ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್: ರಾಜ್ಯದಲ್ಲೆಡೆ ಮುಂದುವರಿದ ವರುಣಾರ್ಭಟ- Red alert

ಕರಾವಳಿ ಜಿಲ್ಲೆಗಳಿಗೆ  ರೆಡ್ ಅಲರ್ಟ್
ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್
Published on
ಬೆಂಗಳೂರು: ಮುಂಗಾರು ಆಗಮಿಸಿದ ಬಳಿಕ ರಾಜ್ಯದಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ಕರಾವಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಭಾನುವಾರವೂ ವರುಣಾರ್ಭಟ ಮುಂದುವರಿದಿತ್ತು.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ 8ರಿಂದ ಜೂ 11ವರೆಗೆ ಭಾರಿ ಮಳೆ ಸುರಿಯವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ, ರೆಡ್ ಅಲರ್ಟ್ ಕೊಟ್ಟಿದೆ. ಈ ಅವಧಿಯಲ್ಲಿ 7ರಿಂದ 12 ಸೆಂಮೀವರೆಗೆ ಮಳೆ ಸುರಿಯಬಹುದು. ಕೆಲ ಪ್ರದೇಶಗಳಲ್ಲಿ ಗಂಟೆಗೆ 60 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಹಾಗಾಗಿ, ಸಮುದ್ರ ತೀರದ ಪ್ರದೇಶಗಳಲ್ಲಿ ಮೀನುಗಾರರು ಸೇರಿ ಸಾರ್ವಜನಿಕರು ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಧಾರವಾಡ, ಗದಗ, ಹಾವೇರಿಯಲ್ಲಿ ಮುಂದಿನ 4 ದಿನ ಮತ್ತು ರಾಯಚೂರಿನಲ್ಲಿ ಮುಂದಿನ 2 ದಿನ ಜೋರು ಮಳೆಯಾಗುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ. ಹಾಸನ, ಕೊಡಗು, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಬಳ್ಳಾರಿಯಲ್ಲಿ ಮುಂದಿನ 3 ದಿನ ಯೆಲ್ಲೋ ಅಲರ್ಟ್ ಇರಲಿದೆ. ಉಳಿದೆಡೆ ಸಾಧಾರಣ ವರ್ಷಧಾರೆಯಾಗಲಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಾನ್ಸೂನ್ ಪ್ರವೇಶಿಸಿದ್ದು, ಸೋಮವಾರ ಆ ಭಾಗದ ಎಲ್ಲ ಜಿಲ್ಲೆಗಳಿಗೆ ಆವರಿಸಲಿದೆ ಎಂದು ಇಲಾಖೆ ಮಾಹಿತಿ ಕೊಟ್ಟಿದೆ.
ಬೆಂಗಳೂರು ನಗರದಲ್ಲಿ ಮುಂದಿನ ಮುರ‌್ನಾಲ್ಕು ದಿನ ಮೋಡ ಕವಿದ ವಾತಾವರಣ ಇರಲಿದೆ. ಕೆಲ ಪ್ರದೇಶಗಳಲ್ಲಿ ಗಂಟೆಗೆ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಹಗುರ ಮಳೆಯಾಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವೂ ಕ್ರಮವಾಗಿ 30 ಮತ್ತು 21 ಡಿ.ಸೆ. ದಾಖಲಾಗಬಹುದು.
ನಿರಂತರ ಮಳೆಯಿಂದಾಗಿ ರಾಜ್ಯದಲ್ಲೆಡೆ ಉಷ್ಣಾಂಶ ಇಳಿಮುಖವಾಗಿದ್ದು, ತಂಪಾದ ವಾತಾವರಣ ಜನರಿಗೆ ಅನುಭವವಾಗುತ್ತಿದೆ. ಮುಂದಿನ 5 ದಿನ ತಾಪಮಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net