ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ಸ್: ಕರ್ನಾಟಕಕ್ಕೆ ಆತಿಥೇಯ ಮುಂಬೈ ಎದುರಾಳಿ

ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ಸ್: ಕರ್ನಾಟಕಕ್ಕೆ ಆತಿಥೇಯ ಮುಂಬೈ ಎದುರಾಳಿ
ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ಸ್: ಕರ್ನಾಟಕಕ್ಕೆ ಆತಿಥೇಯ ಮುಂಬೈ ಎದುರಾಳಿ
Published on
ಮುಂಬೈ: ಐಸಿಸಿ ಟಿ20 ವಿಶ್ವಕಪ್ ಜ್ವರದ ನಡುವೆ ದೇಶೀಯ ಟೂರ್ನಿ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ಲ್ ಪಂದ್ಯಗಳು ಶುಕ್ರವಾರ ಆರಂಭವಾಗಲಿವೆ. ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ಹಾಗೂ 42 ಬಾರಿಯ ಪ್ರಶಸ್ತಿ ವಿಜೇತ ಮುಂಬೈ ತಂಡಗಳ ನಡುವಿನ ಹೈವೋಲ್ಟೇಜ್ ಕಾದಾಟಕ್ಕೆ ಬಿಕೆಸಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಟೀಮ್ ಇಂಡಿಯಾದ ಕೆಲ ಪ್ರಮುಖ ಆಟಗಾರರು ಕಣಕ್ಕಿಳಿಯಲಿದ್ದು, ನಾಕೌಟ್ ಪಂದ್ಯಗಳು ಐದು ದಿನ ನಿಗದಿಯಾಗಿವೆ.
2023-24ರ ಆವೃತ್ತಿಯ ನಂತರ ಕರ್ನಾಟಕ ತಂಡ ನಾಕೌಟ್‌ಗೆ ಅರ್ಹತೆ ಪಡೆದುಕೊಂಡಿದ್ದು, ಭಾರತ ಟೆಸ್ಟ್ ತಂಡದ ಆಟಗಾರ ಕೆಎಲ್ ರಾಹುಲ್, ಪ್ರಸಿದ್ಧ ಕೃಷ್ಣ ಜತೆಗೆ ಮಯಾಂಕ್ ಅಗರ್ವಾಲ್, ನೂತನ ನಾಯಕ ದೇವದತ್ ಪಡಿಕ್ಕಲ್ ಜತೆಗೆ ಕರುಣ್ ನಾಯರ್ ಪುನರಾಗಮನ ಕರ್ನಾಟಕದ ಬ್ಯಾಟಿಂಗ್ ಬಲ ಹೆಚ್ಚಿಸಿದೆ. ಮಧ್ಯಪ್ರದೇಶ ವಿರುದ್ಧದ ಕೊನೇ ಲೀಗ್ ಪಂದ್ಯ ಚೇಸಿಂಗ್ ಸಾಹಸ ಪಡಿಕ್ಕಲ್ ಪಡೆಗೆ ನಾಕೌಟ್ ಆರ್ಹತೆ ನೀಡಿದೆ. 
ಇತ್ತ ಮುಂಬೈ ತಂಡ ನಾಕೌಟ್ ಪಂದ್ಯಗಳಲ್ಲಿ ಹೆಚ್ಚು ಬಲಿಷ್ಠ ಎನಿಸಿದ್ದು, ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್, ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ತನುಷ್ ಕೋಟ್ಯನ್ ಅಂಥ ಮ್ಯಾಚ್ ವಿನ್ನರ್ ಆಟಗಾರರನ್ನು ಹೊಂದಿದೆ.
ಭರ್ಜರಿ ಫಾರ್ಮ್‌ನಲ್ಲಿರುವ ಸಫ್ರ್ರಾಜ್ ಖಾನ್ ವೈರಲ್ ಫೀವರ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಕ್ವಾರ್ಟರ್‌ಫೈನಲ್ ಪಂದ್ಯಕ್ಕೆ ಅನುಮಾನ ಎನಿಸಿದೆ. ಅನುಭವಿ ಸಿದ್ಧೇಶ್ ಲಾಡ್ (737 ರನ್) ಸಹ ತಂಡಕ್ಕೆ ಆಧಾರವಾಗಿದ್ದಾರೆ.
ಉಭಯ ತಂಡಗಳ ಹಿಂದಿನ ಐದು ಹಣಾಹಣಿಯಲ್ಲಿ ಕರ್ನಾಟಕ ತಂಡವೇ ಮೇಲುಗೈ ಸಾಧಿಸಿದ್ದು, ಎರಡರಲ್ಲಿ ಡ್ರಾ, ಮೂರರಲ್ಲಿ ಗೆಲುವು ದಾಖಲಿಸಿದೆ. ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್ರೌಂಡರ್ ಶ್ರೇಯಸ್ ಗೋಪಾಲ್, ಹಾಲಿ ಋತುವಿನಲ್ಲಿ 37 ವಿಕೆಟ್ ಪಡೆದಿದ್ದಾರೆ. ಜತೆಗೆ 441 ರನ್ ಕಲೆಹಾಕಿ ಕೆಳ ಮಧ್ಯಮ ಕ್ರಮಾಂಕದಲ್ಲಿ ಪ್ರಮುಖ ಆಧಾರ ಸ್ತಂಭವಾಗಿದ್ದಾರೆ. ಎರಡು ತಂಡಗಳಲ್ಲಿ ಭಾರತ ಪರ ಟೆಸ್ಟ್ ಆಡಿರುವ ಅನುಭವಿ ಆಟಗಾರರಿದ್ದು, ಜಿದ್ದಾಜಿದ್ದಿನ ಹೋರಾಟದ ನಿರೀಕ್ಷೆ ಇದೆ. 
ಮುಖಾಮುಖಿ: 27
ಕರ್ನಾಟಕ: 4
ಮುಂಬೈ: 10
ಡ್ರಾ: 13
ಆರಂಭ: ಬೆಳಗ್ಗೆ 9.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ಇತರ ಕ್ವಾರ್ಟರ್‌ಫೈನಲ್ಸ್
ಬಂಗಾಳ-ಆಂಧ್ರ
ಎಲ್ಲಿ: ಕಲ್ಯಾಣಿ
ಜಾರ್ಖಂಡ್-ಉತ್ತರಾಖಂಡ
ಎಲ್ಲಿ: ಜೆಮ್‌ಶೆಡ್‌ಪುರ
ಮಧ್ಯಪ್ರದೇಶ-ಜಮ್ಮು-ಕಾಶ್ಮೀರ
ಎಲ್ಲಿ: ಇಂದೋರ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net