

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜ್ಯದಲ್ಲಿ ಕೋಚಿಂಗ್ ಕೇಂದ್ರಗಳು ಹಾಗೂ ಟುಟೋರಿಯಲ್ ಸಂಸ್ಥೆಗಳನ್ನು ನೋಂದಣಿ ಇಲ್ಲದೆ ನಡೆಸುವುದನ್ನು ನಿಷೇಧಿಸಿ, ಅವುಗಳ ಮೇಲೆ ಕಠಿಣ ನಿಯಂತ್ರಣ ಹೇರಲು ಸರ್ಕಾರ ಹೊಸ ನಿಯಮ ಜಾರಿಗೆ ತರಲಿದೆ. ಮುಖ್ಯವಾಗಿ ಫ್ರಾಂಚೈಸಿ, ಆನ್ಲೈನ್ ಕೋಚಿಂಗ್ ಸಂಸ್ಥೆಗಳೂ ಇದರ ವ್ಯಾಪ್ತಿಗೆ ಬರಲಿವೆ. ಶುಲ್ಕ, ಕಾಲಾವಧಿ ಬಗ್ಗೆಯೂ ಸ್ಪಷ್ಟತೆ ನೀಡಲಾಗಿದೆ. ಈ ಸಂಬಂಧ ‘ಕರ್ನಾಟಕ ಟುಟೋರಿಯಲ್ ಇನ್ಸ್ಟಿಟ್ಯೂಶನ್ಸ್ ಮತ್ತು ಕೋಚಿಂಗ್ ಸೆಂಟರ್ಸ್ (ನೋಂದಣಿ ಮತ್ತು ನಿಯಂತ್ರಣ) ನಿಯಮ 2026’ರ ಕರಡು ನಿಯಮವನ್ನು ಸರ್ಕಾರ ಪ್ರಕಟಿಸಿದೆ.
ಹೊಸ ನಿಯಮಗಳ ಪ್ರಕಾರ, ಹೊಸದಾಗಿ ಕೋಚಿಂಗ್ ಸೆಂಟರ್ ಆರಂಭಿಸಲು ಅಥವಾ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ‘ಸೇವಾ ಸಿಂಧು ಪೋರ್ಟಲ್’ ಮೂಲಕ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನೋಂದಣಿ ಶುಲ್ಕವಾಗಿ 15,000 ರೂ. ಹಾಗೂ ಪ್ರತಿ ಕೋರ್ಸ್ಗೆ ಪ್ರತ್ಯೇಕವಾಗಿ 5,000 ರೂ. ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು. ನೋಂದಣಿ ಪ್ರಮಾಣಪತ್ರವು ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತದೆ.
ಕೋಚಿಂಗ್ ಸೆಂಟರ್ಗಳು ವಿದ್ಯಾರ್ಥಿಗಳಿಂದ ಸಂಪೂರ್ಣ ಕೋರ್ಸ್ ಶುಲ್ಕವನ್ನು ಒಂದೇ ಕಂತಿನಲ್ಲಿ ವಸೂಲಿ ಮಾಡುವಂತಿಲ್ಲ. ಕನಿಷ್ಠ ನಾಲ್ಕು ಸಮಾನ ಕಂತುಗಳಲ್ಲಿ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಬೇಕು. ಅಲ್ಲದೆ, ವಿದ್ಯಾರ್ಥಿಯು ಕೋರ್ಸ್ ಮಧ್ಯದಲ್ಲಿ ನಿಲ್ಲಿಸಿದರೆ, ಉಳಿದ ಅವಧಿಯ ಶುಲ್ಕವನ್ನು ಪೊ›-ರೇಟಾ ಆಧಾರದ ಮೇಲೆ 10 ದಿನಗಳಲ್ಲಿ ಹಿಂದಿರುಗಿಸಬೇಕು.
ಈ ನಿಯಮಗಳ ಉಲ್ಲಂಘನೆ ಮತ್ತು ದೂರುಗಳ ವಿಚಾರಣೆಗಾಗಿ ಜಿಲ್ಲಾಮಟ್ಟದಲ್ಲಿ ‘ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ’ ರಚಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳಿಗೆ ಗರಿಷ್ಠ 5 ಲಕ್ಷ ರೂ.ವರೆಗೆ ದಂಡ ವಿಧಿಸುವುದು ಅಥವಾ ನೋಂದಣಿ ರದ್ದುಪಡಿಸುವ ಅಧಿಕಾರವನ್ನು ಮೇಲ್ಮನವಿ ಪ್ರಾಧಿಕಾರಕ್ಕೆ ನೀಡಲಾಗಿದೆ.
ಶಾಲಾ- ಕಾಲೇಜು ಅವಧಿಯಲ್ಲಿ ತರಗತಿ ನಡೆಸುವಂತಿಲ್ಲ. ಒಂದು ಬ್ಯಾಚ್ನಲ್ಲಿ ಕನಿಷ್ಠ 20 ವಿದ್ಯಾರ್ಥಿಗಳಿರಬೇಕು ಎಂದು ಹೇಳಲಾಗಿದೆ. ವಿದ್ಯಾರ್ಥಿಗೆ ಪ್ರತಿ ಚದರ ಮೀಟರ್ ಸ್ಥಳಾವಕಾಶ, ಸಿಸಿ ಕ್ಯಾಮರಾ, ಪ್ರತ್ಯೇಕ ಶೌಚಗೃಹ, ಅಗ್ನಿ ಸುರಕ್ಷತೆ ಕಡ್ಡಾಯ ಇರಲಿದೆ. ಈ ನಿಯಮಗಳ ಕುರಿತು 15 ದಿನಗಳೊಳಗೆ ಆಕ್ಷೇಪಣೆ ಅಥವಾ ಸಲಹೆಗಳನ್ನು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಸಲ್ಲಿಸಬಹುದು. ಈ ನಿಯಮಗಳು ಜಾರಿಗೆ ಬಂದರೆ 2001ರ ಹಳೆಯ ನಿಯಮಗಳು ರದ್ದಾಗಲಿವೆ.
1. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕೆ ವಿಶೇಷ ಒತ್ತು. ಪ್ರತಿ ಕೇಂದ್ರದಲ್ಲಿ ಅರ್ಹ ಆಪ್ತಸಮಾಲೋಚಕರ ಸೇವೆ ಲಭ್ಯವಿರಬೇಕು.
2. ಮಾನಸಿಕ ಆರೋಗ್ಯ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕಾರ್ಯಾಗಾರ ನಡೆಸಬೇಕು. ಆತ್ಮಹತ್ಯೆ ತಡೆ ಸಹಾಯವಾಣಿ ಸೇರಿ ತುರ್ತು ಸಂಪರ್ಕ ಸಂಖ್ಯೆಗಳನ್ನು ಪ್ರದರ್ಶಿಸಬೇಕು.
3. ಪರೀಕ್ಷೆಗಳ ಫಲಿತಾಂಶವನ್ನು ಸಾರ್ವಜನಿಕಗೊಳಿಸು ವಂತಿಲ್ಲ. ರ್ಯಾಂಕ್ ಅಥವಾ ಉತ್ತಮ ಅಂಕದ ಖಾತರಿ ನೀಡುವುದು, ದಾರಿತಪ್ಪಿಸುವ ಜಾಹೀರಾತು ಪ್ರಕಟಿಸುವುದನ್ನು ನಿಷೇಧಿಸಲಾಗಿದೆ.
4. ಹದಿನೈದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಥವಾ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸದ ಮಕ್ಕಳನ್ನು ದಾಖಲಿಸಿಕೊಳ್ಳುವಂತಿಲ್ಲ. ದಿನಕ್ಕೆ ಗರಿಷ್ಠ 5 ಗಂಟೆ ತರಗತಿ ನಡೆಸಬಹುದಾಗಿದೆ.