ಅಕ್ರಮ ಮರಳು ದಂಧೆ ನಿಯಂತ್ರಣ ಪೊಲೀಸರ ಹೆಗಲಿಗೆ

ಅಕ್ರಮ ಮರಳು ಗಣಿಗಾರಿಕೆ ಚಿತ್ರ
ಅಕ್ರಮ ಮರಳು ಗಣಿಗಾರಿಕೆ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪರವಾನಗಿ ಇಲ್ಲದೆ ಮರಳು ಸಾಗಣೆದಾರರ ವಿರುದ್ಧ ಗೂಂಡಾ ಕಾಯ್ದೆ
  • ರಾಜ್ಯದ ಮರಳು ಗಡಿ ರಾಜ್ಯಗಳಿಗೆ ಸಾಗಣೆ
  • ನಿರ್ಲಕ್ಷ್ಯ ವಹಿಸುವ ಪೊಲೀಸರ ಮೇಲೆ ಶಿಸ್ತು ಕ್ರಮ
  • ಮರಳು ಗಣಿಗಾರಿಕೆ ದಂಧೆಯಲ್ಲಿ ಅಧಿಕಾರಿಗಳು ಶಾಮಿಲು!
ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಅಕ್ರಮ ಮರಳು ಗಣಿಗಾರಿಕೆ ದಂಧೆ ನಿಯಂತ್ರಣ ಈಗ ಪೊಲೀಸರ ಹೆಗಲಿಗೆ ಬಿದ್ದಿದೆ.
ಅಕ್ರಮ ನಡೆಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲು ವಿಲವಾಗಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಟಾಸ್ಕ್‌ಪೋರ್ಸ್ ಸಮಿತಿ ಕಾರ್ಯವೈಖರಿಯಿಂದ ಮರಳು ಗಣಿಗಾರಿಕೆ ಮತ್ತು ಅನಧಿಕೃತ ಸಾಗಾಣಿಕೆಯಿಂದ ಕಾನೂನು ಸುವ್ಯವಸ್ಥೆ, ಪರಿಸರ ಸಂರಕ್ಷಣೆ ಹಾಗೂ ಸರ್ಕಾರದ ಆದಾಯಕ್ಕೆ ದೊಡ್ಡ ಮಟ್ಟದ ಹಾನಿ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕೃಷ್ಣಾ, ಕಾವೇರಿ, ತುಂಗಭದ್ರಾ ಸೇರಿ ನದಿ ಪಾತ್ರದಲ್ಲಿ ಹೆರಳವಾಗಿ ದೊರೆಯುವ ಮರಳು ನೆರೆಯ ರಾಜ್ಯಗಳಿಗೆ ರಾತ್ರೋ ರಾತ್ರಿ ಸಾಗಣೆ ಮಾಡಲಾಗುತ್ತಿದೆ.

ಗೊಂಡಾ ಕಾಯ್ದೆಯಡಿ ಪ್ರಕರಣ:

ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣಿಕೆಗೆ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುವಂತೆ ಸೂಚಿಸಿರುವ ರಾಜ್ಯ ಪೊಲೀಸ್ ಮಹಾನಿದೇರ್ಶಕ ಡಾ.ಎಂ.ಎ.ಸಲೀಂ ಅವರು, ಎಲ್ಲ ಪೊಲೀಸ್ ಘಟಕಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಯಾವುದೇ ವಿನಾಯಿತಿ ನೀಡದೆ ಪದೇ ಪದೇ ಮರಳು ದಂಧೆಯಲ್ಲಿ ತೋಡಗುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಪರವಾನಗಿ ಇಲ್ಲದೆ ಮರಳು ಸಾಗಣೆ, ಸಂಗ್ರಹಣೆ ಹಾಗೂ ಸ್ಥಳೀಯ ಮತ್ತು ಅಂತರ್ ರಾಜ್ಯಗಳಿಗೆ ಮರಳು ಸಾಗಾಣಿಕೆ ಮಾಡುತ್ತಿರುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಈ ಅಕ್ರಮ ಚಟುವಟಿಕೆಗಳು ಮುಂದುವರಿದಿರುವ ಬಗ್ಗೆ ದೂರುಗಳು ಬರುತ್ತಿರುವುದರಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯಲ್ಲಿ ಪೊಲೀಸ್ ಆಯುಕ್ತರು ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸದಸ್ಯರಾಗಿದ್ದು, ತಾಲೂಕು ಮಟ್ಟದಲ್ಲಿ ಸಹಾಯಕ ಆಯುಕ್ತ (ಕಂದಾಯ) ಅಧ್ಯಕ್ಷತೆಯ ಟಾಸ್ಕ್‌ಫೋರ್ಸ್‌ನಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಅಥವಾ ಸಬ್‌ಇನ್‌ಸ್ಪೆಕ್ಟರ್ ಸದಸ್ಯರಾಗಿದ್ದಾರೆ. ಈ ಸಮಿತಿಗಳು ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅಕ್ರಮ ಮರಳು ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಯುವ ಜವಾಬ್ದಾರಿ ಹೊಂದಿವೆಯಾದರು ಎಲ್ಲ ಕಡೆ ವ್ಯಾಪಕವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ.

ಪ್ರಮುಖ ನಿರ್ದೇಶನಗಳು:

  • ಅಕ್ರಮ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ತಡೆಯುವ ಸಂಬಂಧ ಪೊಲೀಸ್ ಘಟಕ ವ್ಯಾಪ್ತಿಯಲ್ಲಿನ ಅಕ್ರಮ ಮರಳು ಗಣಿಗಾರಿಕೆ ಪ್ರದೇಶಗಳನ್ನು ಗುರುತಿಸಿ, ಅವುಗಳ ಮೇಲೆ ನಿರಂತರ ನಿಗಾ ವಹಿಸುವ ಮೂಲಕ ದಾಳಿ ನಡೆಸಿ ಕ್ರಮ ಕೈಗೊಳ್ಳುವುದು.
  • ಅಂತರ್ ರಾಜ್ಯ ಗಡಿಗಳಲ್ಲಿರುವ ತಪಾಸಣಾ ಕೇಂದ್ರಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಕ್ರಮ ಮರಳು ಸಾಗಾಣಿಕೆ ನಿಯಂತ್ರಣ ಮಾಡಬೇಕಾಗಿದೆ. ಅಲ್ಲದೇ ತಪಾಸಣಾ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳ ಕೊರತೆ ಕಂಡು ಬಂದರೆ ಸರ್ಕಾರದ ಗಮನಕ್ಕೆ ತರಬೇಕು.
  • ಪ್ರತಿ ತಿಂಗಳ ಅಪರಾಧ ಪರಿಶೀಲನಾ ಸಭೆಯಲ್ಲಿ ಠಾಣಾವಾರು ಅಕ್ರಮ ಮರಳು ಪ್ರಕರಣಗಳನ್ನು ಪರಿಶೀಲಿಸಿ, ಅಧೀನ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಬೇಕು.
  • ಜಿಲ್ಲಾ ಮತ್ತು ತಾಲೂಕು ಮಟ್ಟದ ಟಾಸ್ಕ್‌ಫೋಸ್ ಸಭೆಗಳನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಸಿ ಮರಳು ಸಾಗಣೆ ಕುರಿತು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಬೇಕು.
  • ಅಕ್ರಮ ಮರಳು ಜಾಲದ ಕುರಿತು ಗುಪ್ತಚರ ಮಾಹಿತಿ ಸಂಗ್ರಹಿಸಿ, ದಿಢೀರ್ ದಾಳಿ ನಡೆಸುವುದು, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
  • ತಮ್ಮ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ತಡೆಯುವಲ್ಲಿ ವಿಫಲವಾಗುವ ಪೊಲೀಸ್ ಘಟಕದ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಿಜಿಪಿ ಡಾ. ಎಂ.ಎ. ಸಲೀಂ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಕುರಿತು ಇತ್ತೀಚೆಗೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ಅಥವಾ ಎಸ್‌ಐಟಿ ಮೂಲಕ ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net