ರಾಜ್ಯಕ್ಕೆ ಬಾಕಿ ಇರುವ ಅನುದಾನ ಬಿಡುಗಡೆ ಮಾಡಿ; ನೀತಿ ಆಯೋಗಕ್ಕೆ ಮುಖ್ಯಮಂತ್ರಿ ಡಿಕೆಶಿ ಮನವಿ

DK SHIVAKUMAR
DK SHIVAKUMAR
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿ ವರ್ಷ 1.6 ಲಕ್ಷ ಇಂಜಿನಿಯರ್‌ಗಳು ಮತ್ತು 13 ಸಾವಿರ ವೈದ್ಯರನ್ನು ರಾಜ್ಯ ರೂಪಿಸುತ್ತಿದ್ದು, ಬೆಂಗಳೂರಿನಲ್ಲಿ 26 ಲಕ್ಷಕ್ಕೂ ಹೆಚ್ಚು ಐಟಿ ವೃತ್ತಿಪರರು ಕಾರ್ಯನಿರ್ವಹಿಸುತ್ತಿದ್ದಾರೆ
  • ಜಿಡಿಪಿ, ತಲಾ ಆದಾಯ, ಮಾನವ ಸಂಪನ್ಮೂಲ, ಮಾಹಿತಿ ತಂತ್ರಜ್ಞಾನ, ಸ್ಟಾರ್ಟ್‌ಅಪ್, ನೇರ ವಿದೇಶಿ ಬಂಡವಾಳ ಹೂಡಿಕೆ ಹಾಗೂ ರಫ್ತು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶದಲ್ಲೇ ಕರ್ನಾಟಕವು ಮುಂಚೂಣಿಯಲ್ಲಿದೆ
ಬೆಂಗಳೂರು:
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ಅನುದಾನ ಹಂಚಿಕೆಯ ಪಾಲು ಹಾಗೂ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀತಿ ಆಯೋಗಕ್ಕೆ ಮನವಿ ಮಾಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಡಾ. ಅಶೋಕ್ ಕುಮಾರ್ ಲಾಹಿರಿ ಅವರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದ್ದರಿಂದ ಒಕ್ಕೂಟ ವ್ಯವಸ್ಥೆಯ ಆತ್ಮಕ್ಕೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕರ್ನಾಟಕವು ಜಿಡಿಪಿ, ತಲಾ ಆದಾಯ, ಮಾನವ ಸಂಪನ್ಮೂಲ, ಮಾಹಿತಿ ತಂತ್ರಜ್ಞಾನ, ಸ್ಟಾರ್ಟ್‌ಅಪ್, ನೇರ ವಿದೇಶಿ ಬಂಡವಾಳ ಹೂಡಿಕೆ ಹಾಗೂ ರಫ್ತು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಪ್ರತಿ ವರ್ಷ 1.6 ಲಕ್ಷ ಇಂಜಿನಿಯರ್‌ಗಳು ಮತ್ತು 13 ಸಾವಿರ ವೈದ್ಯರನ್ನು ರಾಜ್ಯ ರೂಪಿಸುತ್ತಿದ್ದು, ಬೆಂಗಳೂರಿನಲ್ಲಿ 26 ಲಕ್ಷಕ್ಕೂ ಹೆಚ್ಚು ಐಟಿ ವೃತ್ತಿಪರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಬೆಂಗಳೂರಿನ ಮೇಲೆ ಜನಸಂಖ್ಯೆ ಹಾಗೂ ಮೂಲಸೌಕರ್ಯಗಳ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಅಭಿವೃದ್ಧಿಗೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇದೇ ವೇಳೆ ನೀತಿ ಆಯೋಗ ಸೂಚಿಸಿರುವಂತೆ ಎರಡನೇ ಬೆಂಗಳೂರು ನಿರ್ಮಾಣದ ಕುರಿತು ಸಮಗ್ರ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಐದು ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ₹50 ಸಾವಿರ ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. ರೈತರಿಗೆ ಉಚಿತ ವಿದ್ಯುತ್ ಸಬ್ಸಿಡಿಗೆ ₹20 ಸಾವಿರ ಕೋಟಿ ಮೀಸಲಿಡಲಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ, ಪ್ರಜಾಸೇವೆ ಇಲಾಖೆ, ಭೂಮಿ ಗ್ಯಾರಂಟಿ ಯೋಜನೆ ಹಾಗೂ ವಿದೇಶಿ ಹೂಡಿಕೆ ಆಕರ್ಷಿಸಲು ಪ್ರತ್ಯೇಕ ಇಲಾಖೆ ಸ್ಥಾಪನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.
2025-26ನೇ ಸಾಲಿನಲ್ಲಿ ಕರ್ನಾಟಕದ ಒಟ್ಟು ರಾಜ್ಯ ದೇಶೀಯ ಉತ್ಪನ್ನ (ಜಿಎಸ್‌ಡಿಪಿ) ₹32.81 ಲಕ್ಷ ಕೋಟಿ ತಲುಪಿದ್ದು, ಶೇ.8.1ರ ಬೆಳವಣಿಗೆ ಸಾಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಮಾತನಾಡಿದ ನೀತಿ ಆಯೋಗದ ಉಪಾಧ್ಯಕ್ಷ ಡಾ. ಅಶೋಕ್ ಕುಮಾರ್ ಲಾಹಿರಿ, ಕರ್ನಾಟಕದ ಅಭಿವೃದ್ಧಿ ಶ್ಲಾಘನೀಯವಾಗಿದ್ದು, ಬೆಂಗಳೂರಿನ ಮೇಲಿನ ಒತ್ತಡ ತಗ್ಗಿಸಲು ಎರಡನೇ ಬೆಂಗಳೂರಿನ ನಿರ್ಮಾಣವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

*ಪ್ರತಿ ವರ್ಷ 1.6 ಲಕ್ಷ ಇಂಜಿನಿಯರ್‌ಗಳು ಮತ್ತು 13 ಸಾವಿರ ವೈದ್ಯರನ್ನು ರಾಜ್ಯ ರೂಪಿಸುತ್ತಿದ್ದು, ಬೆಂಗಳೂರಿನಲ್ಲಿ 26 ಲಕ್ಷಕ್ಕೂ ಹೆಚ್ಚು ಐಟಿ ವೃತ್ತಿಪರರು ಕಾರ್ಯನಿರ್ವಹಿಸುತ್ತಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net