ಒಂದೇ ಪ್ರಕರಣಕ್ಕೆ 2 ಬಾರಿ ರಾಜೀನಾಮೆ! ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಸಚಿವ ನಾಗೇಂದ್ರ ತಲೆದಂಡ

nagendra
nagendra
Published on

ಪ್ರಮುಖ ಮುಖ್ಯಾಂಶಗಳು

  • ಪಕ್ಷಕ್ಕೆ ಮುಜುಗರ ಮಾಡಬಾರದು ಎನ್ನುವ ದೃಷ್ಟಿಯಿಂದ ಸಚಿವ ಸ್ಥಾನಕ್ಕೆ ನನ್ನ ಸ್ವ ಇಚ್ಛೆಯಿಂದ ರಾಜೀನಾಮೆ
  • ಶೂದ್ರರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರನ್ನು ಕಂಡರೆ ಬಿಜೆಪಿಗೆ ಆಗುವುದಿಲ್ಲ.
ಬೆಂಗಳೂರು:
ಯೋಜನೆ ಮತ್ತು ಸಾಂಖ್ಯಿಕ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ಅವರು, ಕಣ್ಣೀರಿಡುತ್ತಲೇ ರಾಜೀನಾಮೆ ನೀಡಿದ್ದಾರೆ.
ಒಂದೇ ಪ್ರಕರಣಕ್ಕೆ ಎರಡು ಬಾರಿ ರಾಜೀನಾಮೆ ನೀಡಿದ ವಿಶೇಷತೆಯೂ ನಾಗೇಂದ್ರ ಅವರ ಪಾಲಿಗೆ ಸೇರಿದೆ.
ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ನಾಗೇಂದ್ರ ಅವರು, 2024 ಜೂನ್ 6 ರಂದು ಇದೇ ವಾಲ್ಮಿಕಿ ನಿಗಮದ 187 ಕೋಟಿ ರೂ ಹಗರಣಕ್ಕೆ ಸಂಬಂದಿಸಿದಂತೆ ರಾಜೀನಾಮೆ ನೀಡಿದ್ದರು. ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಆ.3ರಂದು ಸಂಪುಟ ಸೇರಿದ್ದ ಬಿ.ನಾಗೇಂದ್ರ ಅವರು, ತಿಂಗಳು ತುಂಬುವ ಮುನ್ನವೇ ಮತ್ತೊಮ್ಮೆ ರಾಜೀನಾಮೆ ನೀಡಿದ್ದಾರೆ.
ಬಿ.ನಾಗೇಂದ್ರ ಅವರು ಸಂಪುಟಕ್ಕೆ ಸೇರಿದ ದಿನದಿಂದಲೂ ವಾಲ್ಮಿಕಿ ಪ್ರಕರಣವನ್ನು ಪ್ರಸ್ತಾಪಿಸಿ ರಾಜೀನಾಮಗೆ ಒತ್ತಾಯಿಸುತ್ತಿದ್ದ ಪ್ರತಿಪಕ್ಷಗಳು, ವಿಧಾನಸಭೆ ಅಧಿವೇಶನದ ವೇಳೆ ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ನಿರಂತರ ಪ್ರತಿಭಟನೆ ನಡೆಸಿದ್ದವು. ಬಳ್ಳಾರಿ ಜಿಲ್ಲೆಯಲ್ಲಿ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಒತ್ತಡ ತಂತ್ರವನ್ನು ಅನುಸರಿಸುತ್ತಿದ್ದ ಪ್ರತಿಪಕ್ಷಗಳ ಒತ್ತಾಯಕ್ಕೆ ಅಂತೂ ಬಿ.ನಾಗೇಂದ್ರ ಅವರ ತಲೆದಂಡವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ನಾಗೇಂದ್ರ ಹೇಳಿದ್ದು ಇಷ್ಟು...
ಪಕ್ಷಕ್ಕೆ ಮುಜುಗರ ಮಾಡಬಾರದು ಎನ್ನುವ ದೃಷ್ಟಿಯಿಂದ ಸಚಿವ ಸ್ಥಾನಕ್ಕೆ ನನ್ನ ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ. ಇಂದೇ ಮುಖ್ಯಮಂತ್ರಿಗಳಿಗೆ ನನ್ನ ರಾಜೀನಾಮೆ ಪತ್ರವನ್ನು ಕೊಡುತ್ತಿದ್ದೇನೆ ಎಂದು ಕಿಕ್ಕಿರಿದ ಸುದ್ದಿಗೋಷ್ಠಿಯಲ್ಲಿ ಗದ್ಗದಿತರಾಗಿ ೋಷಣೆ ಮಾಡಿದ ಅವರು, ನಾನೊಬ್ಬ ಪರಿಶಿಷ್ಟ ಪಂಗಡದವ ಎನ್ನುವ ಕಾರಣಕ್ಕಾಗಿಯೇ ರಾಜೀನಾಮೆಗೆ ಒತ್ತಾಯಿಸಲಾಗುತ್ತಿದೆ. ಈ ಪ್ರಕರಣವನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ ಎಂದು ಹೇಳಿದರು.
ಉತ್ತರಕಾಂಡದಲ್ಲಿ ಮನುವಾದಿಗಳು ಕುತಂತ್ರ ಮಾಡಿ ಶಂಭುಕನನ್ನು ಹತ್ಯೆ ಮಾಡಿದ ಉದಾಹರಣೆ ನಮ್ಮ ಮುಂದೆ ಇದೆ. ಅದೇ ಮನವಾದಿಗಳು ಇಂದು ಮನುಸ್ಮತಿಯೇ ಸಂವಿಧಾನ ಎಂದು ವಿಜೃಂಬಿಸುತ್ತಿದ್ದು ಕುತಂತ್ರ ಮಾಡುತ್ತಲೇ ಇದ್ದಾರೆ. ಆದರೆ ಈಗ ಶಂಭುಕ ಹತ್ಯೆಯಾಗುವುದಿಲ್ಲ. ಯಾಕೆಂದರೆ ಇಲ್ಲಿ ಈಗ ಡಾ.ಬಾಬಾ ಸಹೇಬ ಅಂಬೇಡ್ಕರ್ ಅವರ ಸಂವಿಧಾನ ನಮ್ಮ ರಕ್ಷಣೆಗೆ ಇದೆ ಎಂದು ಹೇಳಿದರು.
ಶೂದ್ರರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರನ್ನು ಕಂಡರೆ ಬಿಜೆಪಿಗೆ ಆಗುವುದಿಲ್ಲ. ಹಾಗಾಗಿ ಸದಾ ಕುತಂತ್ರ ಮಾಡುತ್ತಲೇ ಇರುತ್ತಾರೆ. ಸದನದಲ್ಲಿ ನೋಟೀಸ್ ಕೊಡಿ ಚರ್ಚೆ ಮಾಡೋಣ ಎಂದರೂ ಕೇಳಲಿಲ್ಲ. ಸದನ ನಡೆಸಲು ಬಿಡಲಿಲ್ಲ. ಸಿಎಂ, ಡಿಸಿಎಂ ಮತ್ತು ಸಚಿವರುಗಳು ವಿನಂತಿ ಮಾಡಿದರೂ ಒಪ್ಪಲಿಲ್ಲ. ಬರ, ಕೆಪಿಎಸ್ಸಿ ಹಗರಣ, ಕಸ್ತೂರಿ ರಂಗನ್ ವರದಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಅಧಿವೇಶನವನ್ನು ಹಾಳು ಮಾಡಿದರು ಎಂದು ದೂರಿದರು.
ನನ್ನ ನೋಟ್ ಶೀಟ್ ಇಲ್ಲ:
ಇಡೀ ಪ್ರಕರಣದಲ್ಲಿ ನನ್ನ ಲಿಖಿತ ಸೂಚನೆ, ಆದೇಶ, ನೋಟ್ ಶೀಟ್ ಯಾವುದೂ ಇಲ್ಲ. ಆದರೂ ಹಗರಣ ಎಂದು ಹೇಳುತ್ತಿರುವುದರಲ್ಲಿ ಯಾವುದೇ ಸತ್ಯವಿಲ್ಲ. ಬ್ಯಾಂಕ್‌ನಲ್ಲಿ ಆಗಿದ್ದ ವ್ಯತ್ಯಾಸದ ಹಣ ಮರು ಪಾವತಿಯಾಗಿದೆ. ಎಸ್‌ಐಟಿ, ಸಿಐಡಿ ತನಿಖೆ ಎಲ್ಲವೂ ಆಗಿದೆ. ಮೊದಲ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರಿಲ್ಲ. 2ನೇ ಬಾರಿ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರು ಬಲವಂತವಾಗಿ ಸೇರಿಸಿದ್ದರು. ನನ್ನ ಸಿಕ್ಕಿಸಲೇಬೇಕು ಎಂದು ಕುತಂತ್ರ ಮಾಡಲಾಗಿತ್ತು ಎಂದು ಹೇಳಿದರು.
ಎಚ್ಡಿಕೆಗೆ ಪ್ರಾಸಿಕ್ಯೂಷನ್ ಯಾಕಿಲ್ಲ?
ನನ್ನ ಮೇಲೆ ಪ್ರಾಸಿಕ್ಯೂಷನ್‌ಗೆ ಕೊಡಲು ಹೊರಟಿರುವ ರಾಜ್ಯಪಾಲರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ದ ಪ್ರಾಸಿಕ್ಯೂಷನ್‌ಗೆ ಯಾಕೆ ಇನ್ನೂ ಅನುಮತಿ ನೀಡಿಲ್ಲ? ತಮ್ಮ ಪಕ್ಷದವರಿಗೆ ಒಂದು ನ್ಯಾಯ? ಇನ್ನೊಂದು ಪಕ್ಷದವರಿಗೆಮತ್ತೊಂದು ರೀತಿ ನ್ಯಾಯವೇ ಎಂದು ನಾಗೇಂದ್ರ ಪ್ರಶ್ನಿಸಿದರು.
ಶಾಸಕ ಸ್ಥಾನಕ್ಕೂ ರಾಜೀನಾಮೆ?
ನಮ್ಮ ಪಕ್ಷದ ವರಿಷ್ಠರುಗಳು ನನಗೆ ಅನುಮತಿ ನೀಡಿದರೆ, ಈಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಾನು ಸಿದ್ಧಿನಿದ್ದೇನೆ. ನಿಮಗೆ ತಾಕತ್ತಿದ್ದರೆ ನನ್ನ ಕ್ಷೇತ್ರದಲ್ಲಿ ಎದುರಿಸಲು ಬನ್ನಿ. ಶ್ರೀರಾಮುಲು ಅಣ್ಣ ತಾಕತ್ತಿದ್ದರೆ ನೀನು ಬಾ? ಜನತಾ ನ್ಯಾಯಾಲಯಕ್ಕೆ ಹೋಗೋಣ. ನನ್ನದು ತಪ್ಪಾಗಿದ್ದರೆ ನಾನು ಸೋಲ್ತಿನಿ, ಬನ್ನಿ ಎಂದು ಸವಾಲು ಹಾಕಿದರು.
ನಮ್ಮದು ಮುಗ್ದ ಸಮಾಜ:
ನಮ್ಮ ಸಮಾಜ ಮುಗ್ದ ಸಮಾಜ. ರಾಮಾಯಣವನ್ನು ನೀಡಿದ ವಾಲ್ಮಿಕಿ ನಮ್ಮ ಸಮಾಜದವರು. ರೆಡ್ಡಿ ಮತ್ತು ಶ್ರೀರಾಮುಲು ಅವರು ಕುತಂತ್ರಿಗಳು. ಬಳ್ಳಾರಿಯಲ್ಲಿ ಅವರುಗಳು ಎರಡೆರಡು ಬಾರಿ ರಿಜೆಕ್ಟ್ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
100 ಎಚ್‌ಪಿ ಸರ್ಕಾರ:
ಡಿ.ಕೆ.ಶಿವಕುಮಾರ್ ಅವರದು 100 ಹಾರ್ಸ್ ಪವರ್ ಸರ್ಕಾರ. ಅವರು ಹತ್ತಾರು ಬಾರಿ ನನ್ನ ತಪ್ಪಿಲ್ಲ ಎಂದು ಹೇಳಿದರೂ ವಿರೋಧ ಪಕ್ಷದವರು ಕೇಳಿಲ್ಲ. ನನಗೆ ಆಗಿರುವ ಅನ್ಯಾಯವನ್ನು 15 ಎಸ್ಟಿ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಹೇಳುತ್ತೇನೆ ಎಂದು ಹೇಳಿದರು.
ಧನ್ಯವಾದ
ನನಗೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಿರುವ ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ.ಪರಮೇಶ್ವರ, ಎಐಸಿಸಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಸುರ್ಜೆವಾಲ ಸೇರಿದಂತೆ ಎಲ್ಲ ಸಚಿವ ಸಂಪುಟ ಸಹೋದ್ಯೋಗಿಗಳಿಗೂ ಧನ್ಯವಾ ತಿಳಿಸುವೆ ಎಂದು ಸಚಿವ ನಾಗೇಂದ್ರ ಹೇಳಿದರು.

*ನನ್ನ ಮೇಲೆ ಪ್ರಾಸಿಕ್ಯೂಷನ್‌ಗೆ ಕೊಡಲು ಹೊರಟಿರುವ ರಾಜ್ಯಪಾಲರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ದ ಪ್ರಾಸಿಕ್ಯೂಷನ್‌ಗೆ ಯಾಕೆ ಇನ್ನೂ ಅನುಮತಿ ನೀಡಿಲ್ಲ? ತಮ್ಮ ಪಕ್ಷದವರಿಗೆ ಒಂದು ನ್ಯಾಯ? ಇನ್ನೊಂದು ಪಕ್ಷದವರಿಗೆಮತ್ತೊಂದು ರೀತಿ ನ್ಯಾಯವೇ?

-ಸಚಿವ ನಾಗೇಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net