸವ (ದೊಡ್ಡವರ ಸೇವೆ), ಮೂರನೇ ದಿನ ರುದ್ರಾಕ್ಷಿ ಮಂಟಪೋತ್ಸವ (ಮುಡಿಸೇವೆ) ನಡೆದಿದೆ. ಇನ್ನು 4ನೇ ದಿನವಾದ ಪಂಕ್ತಿ ಸೇವೆ ಇರುವುದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ನಿರೀಕ್ಷೆ ಇದೆ.

ಚಿಕ್ಕಲ್ಲೂರು ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಹೈಕೋರ್ಟ್ ಆದೇಶದಂತೆ ಜಿಲ್ಲಾಡಳಿತ ಪ್ರಾಣಿ ಬಲಿಯಾಗದಂತೆ ಕಟ್ಟುನಿಟ್ಟಿನ ಸಕಲ ವ್ಯವಸ್ಥೆ ಮಾಡಿಕೊಂಡಿದೆ. ಜಾತ್ರೆ ಆರಂಭದ ದಿನದಿಂದಲೇ ಶ್ರೀ ಕ್ಷೇತ್ರ ಹೊರ ವ್ಯಾಪ್ತಿಯಲ್ಲಿ 4 ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಮಾರ್ಗದರ್ಶನದಲ್ಲಿ 600 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ , 2 ಕೆಎಸ್‌ಆರ್‌ಪಿ ತುಕಡಿ, 5 ಪೊಲೀಸ್ ಡಿಆರ್ ವಾಹನ , 200 ಗೃಹ ರಕ್ಷಕದಳ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಮಠದಲ್ಲಿ ಭಕ್ತರಿಗೆ ದಾಸೋಹ:
ಭಕ್ತರಿಗೆ ಹಳೇ ಮಠದಲ್ಲಿ 5 ದಿನಗಳ ಜಾತ್ರೆಯಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಪೂಜಾ ಕಾರ್ಯಗಳನ್ನು ಪೂರ್ಣ ಗೊಳಿಸಿದ ಬಳಿಕ ಭಕ್ತರು ಪ್ರಸಾದ ಸೇವೆನೆ ಮಾಡುತ್ತಿದ್ದಾರೆ.

ಬಿಡಾರದಲ್ಲಿ ತಂಗಿರುವ ಜನರು:
ಶ್ರೀ ಮಂಟೇಸ್ವಾಮಿ ಒಕ್ಕಲಿನ ಭಕ್ತರು ರಾಜ್ಯದ ನಾನಾ ಕಡೆಗಳಲ್ಲಿ ಇದ್ದಾರೆ. ಐದು ದಿನದ ಜಾತ್ರೆಗೆ ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಚನ್ನಪಟ್ಟಣ, ಹಾಸನ, ಚಿಕ್ಕಮಂಗಳೂರು, ಗುಲ್ಬರ್ಗ, ಯಾದಗಿರಿ, ಕೊಡೆಕಲ್ಲು ಇನ್ನಿತರ ಕಡೆಗಳಿಂದ ಆಗಮಿಸಿದ್ದು ದೇವಾಲಯ ಸುತ್ತಮುತ್ತಲು ಇರುವ ಬಿಡಾರಗಳಲ್ಲಿ ಟೆಂಟ್ ನಿರ್ಮಿಸಿ ಅಲ್ಲೇ ಉಳಿದುಕೊಂಡು ಸ್ವಾಮಿಗೆ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಾರೆ.
6ಕೆಜಿಎಲ್-1
ಚಿಕ್ಕಲ್ಲೂರಿನ ಶ್ರೀ ಸಿದ್ದಪ್ಪಾಜಿ ಜಾತ್ರೆಯ ಮೂರನೇ ದಿನವಾದ ಸೋಮವಾರ ಭಕ್ತರು ಮುಡಿಸೇವೆ ನೆರವೇರಿಸಿದರು.
6ಕೆಜಿಎಲ್-2: ದೇವಾಲಯ ಶ್ರೀ ಸಿದ್ದಪ್ಪಾಜಿ ಗದ್ದುಗೆ ಸುತ್ತ ಉರುಳು ಸೇವೆ ಮಾಡುತ್ತಿರುವ ಭಕ್ತರು.
6ಕೆಜಿಎಲ್-3: ದೇವಾಲಯ ಮುಂಭಾಗದಲ್ಲಿ ಭಕ್ತರು ಶ್ರೀ ಸಿದ್ದಪ್ಪಾಜಿಗೆ ಪ್ರಿಯವಾದ ಧೂಪ, ಕರ್ಪೂರ ಹಚ್ಚಿದರು.
6ಕೆಜಿಎಲ್-4: ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ದೇವಾಲಯದ ಸಮೀಪ ಹೊನ್ನ ಹುತ್ತ ಮಂಟಪದ ಬಳಿ ಒಕ್ಕಲಿನ ಮಕ್ಕಳಿಗೆ ನೀಲಗಾರರ ದೀಕ್ಷೆ ನೀಡಲಾಯಿತು.
6ಕೆಜಿಎಲ್-6: ಶ್ರೀ ಸಿದ್ದಪ್ಪಾಜಿ ದೇವಾಲಯ ಸುತ್ತಮುತ್ತಲ ಪ್ರದೇಶದಲ್ಲಿ ಭಕ್ತರು ತಂಗಿರುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net