ಹಳೆಯ ಪಿಂಚಣಿ ಯೋಜನೆ ಮರುಸ್ಥಾಪಿಸಿ-Old pension

 ಡಾ.ಚಿರಂಜೀವಿ ಸಿಂಗ್
ಡಾ.ಚಿರಂಜೀವಿ ಸಿಂಗ್
Published on
ಬೆಂಗಳೂರು: ನಿವೃತ್ತ ಸರ್ಕಾರಿ ನೌಕರರ ಅನುಕೂಲಕ್ಕಾಗಿ ಹಳೆಯ ಪಿಂಚಣಿ ಯೋಜನೆಯನ್ನು ಸರ್ಕಾರ ಮರು ಜಾರಿಗೊಳಿಸಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಚಿರಂಜೀವಿ ಸಿಂಗ್ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ವತಿಯಿಂದ ಕಬ್ಬನ್ ಪಾರ್ಕ್‌ನ ನೌಕರರ ಸಂಘದ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ‘ಹಿರಿಯ ನಾಗರಿಕ ಸಮಸ್ಯೆಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ದೇಶದ ಹಲವು ರಾಜ್ಯಗಳಲ್ಲಿ ಹಳೇ ಪಿಂಚಣಿ ಯೋಜನೆ ಮುಂದುವರಿಸಲಾಗಿದೆ. ರಾಜ್ಯದಲ್ಲಿಯೂ ಈ ಯೋಜನೆಯನ್ನು ಮರು ಜಾರಿಗೆ ತರಬೇಕು ಎಂದು ಹೇಳಿದರು.
ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ಎಲ್. ಭೈರಪ್ಪ ಮಾತನಾಡಿ, ನಮ್ಮ ರಾಜ್ಯದಲ್ಲಿ 90 ವರ್ಷ ಮೇಲ್ಪಟ್ಟ ನೌಕರರು ಕೂಡ ನೋಂದಣಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ನಿವೃತ್ತ ನೌಕರರಿಗೆ ನೀಡುತ್ತಿರುವ ಸೌಲಭ್ಯವನ್ನು ರಾಜ್ಯ ಸರ್ಕಾರ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ನೌಕರರ ಹಾಗೂ ಅವರ ಕುಟುಂಬದವರಿಗೆ ಅನುಕೂಲವಾಗಲು ಜಿಲ್ಲಾ ಕೇಂದ್ರಗಳಲ್ಲಿ ಶೇ.25 ರಿಯಾಯಿತಿ ದರದಲ್ಲಿ ನೌಕರರ ಕ್ಯಾಂಟೀನ್ ಆರಂಭಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದರಿಂದ 4.50 ಲಕ್ಷ ನೌಕರರಿಗೆ ಅನುಕೂಲವಾಗಲಿದೆ. ರಾಜ್ಯ ಸರ್ಕಾರಕ್ಕೆ ಕೇಂದ್ರದ 7ನೇ ವೇತನ ಆಯೋಗದ ಶಿಫಾರಸ್ಸು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದ್ದೇವೆ. ಇದು ಜಾರಿಯಾದರೆ 9 ಲಕ್ಷ ನೌಕರರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
75 ವರ್ಷ ಮೇಲ್ಪಟ್ಟ ನಿವೃತ್ತ ನೌಕರರನ್ನು ಅಭಿನಂದಿಸಲಾಯಿತು. ನಿವೃತ್ತ ಪೋಲಿಸ್ ಅಧಿಕಾರಿ ಬೆಟ್ಟೇಗೌಡ, ವಿಕಲಚೇತನ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕ ಡಾ.ಅಶೋಕ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net