ರೇಪಿಯರ್​ ಏರ್​ಜೆಟ್​ನಿಂದ ಮೂಲ ನೇಕಾರರಿಗೆ ಪೆಟ್ಟು | indigenous weavers

ದೊಡ್ಡಬಳ್ಳಾಪುರದಲ್ಲಿ ದೊಡ್ಡಬಳ್ಳಾಪುರ ಟೆಕ್ಸ್​ ಟೈಲ್ಸ್​ ವೀವರ್ಸ್​ ಅಸೋಸಿಯೇಷನ್​ನಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ನೇಕಾರ ಮುಖಂಡರಾದ ನಾಗರಾಜ್​, ಶ್ರೀನಿವಾಸ್​, ವಿ.ನರಸಿಂಹಮೂರ್ತಿ, ಶಿವಕುಮಾರ್​, ಅನಿಲ್​ ಕುಮಾರ್​, ಬಿ.ಆರ್​.ಚಂದ್ರಶೇಖರ, ಸುರೇಶ್​ ಇತರರು ಇದ್ದರು.
ದೊಡ್ಡಬಳ್ಳಾಪುರದಲ್ಲಿ ದೊಡ್ಡಬಳ್ಳಾಪುರ ಟೆಕ್ಸ್​ ಟೈಲ್ಸ್​ ವೀವರ್ಸ್​ ಅಸೋಸಿಯೇಷನ್​ನಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ನೇಕಾರ ಮುಖಂಡರಾದ ನಾಗರಾಜ್​, ಶ್ರೀನಿವಾಸ್​, ವಿ.ನರಸಿಂಹಮೂರ್ತಿ, ಶಿವಕುಮಾರ್​, ಅನಿಲ್​ ಕುಮಾರ್​, ಬಿ.ಆರ್​.ಚಂದ್ರಶೇಖರ, ಸುರೇಶ್​ ಇತರರು ಇದ್ದರು.
Published on
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ನೇಕಾರಿಕೆ ಪ್ರಮುಖ ಉದ್ಯೋಗವಾಗಿದೆ. ಇದೊಂದು ಗುಡಿ ಕೈಗಾರಿಕೆಯಾಗಿದ್ದು, ಸುಮಾರು 25,000 ಮಗ್ಗಗಳನ್ನು ಹೊಂದಿದೆ. ಹಲವು ದಶಕಗಳಿಂದ ನೇಕಾರಿಕೆ ನಡೆಸಿಕೊಂಡು ಬರುತ್ತಿದ್ದು, ಇದನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಸೂರತ್​ನಲ್ಲಿರುವ ಆಧುನಿಕ ತಂತ್ರಜ್ಞಾನದ ರೇಪಿಯರ್​ ಏರ್​ಜೆಟ್​ ಮಗ್ಗಗಳಿಂದ ಮೂಲ ನೇಕಾರರು ಬೀದಿಗೆ ಬರುವಂತಾಗಿದೆ. ಹೀಗಾಗಿ ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೇಕಾರರ ಮುಖಂಡ ನಾಗರಾಜು ಒತ್ತಾಯಿಸಿದರು.
ನಗರದ ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ದೊಡ್ಡಬಳ್ಳಾಪುರ ಟೆಕ್ಸ್​ಟೈಲ್ಸ್​ ವೀವರ್ಸ್​ ಅಸೋಸಿಯೇಷನ್​ನಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ನೇಕಾರಿಕೆಯಲ್ಲಿ ಬಣ್ಣ ಮಾಡುವವರು, ವೈಡಿಂಗ್​ ಹಾಕುವವರು, ವಾರ್ಪು ಸುತ್ತುವವರು, ಅಚ್ಚು ಕೆಚ್ಚುವವರು ಸೇರಿ ಸುಮಾರು 1 ಲಕ್ಷ ಜನ ನೇಕಾರಿಕೆ ನಂಬಿ ಜೀವನ ನಡೆಸುತ್ತಿದ್ದಾರೆ ಎಂದರು.
ಈ ಮಧ್ಯೆ ನೇಕಾರಿಕೆಯಲ್ಲಿ ಉತ್ಪಾದಿಸುವ ಸೀರೆಗಳನ್ನು ಸೂರತ್​ನಲ್ಲಿರುವ ಆಧುನಿಕ ತಂತ್ರಜ್ಞಾನದ ರೇಪಿಯರ್​ ಏರ್​ಜೆಟ್​ ಮಗ್ಗಗಳಲ್ಲಿ ಉತ್ಪಾದನೆ ಮಾಡುತ್ತಿದ್ದು, ದೊಡ್ಡಬಳ್ಳಾಪುರಕ್ಕೆ ತಂದು ಮಾರುತ್ತಿದ್ದಾರೆ. ಕೈಮಗ್ಗದಿಂದ ನೇಯ್ದ ಸೀರೆಯ ನೈಜ ಬೆಲೆಗಿಂತ ಅರ್ಧ ಬೆಲೆಗೆ ಮಾರಾಟ ಮಾಡಿ ದೊಡ್ಡಬಳ್ಳಾಪುರ ನೇಕಾರಿಕೆ ಉದ್ಯಮ ಹಾಳು ಮಾಡುತ್ತಿದ್ದಾರೆ. ಆಧುನಿಕ ಮಗ್ಗಗಳಲ್ಲಿ ಹೆಚ್ಚು ಸೀರೆಗಳ ಉತ್ಪಾದನೆಯಾಗುತ್ತಿದೆ. ಆಧುನಿಕ ಮಗ್ಗಗಳಿಂದ ಅನ್ಯ ರಾಜ್ಯಗಳಿಂದ ದಿನನಿತ್ಯ ಹತ್ತಾರು ಸಾವಿರ ಸೀರೆಗಳು ದೊಡ್ಡಬಳ್ಳಾಪುರಕ್ಕೆ ಬರುತ್ತಿದ್ದು,
ಅದನ್ನು ಅರ್ಧ ಬೆಲೆಗೆ ಮಾರಾಟ ಮಾಡಿ ದೊಡ್ಡಬಳ್ಳಾಪುರದಲ್ಲಿ ತಯಾರಿಸುವ ಸೀರೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗದೆ ತ್ರಿಶಂಕು ಸ್ಥಿತಿಯಲ್ಲಿ ಇದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗಲೇ ತಡೆಯದಿದ್ದರೆ ನೇಕಾರರು ಮತ್ತು ಇದನ್ನು ನಂಬಿರುವ ಹಲವರು ಬೀದಿ ಪಾಲಾಗುವ ಸಾಧ್ಯತೆಯಿದೆ. ಈ ಉದ್ಯೋಗ ನಂಬಿ ನೇಕಾರರು ಬ್ಯಾಂಕ್​ ಮತ್ತು ಸಹಕಾರ ಸಂಘಗಳಲ್ಲಿ ಸಾಲ ಮಾಡಿದ್ದಾರೆ. ರೇಪಿಯರ್​ ಏರ್​ಜೆಟ್​ ಮತ್ತು ಇತರ ಆಧುನಿಕ ಮಗ್ಗಗಳಿಂದ ಬರುವ ಒತ್ತಡ ತಾಳಲಾರದೆ ಬ್ಯಾಂಕುಗಳಿಗೆ ಹಣ ಸಂದಾಯ ಮಾಡಲಾಗದೆ ಆತ್ಮಹತ್ಯೆಗೆ ಮುಂದಾಗಬಹುದು ಎಂದರು.
ನೇಕಾರರ ಬೇಡಿಕೆಯೇನು?
ದೊಡ್ಡಬಳ್ಳಾಪುರದಲ್ಲಿ ಕೆಲ ವ್ಯಾಪಾರಸ್ಥರು ರೇಪಿಯರ್​ ಮತ್ತು ಸೂರತ್​ನಿಂದ ತರುವ ಏರ್​ಜೆಟ್​ ಸೀರೆಗಳನ್ನು ಇಲ್ಲಿಗೆ ತಂದು ಮಾರುವುದನ್ನು ಕೂಡಲೇ ನಿಲ್ಲಿಸಬೇಕು ಎಂಬುದು ನೇಕಾರರ ಪ್ರಮುಖ ಬೇಡಿಕೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net