ತರಕಾರಿಗಳಿಗೆ ರಾಸಾಯನಿಕ ಸಿಂಪಡೆಣೆಗೆ ಕಡಿವಾಣ - ಸಚಿವ ಯು.ಟಿ. ಖಾದರ್

Health Minister U.T. Khader, Health Department Principal Secretary Ritwik Ranjanam Pandey, Food Safety Department Commissioner K. Srinivas and others were present at the press conference held at the city's Arogya Soudha on Wednesday.
Health Minister U.T. Khader, Health Department Principal Secretary Ritwik Ranjanam Pandey, Food Safety Department Commissioner K. Srinivas and others were present at the press conference held at the city's Arogya Soudha on Wednesday.
Published on

ಪ್ರಮುಖ ಮುಖ್ಯಾಂಶಗಳು

  • - ಇ ಕಾಮರ್ಸ್ ಸಂಸ್ಥೆಗಳಿಗೆ ನೋಟಿಸ್ ಜಾರಿ

ಬೆಂಗಳೂರು: ಮಾರುಕಟ್ಟೆಗಳಲ್ಲಿ ತರಕಾರಿಗಳ ತಾಜಾತನ ಕಾಯ್ದುಕೊಳ್ಳಲು ರಾಸಾಯನಿಕಗಳನ್ನು ಸಿಂಪಡಣೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು.

ಈ ಕುರಿತು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇ ಕಾಮರ್ಸ್ ಕಂಪನಿಗಳು ಹಾಗೂ ಸೂಪರ್ ಮಾರುಕಟ್ಟೆಯಲ್ಲಿ ಸಿಗುವ ತರಕಾರಿಗಳು ಸಾಮಾನ್ಯವಾಗಿ ಹೊಳೆಯುತ್ತಿರುತ್ತವೆ. ಇದಕ್ಕೆ ಜನರು ಮರುಳಾಗಿ ಖರೀದಿಸುತ್ತಾರೆ. ಆದರೆ ಇಂತಹ ಪದಾರ್ಥಗಳಿಗೆ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ ಎಂಬ ದೂರುಗಳು ಇವೆ. ಹಾಗಾಗಿ ಜನರ ಆರೋಗ್ಯದ ದೃಷ್ಟಿಯಿಂದ ಇಂತಹ ತರಕಾರಿಗಳನ್ನೂ ಪರಿಶೀಲಿಸಲಾಗುವುದು ಎಂದರು.
ಇದೇ ವೇಳೆ ನಿಷೇಧಿತ ಆಹಾರ ಹಾಗೂ ವಿಷಾಹಾರಗಳನ್ನು ಇ ಕಾಮರ್ಸ್ ಕಂಪನಿಗಳು ಪೂರೈಕೆ ಮಾಡಿದ್ದಲ್ಲಿ, ಅವುಗಳ ಪರವಾನಗಿಯನ್ನು ಅಮಾನತು ಮಾಡುವ ಸಂಪೂರ್ಣ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದರು.

ಇ ಕಾಮರ್ಸ್ ಸಂಸ್ಥೆಗಳಿಗೆ ನೋಟಿಸ್ ಜಾರಿ:

ನಿಷೇಧಿತ ದತ್ತೂರಿ ಹಣ್ಣು ಮತ್ತು ಬೀಜಗಳನ್ನು ಕಾನೂನು ಬಾಹಿರವಾಗಿ ಮಾರುತ್ತಿದ್ದ ಇ-ಕಾಮರ್ಸ್ ಕಂಪನಿಗಳ ಆಹಾರ ಪರವಾನಗಿಯನ್ನು ಅಮಾನತು ಮಾಡುವಂತೆ ರಾಜ್ಯದಲ್ಲಿರುವ ಕೇಂದ್ರ ಆಹಾರ ಸುರಕ್ಷತೆ ಅಂಕಿತಾಧಿಕಾರಿಗೆ ಪತ್ರ ಬರೆಯಲಾಗಿದೆ. ಆದರೆ, ಇಲ್ಲಿನ ಅಧಿಕಾರಿ ಸ್ಪಂದಿಸಲಿಲ್ಲ. ಆದ್ದರಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಮುಖ್ಯಸ್ಥರಿಗೆ ಕ್ರಮಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ. ಅವರು ಇ ಕಾಮರ್ಸ್ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದ್ದು, ಪರವಾನಗಿ ಅಮಾನತುಗೊಳಿಸುವ ಕಾನೂನು ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈಗಾಗಲೇ ಬೆಂಗಳೂರು ಮೂಲದ ಎಸ್‌ವಿಆರ್ ಗ್ರೂಪ್ಸ್‌ನ ಪರವಾನಗಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು
ಪರವಾನಗಿ ಅಮಾನತು ಅಧಿಕಾರ ರಾಜ್ಯಗಳಿಗೆ ನೀಡಬೇಕು:
ಸದ್ಯ 50 ಕೋಟಿ ರೂ. ಅಧಿಕ ವಹಿವಾಟ ನಡೆಸುತ್ತಿರುವ ಕಂಪನಿಗಳ ಪರವಾನಗಿ ರದ್ದುಮಾಡುವ ಅಧಿಕಾರ ಕೇಂದ್ರದ ವ್ಯಾಪ್ತಿಗೆ ಬರಲಿದೆ. ಅದಕ್ಕಿಂತ ಕಡಿಮೆ ವಹಿವಾಟಿನ ಕಂಪನಿಗಳನ್ನು ಮಾತ್ರ ರಾಜ್ಯ ಸರ್ಕಾರ ನಿಯಂತ್ರಿಸಬಹುದಾಗಿದೆ. ಪರವಾನಗಿ ನೀಡುವ ಅಧಿಕಾರ ಕೇಂದ್ರದ ಬಳಿ ಇದ್ದರೂ, ನಿಯಮ ಉಲ್ಲಂಘಿಸಿದಲ್ಲಿ ಪರವಾನಗಿ ಅಮಾನತು ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ನೀಡಬೇಕು ಎಂದು ಸಚಿವರು ಆಗ್ರಹಿಸಿದರು.
ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ, ಆಹಾರ ಸುರಕ್ಷತೆ ಇಲಾಖೆ ಆಯುಕ್ತ ಕೆ. ಶ್ರೀನಿವಾಸ ಇತರರು ಉಪಸ್ಥಿತರಿದ್ದರು.

ನೆಸ್ಲೆ ಸಂಸ್ಥೆಯು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್) ಒಂದು ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ನೀಡಲು ಮುಂದೆ ಬಂದಿದೆ. ಯಾರಿಗೆ ಈ ತರಬೇತಿ ನೀಡಬೇಕು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು.

— - ಆರೋಗ್ಯ ಸಚಿವ ಯು.ಟಿ. ಖಾದರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net