

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಹಾಗೂ ಪ್ರಭಾವಿ ಆರೋಪಿಗಳಿಗೆ ಮತ್ತೆ ರಾಜಾತಿಥ್ಯ ಕಲ್ಪಿಸುತ್ತಿರುವುದು ಬಯಲಾಗಿದೆ. ಜೈಲಿನಲ್ಲಿ ನಿಷೇಧಿತ ವಸ್ತುಗಳು ಪೂರೈಕೆ ಮಾಡಲಾಗುತ್ತಿರುವ ಆರೋಪ ಕೇಳಿ ಬಂದಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಯಿದ್ದ ಬ್ಯಾರಕ್ ಮೇಲೆ ನಡೆದ ಸಿಸಿಬಿ ದಾಳಿ ವೇಳೆ ಅಂಡ್ರಾಯಿಡ್ ಮೊಬೈಲ್, ಪೆನ್ಡ್ರೖೆವ್, ನೋಟ್ ಬುಕ್ ಸೇರಿ ಇತರೆ ವಸ್ತುಗಳು ಪತ್ತೆಯಾಗಿರುವ ಪರಿಣಾಮ ಪ್ರಜ್ವಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಿಸಿಬಿ ಅಧಿಕಾರಿಗಳು ಮಂಗಳವಾರ ತಡರಾತ್ರಿವರೆಗೆ ನಡೆಸಿದ ದಾಳಿ ವೇಳೆ ವಿಐಪಿ ಕೈದಿಗಳ ಬ್ಯಾರಕ್ನಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿರುವ ಪರಿಣಾಮ ಸಜಾಬಂಧಿ ಕೈದಿ ಪ್ರಜ್ವಲ್ ಹಾಗೂ ಆತನ ಬ್ಯಾರಕ್ನಲ್ಲಿದ್ದ ವಿಚಾರಣಾಧೀನ ಕೈದಿ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸಿಸಿಬಿ ಮಾದಕ ವಸ್ತು ನಿಗ್ರಹದ ದಳದ ಇನ್ಸ್ಪೆಕ್ಟರ್ ಎಂ.ಎಲ್.ಸುಬ್ರಹ್ಮಣ್ಯಸ್ವಾಮಿ ಅವರು ಎಫ್ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಈಗ ಪ್ರಜ್ವಲ್ ಎ2 ಆರೋಪಿಯನ್ನಾಗಿ ಮಾಡಲಾಗಿದೆ.
ದಾಳಿ ವೇಳೆ ಪೆನ್ಡ್ರೖೆವ್, ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ. ಅಧಿಕಾರಿಗಳು ಮೊಬೈಲ್ ಜತೆಗೆ ಪ್ರಜ್ವಲ್ ಬ್ಯಾರಕ್ನಲ್ಲಿ ಪೆನ್ ಡ್ರೖೆವ್ ಪತ್ತೆ ಮಾಡಿದ್ದಾರೆ. ಅದರಲ್ಲಿ ಏನಿದೆ ಎಂಬುದು ತೀವ್ರ ಕೂತುಹಲ ಮೂಡಿಸಿದೆ. ಮೊಬೈಲ್ ಜತೆಗೆ ಪೆನ್ಡ್ರೖೆವ್ ಜೈಲಿನ ಒಳಗೆ ಹೇಗೆ ಬಂತು ಎಂಬುದು ಪೊಲೀಸರ ತನಿಖೆಯಿಂದ ತಿಳಿಯಲಿದೆ. ಪ್ರಜ್ವಲ್ ಬಳಕೆ ಮಾಡುತ್ತಿದ್ದ ಸಿಮ್ ಕಾರ್ಡ್ ಆಂಧ್ರಪ್ರದೇಶದ ಮೂಲದ್ದಾಗಿದೆ.
ಪ್ರಜ್ವಲ್ ರೇವಣ್ಣ ಕೊಠಡಿಯಲ್ಲಿ ದೊರೆತ ಮೊಬೈಲ್, ಪೆನ್ಡ್ರೖೆವ್ ಸೇರಿ ಇತರೆ ವಸ್ತುಗಳ ಹಿನ್ನೆಲೆಯಲ್ಲಿ ವಿಐಪಿ ಸೆಲ್ ಕರ್ತವ್ಯದಲ್ಲಿದ್ದ ಸಹಾಯಕ ಮೇಲ್ವಿಚಾರಕ ಈರಣ್ಣ ರಂಗಾಪುರ ಅವರನ್ನು ಡಿಜಿಪಿ ಅಲೋಕ್ ಕುಮಾರ್ ಅಮಾನತುಗೊಳಿಸಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ, ಜೈಲು ಅಧೀಕ್ಷಕ ಅಂಶು ಕುಮಾರ್ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ವಿಐಪಿ ಸೆಲ್ಗೆ ಇಷ್ಟೊಂದು ಭದ್ರತೆ ಕಲ್ಪಿಸಲಾಗಿದ್ದರು ಮೊಬೈಲ್, ಪೆನ್ಡ್ರೖೆವ್ ಹಾಗೂ ನೋಟ್ ಪುಸ್ತಕಗಳನ್ನು ಕೈದಿಗಳಿಗೆ ಪೂರೈಕೆಯಾಗಿರುವುದು ಹೇಗೆ ಎಂಬ ಕುರಿತು ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಇಲಾಖೆಗೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಡಿಐಜಿ ನೇತೃತ್ವದಲ್ಲಿ ಇಲಾಖೆ ತನಿಖೆ: ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್ ಫೋನ್, ಚಾರ್ಜರ್ ಹಾಗೂ ಪೆನ್ಡ್ರೖೆವ್ ಪತ್ತೆಯಾದ ಪ್ರಕರಣದ ಆಂತರಿಕ ತನಿಖೆಯನ್ನು ಕಾರಾಗೃಹ ಇಲಾಖೆ ಡಿಐಜಿ ಜಿನೇಂದ್ರ ಖನಗಾವಿ ನೇತೃದಲ್ಲಿ ನಡೆಸಲು ಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ. ಅಲ್ಲದೆ ಸಿಸಿಬಿ ದಾಳಿ ನಡೆಸಿದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಕೈದಿಯ ಸಮವಸ್ತ್ರ ಧರಿಸದೆ ಇರುವ ಕುರಿತು ಸ್ಪಷ್ಟನೆ ನೀಡುವಂತೆ ಜೈಲಿನ ಸೂಪರಿಂಟೆಂಡೆಂಟ್ಗೆ ಕೇಳಲಾಗಿದೆ. ಇಂದಿನಿಂದ (ಆ.13)ರಿಂದ ತನಿಖೆ ನಡೆಯಲಿದೆ.
ಪರಪ್ಪನ ಅಗ್ರಹಾರ ಜೈಲಿನ ವಿಐಪಿ ಬ್ಯಾರಕ್ನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. 16 ಸೆಕೆಂಡ್ನ ವಿಡಿಯೋದಲ್ಲಿ ಸ್ನೇಹಿತರ ಜತೆ ಪ್ರಜ್ವಲ್ ಮಾತನಾಡಿದ್ದು, ಹೊರಗಡೆ ಬಾ, ನಾನು ಅವರಿಗೆ ಫೋನ್ ಮಾಡಿಲ್ಲ. ನೀನು ಹೇಳಿದ ಮೇಲೆ ಮೊನ್ನೆ ಮಾಡಿದ್ದೆ. ಅತ್ತುಕೊಂಡು ಕೂತಿದ್ದರು, ನೀನು ಫೋನ್ ಮಾಡಿಲ್ಲ. ಏನ್ ಮಾಡ್ತಿದ್ದೆ ಎಂದು ಸಂಭಾಷಣೆ ನಡೆಸಲಾಗಿದೆ. ಅಲ್ಲದೆ, ಪ್ರಜ್ವಲ್ರನ್ನು ಹೈಸೆಕ್ಯೂರಿಟಿ ಸೆಲ್ನಿಂದ ಜನರಲ್ ಸೆಲ್ಗೆ ಜೈಲು ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. 20 ಕೈದಿಗಳಿರುವ ಕೊಠಡಿಗೆ ಪ್ರಜ್ವಲ್ ಮತ್ತು ವಿಚಾರಣಾಧೀನ ಕೈದಿ ಪ್ರತಾಪ್ ರಾಯ್ನನ್ನು ಸ್ಥಳಾಂತರ ಮಾಡಲಾಗಿದೆ.
"ವಿಐಪಿ ಸೆಲ್ನಲ್ಲಿ ದೊರೆತ ಮೊಬೈಲ್, ಪೆನ್ಡ್ರೖೆವ್ ಬಗ್ಗೆ ಓರ್ವ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಪ್ರಜ್ವಲ್ ರೇವಣ್ಣ ಸಮವಸ್ತ್ರ ಧರಿಸದಿರುವುದರ ಕುರಿತು 3 ತಿಂಗಳ ಹಿಂದೆ ದೂರು ಬಂದಾಗ ನಾನು ಮೆಮೋ ಕಳಿಸಿದ್ದೇನೆ. ಅದು ಪಾಲನೆಯಾಗಿಲ್ಲ. 7 ತಿಂಗಳಲ್ಲಿ 300 ಮೊಬೈಲ್ ಸೀಜ್ ಮಾಡಲಾಗಿದೆ. ಆದರೂ ಮೊಬೈಲ್, ಸಿಮ್ಳು ಹೇಗೆ ಬರುತ್ತಿವೆ ತಿಳಿಯುತ್ತಿಲ್ಲ" ಎಂದು ಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ಜೈಲಿನಲ್ಲಿ ನಡೆದ ಸಿಸಿಬಿ ದಾಳಿಯನ್ನು ಸ್ವಯಂ ಪ್ರೇರಣೆಯಿಂದ ನಾನೇ ಮಾಡಿಸಿದ್ದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಕಳೆದ ಬಾರಿ ನಾನೇ ಜೈಲಿಗೆ ಭೇಟಿ ನೀಡಿದ್ದೆ. ಆ ಸಂದರ್ಭದಲ್ಲಿ ಕೆಲ ಲೋಪಗಳನ್ನ ನೋಡಿದ್ದೆ. ಅದನ್ನು ಹಿರಿಯ ಅಧಿಕಾರಿಗಳ ಜತೆಗೆ ಚರ್ಚೆ ಮಾಡಿದ ನಂತರ ಮುಖ್ಯಮಂತ್ರಿಯವರ ಅನುಮತಿ ಪಡೆದು ದಾಳಿ ಮಾಡಿಸಿದೆ. ಸುಮಾರು 100 ಸಿಸಿಬಿ ಅಧಿಕಾರಿಗಳಿಂದ ದಾಳಿ ಆಗಿದೆ. ಈಗಾಗಲೇ ನಾವು ಕ್ರಮ ತೆಗೆದುಕೊಂಡಿದ್ದೇವೆ. ನಮ್ಮ ಅಧಿಕಾರಿಗಳ ಮಾಹಿತಿ, ನನ್ನ ಮಾಹಿತಿ ಆಧಾರದ ಮೇಲೆ ದಾಳಿ ಆಗಿದೆ ಎಂದರು. ಅಕ್ರಮಕ್ಕೆ ಸಹಕಾರ ಕೊಟ್ಟ ಅಧಿಕಾರಿಗಳನ್ನು ಅಮಾನತು ಮಾಡಲು ಆದೇಶ ಕೊಟ್ಟಿದ್ದೇನೆ. ಸುಧಾರಣೆಗೆ ಏನು ಮಾಡಬೇಕು ಅಂತ ತಿಳಿಸಿದ್ದೇನೆ, ಬರಿ ಪರಪ್ಪನ ಅಗ್ರಹಾರ ಅಷ್ಟೇ ಅಲ್ಲದೆ ರಾಜ್ಯದಲ್ಲಿರುವ ಎಲ್ಲಾ ಜೈಲುಗಳ ಮೇಲೂ ದಾಳಿ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ 80ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಏಕಕಾಲಕ್ಕೆ ಪರಪ್ಪನ ಅಗ್ರಹಾರದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಅಧಿಕಾರಿಗಳ ತಂಡ ಅದೇ ವಿಐಪಿ ಬ್ಯಾರಕ್ಗಳಲ್ಲಿ ತಪಾಸಣೆ ನಡೆಸಿದ ವೇಳೆ ಮತ್ತೆ 2 ಮೊಬೈಲ್ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಗೆದಷ್ಟು ಅವಾಂತರ ಎಂಬಂತೆ ಪರಪ್ಪನ ಅಗ್ರಹಾರದಲ್ಲಿ ಇನ್ನೂ ನೂರಾರು ಮೊಬೈಲ್ಗಳು ವಿಚಾರಣಾಧೀನ ಹಾಗೂ ಸಜಾಬಂಧಿ ಕೈದಿಗಳ ಬಳಿ ಇವೆ ಎನ್ನಲಾಗಿದೆ.