ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ಕೆಲವೆಡೆ ಸಂಕ್ರಾಂತಿ ಹಬ್ಬಕ್ಕೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಚಿಕ್ಕಮಗಳೂರಿನ ಬಾಳೆಹೊನ್ನೂರು, ತರೀಕೆರೆ, ಅಜ್ಜಂಪುರ, ಕಮ್ಮರಡಿ, ಜಯಪುರ, ಬೆಳಗಾವಿಯ ಹಿಡಕಲ್ ಅಣೆಕಟ್ಟು, ಬೆಳಗಾವಿ ವಿಮಾನ ನಿಲ್ದಾಣ, ನಿಪ್ಪಾಣಿ, ದಕ್ಷಿಣ ಕನ್ನಡದ ಸುಳ್ಯ, ಉಡುಪಿ, ಹಾಸನದ ಸಾಲಗಾಮೆ ಸೇರಿ ರಾಜ್ಯದ ವಿವಿಧೆಡೆ ವರ್ಷದ ಮೊದಲ ಮಳೆಯ ಸಿಂಚನವಾಗಿದೆ.
ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮೈಸೂರಿನಲ್ಲಿ ಜ.15ರಂದು ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ. ಉಳಿದ ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಗಿಂತ 3-4 ಡಿ.ಸೆ.ಉಷ್ಣಾಂಶ ಹೆಚ್ಚಾಗುವ ಸಂಭವ ಇದೆ.
ಬೆಂಗಳೂರು ನಗರದಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದೆ. ಈ ವೇಳೆ ಲಘು ಪ್ರಮಾಣದಲ್ಲಿ ಮಳೆಯಾಗಲಿದೆ. ಗರಿಷ್ಠ, ಕನಿಷ್ಠ ತಾಪಮಾನ ಕ್ರಮವಾಗಿ 28 ಮತ್ತು 17 ಡಿ.ಸೆ.ದಾಖಲಾಗಬಹುದು ಎಂದು ಇಲಾಖೆ ಮಾಹಿತಿ ನೀಡಿದೆ.