ಬೆಂಗಳೂರು: ನಗರದಾದ್ಯಂತ ಶುಕ್ರವಾರ ಶ್ರದ್ಧಾಭಕ್ತಿಯಿಂದ ರಾಮನವಮಿ ಆಚರಣೆಗೊಂಡಿತು. ಎಲ್ಲೆಡೆ ‘ಶ್ರೀರಾಮ ಜಯರಾಮ’ ಎಂಬ ರಾಮನಾಮ ಜಪ ಮೊಳಗಿತು. ದೇವಾಲಯಗಳಲ್ಲಿ ಅಭಿಷೇಕ, ಹೂವಿನ ಅಲಂಕಾರ, ರಾಮತಾರಕ ಹೋಮ ಸೇರಿ ವಿಶೇಷ ಪೂಜೆ ನಡೆಯಿತು.
ರಾಮನವಮಿ ಹಿನ್ನೆಲೆಯಲ್ಲಿ ಬಡಾವಣೆಗಳಲ್ಲಿ ಹಾಗೂ ರಸ್ತೆಗಳಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿಗಳನ್ನು ಪ್ರಸಾದದ ರೂಪದಲ್ಲಿ ವಿತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕೆಲ ದೇವಾಲಯಗಳಲ್ಲಿ ಸಂಜೆ ಸೀತಾ ಕಲ್ಯಾಣೋತ್ಸವ ಹಾಗೂ ಭಜನೆ, ಕೀರ್ತಿನೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಗರದ ಕೆಲ ರಸ್ತೆಗಳಲ್ಲಿ ಹವ್ಯಾಸಿ ಕಲಾವಿದರು ಮೈಗೆ ಬಣ್ಣ ಬಳಿದುಕೊಂಡು, ರಾಮ, ಸೀತೆ, ಲಕ್ಷ್ಮಣ, ಆಂಜನೆಯ ಸೇರಿ ಹಲವು ವೇಷಗಳಲ್ಲಿ ಕಾಣಿಸಿಕೊಂಡದ್ದು, ಮಕ್ಕಳು ಹಾಗೂ ಜನರನ್ನು ಆಕರ್ಷಿಸಿತು.