CET ಪರೀಕ್ಷೆ ವೇಳೆ ಜನಿವಾರ ತೆಗೆಸಿದ ವಿವಾದ: ಮೂವರು ಸಿಬ್ಬಂದಿ ಅಮಾನತು..Bengaluru

Bengaluru
Bengaluru
Published on

ಪ್ರಮುಖ ಮುಖ್ಯಾಂಶಗಳು

  • ಏಪ್ರಿಲ್ 23ರಂದು ನಡೆದ ಸಿಇಟಿ ಸ್ ಪರೀಕ್ಷೆಯ ವೇಳೆ ಜನಿವಾರ ತೆಗೆಸಿ ವಿವಾದ
  • ಪರೀಕ್ಷಾ ಕೇಂದ್ರದ ಆವರಣದಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಯುವಂತೆ ಒತ್ತಾಯ ಆರೋಪ
  • ಮಗನ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೂರು
ಬೆಂಗಳೂರು: ಇಲ್ಲಿನ ಕಾಲೇಜೊಂದರಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಒತ್ತಾಯ ಪೂರ್ವಕವಾಗಿ ಜನಿವಾರ ತೆಗೆಸಿದ ಆರೋಪದ ಮೇರೆಗೆ ಮಡಿವಾಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಏಪ್ರಿಲ್​ 23ರಂದು ಶುಕ್ರವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) Karnataka Common Entrance Test ನಡೆಸಿತ್ತು. ಈ ವೇಳೆ ಕೃಪಾನಿಧಿ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಧರಿಸಿದ್ದ ಜನಿವಾರ ತೆಗೆಸಿದ್ದಾರೆ ಎಂದು ಅಭ್ಯರ್ಥಿಯ ಪೋಷಕರು ದೂರು ನೀಡಿದ್ದಾರೆ.

ಮೂವರ ಬಂಧನ

ಪೋಷಕರ ದೂರಿನ ಆಧಾರದ ಮೇಲೆ ಕಾಲೇಜಿನ ಉಪ ಪ್ರಾಂಶುಪಾಲ, ಪರೀಕ್ಷಾ ಮೇಲ್ವಿಚಾರಕ ಸುಧಾಕರ್​ ಮತ್ತು ಸಹಾಯಕಿ ಸರಿತಾ, ಕೊಠಡಿ ಮೇಲ್ವಿಚಾರಕಿ ಗಿರಿಜಾ ಎಂಬುವವರನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಪೋಷಕರಿಂದ ದೂರು

ಏಪ್ರಿಲ್ 23ರಂದು ಮಡಿವಾಳದ ಕೃಪಾನಿಧಿ ಕಾಲೇಜಿಗೆ ಸಿಇಟಿ ಭೌತಶಾಸ್ತ್ರ ಪರೀಕ್ಷೆ ಬರೆಯಲು ಪರೀಕ್ಷಾರ್ಥಿಯೊಬ್ಬರು ಆಗಮಿಸಿದ್ದರು. ಕಾಲೇಜು ಪ್ರವೇಶಾತಿ ವೇಳೆ ಭದ್ರತಾ ತಪಾಸಣೆ ನಡೆಸುತ್ತಿದ್ದ ಕಾಲೇಜಿನ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿದ್ಯಾರ್ಥಿ ಧರಿಸಿದ್ದ 'ಜನಿವಾರ'ವನ್ನು ತೆಗೆದು ಹಾಕುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ವರ್ತನೆಯು ತಮ್ಮ ಧಾರ್ಮಿಕ ನಂಬಿಕೆ ಮತ್ತು ಭಾವನೆಗಳಿಗೆ ತೀವ್ರ ಧಕ್ಕೆ ಉಂಟುಮಾಡಿದೆ ಎಂದು ವಿದ್ಯಾರ್ಥಿಯ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿ ಹೇಳಿದ್ದೇನು?

'ನಾನು ಪರೀಕ್ಷಾ ಕೇಂದ್ರಕ್ಕೆ ಹೋದಾಗ ಶಿಕ್ಷಕರು ನನ್ನ ಕಿವಿಯೋಲೆಯನ್ನು ತೆಗೆಸಿದರು. ಲೋಹದ ವಸ್ತುಗಳಿಗೆ ಅನುಮತಿಯಿಲ್ಲ ಎಂಬ ಕಾರಣಕ್ಕೆ ನಾನು ಅದನ್ನು ಒಪ್ಪಿಕೊಂಡೆ. ಆದರೆ, ನನ್ನ ದೇಹದ ಮೇಲಿದ್ದ ಪವಿತ್ರ ಜನಿವಾರವನ್ನೂ ತೆಗೆಯುವಂತೆ ಅವರು ನನ್ನನ್ನು ಒತ್ತಾಯಿಸಿದರು. ಬೇರೆ ದಾರಿಯಿಲ್ಲದೆ ಸೂಚನೆಯನ್ನು ಪಾಲಿಸಬೇಕಾಯಿತು' ಎಂದು ವಿದ್ಯಾರ್ಥಿ ಹೇಳಿದ.

ಸಚಿವ ಎಂ.ಸಿ. ಸುಧಾಕರ್ ಏನಂದ್ರು?

ಈ ಘಟನೆಯ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿರುವ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, "ಇದು ಅತ್ಯಂತ ದುರದೃಷ್ಟಕರ ಸಂಗತಿ. ಕಳೆದ ವರ್ಷವೂ ಬೀದರ್ ಮತ್ತು ಶಿವಮೊಗ್ಗದಲ್ಲಿ ಇಂತಹ ಘಟನೆಗಳು ನಡೆದಿದ್ದವು. ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಘಟನೆ ತಿಳಿಯುತ್ತಿದ್ದಂತೆಯೇ ಸಂಸ್ಥೆಯ ವಿರುದ್ಧ ದೂರು ದಾಖಲಿಸಲು ಸೂಚನೆ ನೀಡಲಾಗಿದ್ದು, ಈಗಾಗಲೇ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದರು.

ಹಿಂದೂ ವಿರೋಧಿ ಸರ್ಕಾರ

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಬಿಜೆಪಿ ನಾಯಕರಾದ ಆರ್​ ಅಶೋಕ್​, ತೇಜಸ್ವಿ ಸೂರ್ಯ ಶುಕ್ರವಾರ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿದರು. . ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕಾಲೇಜು ಸಿಬ್ಬಂದಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಕೃತ್ಯ ಮುಂದುವರಿದಿವೆ. ಈ ಹಿಂದೆ ಮಂಗಳಸೂತ್ರ ಮತ್ತು ಜನಿವಾರ ತೆಗೆಸಿದ್ದ ಸರ್ಕಾರ, ಈಗ ಮತ್ತೆ ಅದೇ ಕೆಲಸ ಮಾಡುತ್ತಿದೆ. ಒಂದು ಕಡೆ ರಂಜಾನ್ ಸಮಯದಲ್ಲಿ ಉರ್ದು ಶಾಲೆಗಳ ಸಮಯ ಬದಲಾಯಿಸುವ ಸರ್ಕಾರ, ಇನ್ನೊಂದೆಡೆ ಹಿಂದೂಗಳ ಧಾರ್ಮಿಕ ನಂಬಿಕೆಗಳ ಮೇಲೆ ದಾಳಿ ಮಾಡುತ್ತಿದೆ ಎಂದು ಆರ್​ ಅಶೋಕ್ ಆರೋಪಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net