ಖ್ಯಾತ ಗಾನಕೋಗಿಲೆ ಎಸ್​. ಜಾನಕಿ ನಿಧನ: ಸಿಎಂ ಡಿಕೆಶಿ, ಸಿದ್ದರಾಮಯ್ಯ, ಹೆಚ್​ಡಿಕೆ, ವಿಜಯೇಂದ್ರ ಸೇರಿ ಹಲವು ಗಣ್ಯರಿಂದ ಸಂತಾಪ | S Janaki

ಭಾರತೀಯ ಚಿತ್ರರಂಗದ ಶ್ರೇಷ್ಠ ಹಿನ್ನೆಲೆ ಗಾಯಕಿ ಎಸ್​.ಜಾನಕಿ
ಭಾರತೀಯ ಚಿತ್ರರಂಗದ ಶ್ರೇಷ್ಠ ಹಿನ್ನೆಲೆ ಗಾಯಕಿ ಎಸ್​.ಜಾನಕಿ
Published on
ಬೆಂಗಳೂರು: ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ದಕ್ಷಿಣ ಭಾರತದ ನೈಟಿಂಗೇಲ್ ಎಂದೇ ಪ್ರಸಿದ್ದರಾಗಿದ್ದ, ಭಾರತೀಯ ಚಿತ್ರರಂಗದ ಶ್ರೇಷ್ಠ ಹಿನ್ನೆಲೆ ಗಾಯಕಿ ಎಸ್​.ಜಾನಕಿ(S Janaki) ಅವರು 88ನೇ ವಯಸ್ಸಿನಲ್ಲಿ ಇಂದು(ಜು. 11) ಸಂಜೆ ಮೈಸೂರಿನಲ್ಲಿ ನಿಧನರಾಗಿದ್ದು, ಸಿಎಂ ಡಿಕೆಶಿ, ಸಿದ್ದರಾಮಯ್ಯ, ಹೆಚ್​ಡಿಕೆ ಸೇರಿ ಹಲವು ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಎಸ್. ಜಾನಕಿ ಅವರು ಸುದೀರ್ಘ ಆರು ದಶಕಗಳ ಕಾಲದ ಸಂಗೀತ ಪಯಣದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದೆ, ಒಡಿಯಾ ಸೇರಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಮತ್ತು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು 33 ವಿವಿಧ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ ಸಂತಾಪ

ಎಸ್​.ಜಾನಕಿಯವರ ನಿಧನಕ್ಕೆ ತಮ್ಮ ಎಕ್ಸ್​ ಖಾತೆಯಲ್ಲಿ ಸಂತಾಪ ಸೂಚಿಸಿರುವ ಸಿಎಂ ಡಿ.ಕೆ.ಶಿವಕುಮಾರ್, ಪ್ರಖ್ಯಾತ ಗಾಯಕಿ, 'ಗಾನ ಕೋಗಿಲೆ' ಎಸ್. ಜಾನಕಿ ಅಮ್ಮ ಅವರ ನಿಧನವಾರ್ತೆ ತಿಳಿದು, ದುಃಖಿತನಾಗಿದ್ದೇನೆ. 17 ಭಾಷೆಗಳಲ್ಲಿ ತಮ್ಮ ಇಂಪಾದ ಕಂಠದ ಮೂಲಕ ಸಾವಿರಾರು ಹಾಡುಗಳನ್ನು ಹಾಡಿದ ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಗಾಯನವನ್ನೇ ಉಸಿರಾಗಿಸಿಕೊಂಡಿದ್ದ ಜಾನಕಮ್ಮನವರು, ಅವರ ಹಾಡುಗಳ ಮೂಲಕ ಸದಾ ಸಂಗೀತಪ್ರಿಯರ ಮನಸ್ಸಿನಲ್ಲಿ ಹಸಿರಾಗಿರುತ್ತಾರೆ. ಅವರ ಅಸಂಖ್ಯಾತ ಅಭಿಮಾನಿಗಳು, ಆಪ್ತರು, ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪೋಸ್ಟ್ ಮಾಡಿದ್ದಾರೆ. 
ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ನಿಧನದ ಸುದ್ದಿ ನೋವುಂಟು ಮಾಡಿದೆ. ಕನ್ನಡ ಭಾಷೆಯೂ ಸೇರಿದಂತೆ 20 ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದ, 6 ದಶಕಗಳ ಕಾಲ‌ ತಮ್ಮ ಕಂಠಸಿರಿಯ ಮೂಲಕ ಸಂಗೀತ ಸೇವೆಗೈದ ಮೇರು ಪ್ರತಿಭೆಯೊಂದು ನಮ್ಮನ್ನಗಲಿರುವುದು ಕಲಾ ಜಗತ್ತಿಗಾಗಿರುವ ತುಂಬಲಾರದ ನಷ್ಟ. ಜಾನಕಿಯಮ್ಮನವರ ಧ್ವನಿಯಿಲ್ಲದ ಚಿತ್ರಗಳೇ ಅಪರೂಪ ಎನ್ನುವ ಕಾಲವೊಂದಿತ್ತು, ಆ ಮಟ್ಟಿನ ಬೇಡಿಕೆಯನ್ನು ತಮ್ಮ ಅನನ್ಯ ಕಂಠದ ಮೂಲಕ ಸೃಷ್ಟಿಸಿದ್ದ ಸಂಗೀತಶಾರದೆಯ ವರಪುತ್ರಿ ಅವರು. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗ ಮತ್ತು ಕೋಟ್ಯಂತರ ಸಂಗೀತ ಪ್ರಿಯರಿಗೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಸಂತಾಪ ಸೂಚಿಸಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿಯವರು ಸಹ, ಗಾನಕೋಗಿಲೆ, ಬಹುಭಾಷಾ ಗಾಯಕಿಯಾಗಿದ್ದ ಎಸ್. ಜಾನಕಿ ಅವರು ನಿಧನರಾದರು ಎಂಬ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು. ತಮ್ಮ ಮಧುರ ಕಂಠದಿಂದ ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಮಹಾನ್ ಗಾಯಕಿ ಎಸ್.ಜಾನಕಿ ಅವರು. ಮೈಸೂರಿನಲ್ಲಿ ನೆಲೆಸಿದ್ದ ಅವರು ಕನ್ನಡಿಗರಿಗೆ ಬಹು ಅಚ್ಚುಮೆಚ್ಚಿನ ಗಾಯಕರಾಗಿದ್ದರು. 
ಅವರ ನಿಧನ ಗಾನಲೋಕದಲ್ಲಿ ಬಹುದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಆದರೂ ಅವರು ಬಿಟ್ಟು ಹೋಗಿರುವ ಸಂಗೀತ ಸಂಪತ್ತು ಅಮರ, ಅಜರಾಮರ. ಆ ಗಾನ ಸರಸ್ವತಿಯ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ಅವರ ಬಂಧುಗಳು ಮತ್ತು ಅಭಿಮಾನಿ ಹಿತೈಷಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಹೃದಯಪೂರ್ವಕವಾಗಿ ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಪೋಸ್ಟ್ ಮಾಡಿದ್ದಾರೆ. 
ಅವರ ನಿಧನದಿಂದಾಗಿ ದೇಶದ ಸಂಗೀತ ಸಾಮ್ರಾಜ್ಯದ ಒಂದು ಮಹೋನ್ನತ ಸಾಧನೆಯ ಸುವರ್ಣ ಅಧ್ಯಾಯ ಅಂತ್ಯಗೊಂಡಂತಾಗಿದೆ,  ಅದ್ಭುತ ಕಂಠಸಿರಿ ತನ್ನ ಅಸಾಧಾರಣ ಸಂಗೀತ ಸಾಧನೆಯನ್ನು ಮುಗಿಸಿದೆ. ಆ ದೇವರು ಪೂಜ್ಯ ಜಾನಕಿ ಅಮ್ಮನವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬಸ್ಥರು ಮತ್ತು ನಾಡಿನ ಲಕ್ಷಾಂತರ ಅಭಿಮಾನಿಗಳಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net