ಮುಂದಿನ 4 ದಿನ ರಾಜ್ಯದ ಹಲವೆಡೆ ಮಳೆ: ಕರಾವಳಿ, ಮಲೆನಾಡಲ್ಲಿ ಯೆಲ್ಲೋ ಅಲರ್ಟ್​

ಮುಂದಿನ 4 ದಿನ ರಾಜ್ಯದ ಹಲವೆಡೆ ಮಳೆ, ಚಿತ್ರಕೃಪೆ: ANI
ಮುಂದಿನ 4 ದಿನ ರಾಜ್ಯದ ಹಲವೆಡೆ ಮಳೆ, ಚಿತ್ರಕೃಪೆ: ANI
Published on

ಬೆಂಗಳೂರು: ಕರಾವಳಿ, ಮಲೆನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದ್ದು, ಮುಂದಿನ ನಾಲ್ಕು ದಿನ ರಾಜ್ಯ ವಿವಿಧೆಡೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನ ಜಾವದಿಂದಲೇ ಆರಂಭಗೊಂಡ ಮಳೆ ಬಿಟ್ಟು ಬಿಟ್ಟು ಸುರಿದಿದ್ದು, ಸಂಜೆ ವೇಳೆಗೆ ಬಿರುಸು ಪಡೆಯಿತು. ಕರಾವಳಿ ಜಿಲ್ಲೆಗಳಿಗೆ 2 ದಿನ ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡು ಮತ್ತು ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ 2 ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಕಲ್ಯಾಣಪುರ ಸಂತೆಕಟ್ಟೆ ಪ್ರದೇಶದಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಧರೆಗುರುಳಿದೆ. 

ಉಡುಪಿಯಿಂದ ಕುಂದಾಪುರ ಕಡೆಗೆ ಸಾಗುವ ಸರ್ವೀಸ್ ರಸ್ತೆ ಮೇಲೆ ಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಶಿವಮೊಗ್ಗ ಜಿಲ್ಲೆ ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಬೀಳುತ್ತಿದ್ದು, ಶರಾವತಿ, ತುಂಗಾ, ಭದ್ರಾ ನದಿಗಳ ಹರಿವು ಹೆಚ್ಚಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕಳಸ, ಕೊಪ್ಪ ಭಾಗದಲ್ಲಿ ಮಳೆಯಾಗುತ್ತಿದೆ.

ಹಾರಂಗಿ ಭರ್ತಿಗೆ 4 ಅಡಿ ಬಾಕಿ

ಕೊಡಗು ಜಿಲ್ಲಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಹಾರಂಗಿ ಜಲಾಶಯ ಭರ್ತಿಯಾಗಲು ಇನ್ನು 4.87 ಅಡಿಗಳಷ್ಟು ನೀರು ಬರಬೇಕಿದೆ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಬುಧವಾರ 2854.13 ಅಡಿಯಷ್ಟು ನೀರಿನ ಸಂಗ್ರಹವಿದೆ. ಕಾವೇರಿ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟದಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ.

ಕೃಷ್ಣೆಗೆ ಹರಿವು ಹೆಚ್ಚಳ

ಮಹಾರಾಷ್ಟ್ರ ಪಶ್ಚಿಮಘಟ್ಟ, ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂ ದಾಗಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ನೀರಿನ ಮಟ್ಟ ಹೆಚ್ಚಳವಾಗಿದೆ. ಹಿಡಕಲ್ ಜಲಾಶಯಕ್ಕೆ ನಿತ್ಯ 11,749 ಕ್ಯೂಸೆಕ್, ನವೀಲುತೀರ್ಥ ಜಲಾಶಯಕ್ಕೆ 1,814 ಕ್ಯೂಸೆಕ್ ಹರಿದು ಬರುತ್ತಿದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 75 ಸಾವಿರ ಕ್ಯೂಸೆಕ್ ನೀರು ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net