‘ಯುವಕರಲ್ಲಿ ಶೌರ್ಯ, ಪರಾಕ್ರಮ ಹಾಗೂ ದೇಶ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ಸಂಗೊಳ್ಳಿ ರಾಯಣ್ಣ ಉತ್ಸವ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಾತ್ರೆ’ ವಿಜೃಂಭಣೆಯಿಂದ ನೆರವೇರಿತು.
ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ರಾಯಣ್ಣನವರ ಪ್ರತಿಮೆಯ ಮೆರವಣಿಗೆ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಗಮನ ಸೆಳೆಯಿತು. ಡೊಳ್ಳು ಕುಣಿತ ಮತ್ತಿತರ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಸಂಗೊಳ್ಳಿ ರಾಯಣ್ಣನವರ ಬೃಹತ್ ಪ್ರತಿಮೆಯ ಮೆರವಣಿಯಲ್ಲಿ ಸಾವಿರಾರು ಜನ ಪಾಲ್ಗೊಂಡು ಜಯ ಘೋಷ ಮೊಳಗಿಸಿದರು. ಎಲ್ಲೆಲ್ಲೂ ಹಳದಿ ಬಾವುಟಗಳು ರಾರಾಜಿಸಿದವು. ಭಂಡಾರದ ಹೊಗೆ ಹಾರಿತು.
ನಂತರ ದರಬಾರ್ ಮೈದಾನದಲ್ಲಿ ನಡೆದ ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು, ಸಂಗೊಳ್ಳಿ ರಾಯಣ್ಣನವರು ಇತಿಹಾಸ ನಿರ್ಮಿಸಿದ್ದಾರೆ. ಅವರ ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದರು.
ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಬೇಕು. ಅಂದಾಗ ಆ ಸಮಾಜ ಮುಂದುವರಿಯಲು ಸಾಧ್ಯ. ಯಾವ ಸಮಾಜದ ಮಹಿಳೆಯರು ಬೆಳೆಯುತ್ತಾರೋ ಆ ಸಮಾಜ ಬೆಳೆಯುತ್ತದೆ. ಮಹಿಳೆಯರ ಸ್ಥಿತಿಗತಿಯನ್ನು ಆಧರಿಸಿಯೇ ಆ ಸಮಾಜದ ಪ್ರಗತಿಯನ್ನು ನಿರ್ಧರಿಸಬಹುದಾಗಿದೆ ಎಂದರು.
ಮುಖಂಡ ನಿಕೇತರಾಜ ಮೌರ್ಯ ಮಾತನಾಡಿ, ರಾಯಣ್ಣ ಜಾತ್ರೆಗೆ ಸೇರಿದ ಜನರನ್ನು ನೋಡಿ ಜಿಲ್ಲೆಯ ಅನೇಕ ನಾಯಕರ ಎದೆ ಢವಢವ ಎನ್ನುತ್ತಿದೆ. ರಾಯಣ್ಣ ಎಂದರೆ ದೇಶಪ್ರೇಮ, ಕಿಚ್ಚು, ಕ್ರಾಂತಿ, ಶಕ್ತಿ, ಉತ್ಸಾಹ, ಹೋರಾಟದ ಸಂಕೇತ. ದೇಶಭಕ್ತರಿಗೆ ರಾಯಣ್ಣನ ಸಮಾಧಿಯೇ ತೀರ್ಥಕ್ಷೇತ್ರವಾಗಿದೆ ಎಂದರು.
ರಾಯಣ್ಣನ ಕುಲದವರು ಎನ್ನುವ ಮಾತ್ರಕ್ಕೆ ಆತನನ್ನು ನಾವು ಹೊತ್ತು ಮೆರೆಸುತ್ತಿಲ್ಲ. ಆತನ ಶೌರ್ಯ, ದೇಶಭಕ್ತಿ ಎಲ್ಲರಿಗೂ ಪ್ರೇರಣೆ, ರಾಯಣ್ಣ ದೊರೆಯ ಮಗನಾಗಿರಲಿಲ್ಲ. ಅವನೊಳಗೆ ಬ್ರಿಟಿಷರ ವಿರುದ್ಧ ನುಗ್ಗಿ ಹೊಡೆಯುತ್ತೇನೆಂಬ ಕಿಚ್ಚಿತ್ತು. ಮುಂದೊಂದು ದಿನ ಇಡೀ ದೇಶವೇ ಜೈ ರಾಯಣ್ಣ ಎಂದು ಘೋಷಣೆ ಕೂಗುವ ಸನ್ನಿವೇಶ ಬರಲಿದೆ ಎಂದರು.
ದಾವಣಗೆರೆಯ ಮುಖಂಡ ಜಿ.ಬಿ. ವಿನಯಕುಮಾರ ಮಾತನಾಡಿ, ವಿಜಯನಗರ ಸಾಮ್ರಾಜ್ಯ, ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದ ಹಾಲುಮತ ಸಮಾಜ ಸ್ವಾವಲಂಬಿಯಾಗಿ ಬೆಳೆಯಬೇಕು. ಸಮಾಜದ ಯುವಕರು ಉನ್ನತ ಸ್ಥಾನಕ್ಕೇರಬೇಕು. ಆ ನಿಟ್ಟಿನಲ್ಲಿ ಸಮಾಜ ಸದೃಢಗೊಳಿಸಲು ಈ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖಂಡ ಮೋಹನ ಮೇಟಿ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಒಂದು ಗತ್ತಿದೆ. ತಾಕತ್ತಿದೆ. ಹೀಗಾಗಿ ಆ ಕ್ರಾಂತಿವೀರನ ಹೆಸರಿನಡಿ ನಾವೆಲ್ಲ ಒಂದಾಗಬೇಕೆಂದರು.