ನಗರದ ದಂಡು ಮಂಡಳಿ ವ್ಯಾಪ್ತಿಯ ಮೂರು ಪ್ರಮುಖ ರಸ್ತೆಗಳನ್ನು ಸೇನೆಗೆ ಹಸ್ತಾಂತರಿಸುವ ಹಾಗೂ ಎರಡು ಪ್ರಮುಖ ರಸ್ತೆಗಳಲ್ಲಿ ಎತ್ತರದ ತಡೆಗೋಡೆ ನಿರ್ಮಿಸುವ ಪ್ರಸ್ತಾವ ಕೈಬಿಡುವಂತೆ ಆಗ್ರಹಿಸಿ ಸೋಮವಾರ ಸಿಇಒಗೆ ಬೆಳಗಾವಿ ದಂಡುಮಂಡಳಿ ನಿವಾಸಿಗಳ ಕಲ್ಯಾಣ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ರಸ್ತೆಗಳನ್ನು ಬಂದ್ ಮಾಡುವುದರಿಂದ ಹಾಗೂ ಎತ್ತರದ ತಡೆಗೋಡೆ ನಿರ್ಮಿಸುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಲಿದೆ. ಆದ್ದರಿಂದ ದಶಕಗಳಿಂದ ಸಾರ್ವಜನಿಕರು ಬಳಸುತ್ತಿರುವ ರಸ್ತೆಗಳಿಗೆ ಯಾವುದೇ ರೀತಿಯ ನಿರ್ಬಂಧ ವಿಧಿಸಬಾರದು. ಜುಲೈ 17ರಂದು ನಡೆದ ದಂಡು ಮಂಡಳಿ ಸಭೆ ನಿರ್ಣಯ ಸಂಖ್ಯೆ 26 ಮತ್ತು 27ರ ಅನ್ವಯ ಆಲ್ಬರ್ಟ್ ಎಕ್ಕಾ ರಸ್ತೆ, ಸ್ಮಾರ್ಟ್ ರಸ್ತೆ ಹಾಗೂ ಕ್ವೀನ್ಸ್ ಗಾರ್ಡನ್ ರಸ್ತೆಗಳನ್ನು ಸೇನೆಗೆ ಹಸ್ತಾಂತರಿಸುವ ಕುರಿತು ಸಾರ್ವಜನಿಕರ ಅಭಿಪ್ರಾಯ ಕೇಳಲಾಗಿದೆ. ಇದರ ಜತೆಗೆ ಇಂಡಿಪೆಂಡೆನ್ಸ್ ರಸ್ತೆ ಹಾಗೂ ಜಿಮ್ಖಾನಾ ರಸ್ತೆಯಲ್ಲಿ ಎತ್ತರದ ತಡೆಗೋಡೆ ನಿರ್ಮಿಸುವ ಪ್ರಸ್ತಾವ ಸಲ್ಲಿಸಲಾಗಿದೆ. ಇವೆರಡೂ ನಿರ್ಣಯಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಹೈಕೋರ್ಟ್, ಸುಪ್ರೀಂ ಕೋರ್ಟ್, ರಕ್ಷಣಾ ಸಚಿವಾಲಯ ಹಾಗೂ ಸೇನಾ ಮುಖ್ಯ ಕಚೇರಿಗಳ ಆದೇಶಗಳನ್ನು ಪಾಲಿಸಬೇಕು. ಸಾರ್ವಜನಿಕರ ಮನವಿಗೆ ಸೇನೆ ಹಾಗೂ ದಂಡು ಮಂಡಳಿ ಸ್ಪಂದಿಸಿ, ರಸ್ತೆ ಹಸ್ತಾಂತರ, ರಸ್ತೆ ಬಂದ್ ಹಾಗೂ ಎತ್ತರದ ತಡೆಗೋಡೆ ನಿರ್ಮಾಣದ ಪ್ರಸ್ತಾವಗಳನ್ನು ಕೈಬಿಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ದಂಡು ಮಂಡಳಿ ಮಾಜಿ ಸದಸ್ಯ ಸಾಜೀದ್ ಶೇಖ್, ರಾಯಲಾ ಶೇಖ್, ನಯನಾ ನೇರಲಿ, ಡಾ.ನಿತಿನ ಖೋತ, ರಂಜನ ಶೆಟ್ಟಿ, ಫಾರೂಕ್ ನವಾಬ್, ಅಜಯ ಪೈ ಇತರರಿದ್ದರು.