ಮಾರುಕಟ್ಟೆಗೆ ರೆನಾಲ್ಟ್ ಡಸ್ಟರ್ ಸ್ಟ್ರಾಂಗ್ ಹೈಬ್ರಿಡ್ ಕಾರು ಎಂಟ್ರಿ/ Renault Duster

ಲೀಟರ್‌ಗೆ 29 ಕಿ.ಮೀ ಮೈಲೇಜ್, ಪೆಟ್ರೋಲ್ ಮತ್ತು ಬ್ಯಾಟರಿ ಎರಡು ವಿಧಾನ ಅವಳಡಿಕೆ, 16.99 ಲಕ್ಷದಿಂದ ಬೆಲೆ ಆರಂಭ,
Renault Duster
Renault Duster
Published on: 

ಬೆಂಗಳೂರು: ಜಾಗತಿಕ ವಾಹನ ತಯಾರಿಕಾ ಸಂಸ್ಥೆ ರೆನಾಲ್ಟ್, ತನ್ನ ಅತ್ಯಾಧುನಿಕ ಸ್ಟ್ರಾಂಗ್ ಹೈಬ್ರಿಡ್ ಇ-ಟೆಕ್-160 ತಂತ್ರಜ್ಞಾನ ಆಧಾರಿತ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಡಸ್ಟರ್ ಎಸ್‌ಯುವಿ ಮೂಲಕ ಎಲೆಕ್ಟ್ರಾನಿಕ್ (ಇವಿ) ವಾಹನ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇರಿಸಿದೆ.

ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ರೆನಾಲ್ಟ್ ಗ್ರೂಪ್ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಫ್ರಾನ್ಸಿಸ್ಕೋ, ಸಿಇಒ ಸ್ಟೀಫನ್ ಡೆಬ್ಲೈಸ್, ಕಂಪನಿಯ ಮುಖ್ಯ ಇಂಜಿನಿಯರ್ ಡಾ. ವಿಕ್ರಮನ್ ಕಾರನ್ನು ಪರಿಚಯಿಸಿದರು.

ರೆನಾಲ್ಟ್ ಇಂಡಿಯಾ ಪರಿಚಯಿಸಿರುವ ಹೊಸ ಡಸ್ಟರ್ ಕಾರು ಅತ್ಯುತ್ತಮ ಇಂಧನ ದಕ್ಷತೆ, ಶಕ್ತಿಶಾಲಿ ಕಾರ್ಯಕ್ಷಮತೆ ಹಾಗೂ ಎಲೆಕ್ಟ್ರಿಕ್ (ಬ್ಯಾಟರಿ) ಚಾಲನೆಯ ಅನುಕೂಲಗಳನ್ನು ಒಟ್ಟಿಗೆ ಒದಗಿಸುವ ಗುರಿ ಹೊಂದಿದೆ. ಎವಲ್ಯೂಷನ್, ಟೆಕ್ನೋ ಮತ್ತು ಎಮೋಷನ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಾಗಲಿರುವ ಈ ಕಾರು ಆರಂಭಿಕ ಎಕ್ಸ್-ಶೋರೂಂ ಬೆಲೆ 16.99 ಲಕ್ಷದಿಂದ ಆರಂಭವಾಗಲಿದೆ.

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಪರ್ಯಾಯವಾಗಿ ಹೈಬ್ರಿಡ್ ತಂತ್ರಜ್ಞಾನ ಆಧಾರಿತ ಎಸ್‌ಯುವಿಗಳನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ಇಂಧನ ಉಳಿತಾಯದ ಆಯ್ಕೆಯನ್ನು ಒದಗಿಸುವುದು ಕಂಪನಿಯ ಉದ್ದೇಶವಾಗಿದೆ.

ಎರಡು ಎಲೆಕ್ಟ್ರಿಕ್ ಮೋಟಾರ್‌ಗಳು:

ಡಸ್ಟರ್ ಸ್ಟ್ರಾಂಗ್ ಹೈಬ್ರಿಡ್ ಇ-ಟೆಕ್-160 ಕಾರಿನಲ್ಲಿ 1.8 ಲೀಟರ್ ಪೆಟ್ರೋಲ್ ಎಂಜಿನ್, ಎರಡು ಎಲೆಕ್ಟ್ರಿಕ್ ಮೋಟಾರ್‌ಗಳು, 1.4 ಕಿಲೋವ್ಯಾಟ್ ಸಾಮರ್ಥ್ಯದ ಬ್ಯಾಟರಿ ಹಾಗೂ ಮಲ್ಟಿ-ಮೋಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ. ಗರಿಷ್ಠ 160 ಪಿಎಸ್ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ, ಎಲೆಕ್ಟ್ರಿಕ್ ಮೋಟಾರ್‌ಗಳ ಗರಿಷ್ಠ ಟಾರ್ಕ್ 208 ಎನ್‌ಎಂ ಕಂಪನಿ ಅಳವಡಿಸಿದೆ. ಎಲೆಕ್ಟ್ರಿಕ್ ಹಾಗೂ ಪೆಟ್ರೋಲ್ ಇಂಜಿನ್ ಚಾಲನಾ ವಿಧಾನಗಳ ನಡುವೆ ವ್ಯವಸ್ಥೆಯು ಸ್ವಯಂಚಾಲಿತವಾಗಿ ಬದಲಾವಣೆಯಾಗುತ್ತದೆ. ಇದರಿಂದ ನಗರ ಸಂಚಾರ ಸೇರಿ ವಿವಿಧ ರಸ್ತೆ ಪರಿಸ್ಥಿತಿಗಳಲ್ಲಿ ಸುಗಮ ಚಾಲನೆ ಮತ್ತು ಉತ್ತಮ ಇಂಧನ ದಕ್ಷತೆ ಸಾಧಿಸಲು ಸಾಧ್ಯವಾಗಲಿದೆ.

ಲೀಟರ್‌ಗೆ 29 ಕಿ.ಮೀ. ಮೈಲೇಜ್:

ನೂತನ ಡಸ್ಟರ್‌ನ ಪ್ರಮುಖ ಆಕರ್ಷಣೆ ಅದರ ಇಂಧನ ದಕ್ಷತೆ ಹಾಗೂ ಎಆರ್‌ಎಐ ಪ್ರಮಾಣೀಕೃತ ಲೀಟರ್‌ಗೆ 29 ಕಿ.ಮೀ. ಮೈಲೇಜ್ ನೀಡುತ್ತದೆ. ನಗರ ಪ್ರದೇಶದ ಚಾಲನೆಯಲ್ಲಿ ಶೇ.80ರಷ್ಟು ಪ್ರಯಾಣದಲ್ಲಿ ಎಲೆಕ್ಟ್ರಿಕ್ ಮೋಡ್‌ನಲ್ಲಿ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಶೇ.29 ಇಂಧನ ಉಳಿತಾಯವಾಗಲಿದೆ.

ಫಾರ್ಮುಲಾ 1 ಪ್ರೇರಿತ ಗೇರ್‌ಬಾಕ್ಸ್

ರೆನಾಲ್ಟ್‌ನ ಹೈಬ್ರಿಡ್ ತಂತ್ರಜ್ಞಾನವು ಕಂಪನಿಯ ವಿದ್ಯುದ್ದೀಕರಣ ಕ್ಷೇತ್ರದ ದೀರ್ಘಕಾಲದ ಸಂಶೋಧನೆ ಮತ್ತು ಮೋಟಾರ್‌ಸ್ಪೋಟ್ಸ್ ಅನುಭ ಆಧರಿಸಿದೆ. ಫಾರ್ಮುಲಾ 1 ತಂತ್ರಜ್ಞಾನದಿಂದ ಪ್ರೇರಣೆ ಪಡೆದಿರುವ ನೂತನ ಮಲ್ಟಿ-ಮೋಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪ್ರಮುಖ ವಿಶೇಷತೆಗಳಲ್ಲಿ ಒಂದಾಗಿದೆ. ಸಾಮಾನ್ಯ ಎಲೆಕ್ಟ್ರಿಕ್ ವಾಹನಗಳಂತೆ ಪ್ರತ್ಯೇಕ ಚಾರ್ಜಿಂಗ್ ಕೇಂದ್ರಕ್ಕೆ ತೆರಳಿ ಬ್ಯಾಟರಿ ಚಾಜ್ ಮಾಡುವ ಅಗತ್ಯ ಈ ಕಾರಿಗಿಲ್ಲ. ವಾಹನ ಚಲಿಸುವಾಗ ಮತ್ತು ವೇಗ ಕಡಿಮೆ ಮಾಡುವಾಗ ಉತ್ಪತ್ತಿಯಾಗುವ ಶಕ್ತಿಯನ್ನು ಬಳಸಿಕೊಂಡು ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳುತ್ತದೆ.

ಮಧ್ಯಮ ಗಾತ್ರದ ಎಸ್‌ಯುವಿ ಮಾರುಕಟ್ಟೆಯಲ್ಲಿ ಡೀಸೆಲ್ ವಾಹನಗಳಿಗೆ ಬೇಡಿಕೆ ಇರುವುದನ್ನು ಗಮನದಲ್ಲಿಟ್ಟುಕೊಂಡು ರೆನಾಲ್ಟ್ ನೂತನ ಹೈಬ್ರಿಡ್ ಡಸ್ಟರ್ ಅನ್ನು ಪರಿಚಯಿಸಿದೆ. ವಿಶೇಷವಾಗಿ 17 ಲಕ್ಷದಿಂದ 20 ಲಕ್ಷದ ಬೆಲೆ ಶ್ರೇಣಿಯಲ್ಲಿನ ಡೀಸೆಲ್ ವಾಹನ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಜಾಗತಿಕವಾಗಿ ಅಂದಾಜು 10 ಲಕ್ಷಕ್ಕೂ ಹೆಚ್ಚು ಹೈಬ್ರಿಡ್ ವಾಹನಗಳ ಮಾರಾಟವಾಗಿದೆ. ಎವಲೂಷನ್ ಮಾದರಿಗೆ ಎಕ್ಸ್ ಶೋ ರೂಂ ಬೆಲೆ 16.99 ಲಕ್ಷ, ಟೆಕ್ನೊ ಮಾದರಿಗೆ 18.99 ಲಕ್ಷ ಹಾಗೂ ಎಮೋಷನ್ ಮಾದರಿಯದ್ದು 19.49 ಲಕ್ಷ ರೂ. ಬೆಲೆಯ ವಾಹನಗಳು ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಕಂಪನಿ ಸಿಇಒ ಸ್ಟೀಫನ್ ಡೆಬ್ಲೈಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net