ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ (IPL) ಪಂದ್ಯಗಳ ಆಯೋಜನೆಗೆ ರಾಜ್ಯ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದರೂ, ಹಾಲಿ ಚಾಂಪಿಯನ್ ಆರ್‌ಸಿಬಿ (RCB) ತಂಡ ಮುಂಬರುವ 19ನೇ ಆವೃತ್ತಿಯಲ್ಲಿ ತನ್ನ ತವರು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡುವ ನಿಲುವು ಇನ್ನೂ ಅಸ್ಪಷ್ಟವಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ, KSCA) ಉದ್ಯಾನನಗರಿಯಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಫ್ರಾಂಚೈಸಿ ಮನವೊಲಿಸುವ ಕಸರತ್ತು ನಡೆಸಿದ್ದು, ಆರ್‌ಸಿಬಿ ಆಡಲು ಒಪ್ಪದಿದ್ದರೆ ಇತರ ಮೂರು ಐಪಿಎಲ್ ಫ್ರಾಂಚೈಸಿಗಳು ತನ್ನ ತವರು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡುವ ಆಸಕ್ತಿ ವ್ಯಕ್ತಪಡಿಸಿವೆ ಎನ್ನಲಾಗಿದೆ.