ವಿಧಾನಸೌಧ ಮುಂಭಾಗ ನೇತಾಜಿ ಪ್ರತಿಮೆ ಮರುಸ್ಥಾಪನೆ

ವಿಧಾನಸೌಧ ಮುಂಭಾಗ ನೇತಾಜಿ ಪ್ರತಿಮೆ ಮರುಸ್ಥಾಪನೆ
ವಿಧಾನಸೌಧ ಮುಂಭಾಗ ನೇತಾಜಿ ಪ್ರತಿಮೆ ಮರುಸ್ಥಾಪನೆ
Published on
ಬೆಂಗಳೂರು: ವಿಧಾನಸೌಧದ ಪೂರ್ವ ದಿಕ್ಕಿನಲ್ಲಿ ಮರುಪ್ರತಿಷ್ಠಾಪನೆ ಮಾಡಿರುವ ನೇತಾಜಿ ಸುಭಾಷ್‌ಚಂದ್ರ ಬೋಸ್ (Netaji statue) ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಅನಾವರಣಗೊಳಿಸಿದರು. ಶುಕ್ರವಾರ ಬೋಸ್ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನ ಮಾಡಿ 2001ರ ಜ. 22ರಂದು ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ನಮ್ಮ ಮೆಟ್ರೋ ರೈಲು ಕಾಮಗಾರಿ ನಿಮಿತ್ತ ತಾತ್ಕಾಲಿಕವಾಗಿ ವಿಧಾನಸೌಧ ಮುಂಭಾಗದ ಪಂಡಿತ್ ಜವಾಹರಲಾಲ್ ನೆಹರು, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಸುಭಾಷ್‌ಚಂದ್ರ ಬೋಸ್ ಪ್ರತಿಮೆಗಳನ್ನು ಸ್ಥಳಾಂತರ ಮಾಡಲಾಗಿತ್ತು. ಮೆಟ್ರೋ ಕಾಮಗಾರಿ ಪೂರ್ಣಗೊಂಡ ಆನಂತರ ಹಾಲಿ ಇದ್ದ ಜಾಗದಲ್ಲಿ ಪ್ರತಿಮೆಗಳ ಯಥಾಸ್ಥಿತಿಯಲ್ಲಿ ಪುನರ್ ನಿರ್ಮಿಸಿ ಕೊಡುವ ಜವಾಬ್ದಾರಿಯನ್ನು ಮೆಟ್ರೋ ರೈಲು ನಿಗಮ ವಹಿಸಿತ್ತು. ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆಯಲ್ಲಿ ಹಣವನ್ನು ಠೇವಣಿ ಇರಿಸಿತ್ತು.
ನೆಹರು ಪ್ರತಿಮೆ ಮರುಸ್ಥಾಪನೆ ಮಾಡಲಾಗಿತ್ತು. ಆದರೆ ಬೋಸ್ ಪ್ರತಿಮೆ ಸಾಧ್ಯವಾಗಿರಲಿಲ್ಲ. 2025ರ ಜೂ. 21ರಂದು ಮೆಟ್ರೋ ರೈಲು ನಿಗಮದಿಂದ ನಿರಾಕ್ಷೇಪಣಾ ಪತ್ರ ಲಭ್ಯವಾದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸುಭಾಷ್‌ಚಂದ್ರ ಬೋಸ್ ಪ್ರತಿಮೆಯನ್ನು ಹಿಂದಿನ ಸ್ಥಳದಲ್ಲಿ ಮರುಪ್ರತಿಷ್ಠಾಪಿಸಲು ಮೆ.ಎಂ. ಬಾಬು ಆ್ಯಂಡ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಗುತ್ತಿಗೆ ನೀಡಿದ ಸರ್ಕಾರ, ಜನವರಿ 23ರಂದು ಸುಭಾಷ್ ಚಂದ್ರ ಬೋಸ್ ಜನ್ಮದಿನ ಅಂಗವಾಗಿ ಅಷ್ಟೊತ್ತಿಗೆ ಕಾಮಗಾರಿ ಪೂರ್ಣ ಮಾಡಬೇಕೆಂದು ಷರತ್ತು ವಿಧಿಸಿತ್ತು. ಸವಾಲಾಗಿ ಸ್ವೀಕರಿಸಿದ ಗುತ್ತಿಗೆ ಕಂಪನಿ ಕಲ್ಲಿನ ಪೀಠ, ಸುತ್ತಮುತ್ತಲಿನ ಉದ್ಯಾನವನ, ವಿದ್ಯುತ್ ಅಲಂಕಾರ ಮತ್ತು 3.95 ಮೀಟರ್ ಕಂಚಿನ ಪ್ರತಿಮೆಯನ್ನು ಮರುಸ್ಥಾಪಿಸಿ ಪೂರ್ಣಗೊಳಿಸಿತ್ತು.
ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಗುಣಮಟ್ಟ ಕಾಮಗಾರಿ ಮತ್ತು ಷರತ್ತು ಪಾಲಿಸಿದ ಗುತ್ತಿಗೆ ಕಂಪನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೆ.ಎಂ. ಬಾಬು ಆ್ಯಂಡ್ ಕಂಪನಿ ಈ ಮೊದಲು ನೆಹರು, ಡಾ. ಅಂಬೇಡ್ಕರ್ ಪ್ರತಿಮೆ ಸೇರಿದಂತೆ ಹಲವು ಕಾಮಗಾರಿ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net