ಎಲ್​ನಿನೊ ಪ್ರಭಾವ ರಾಜ್ಯಾದ್ಯಂತ ಮಳೆ ಅಭಾವ: ಗಣೇಶ ವಿಸರ್ಜನೆಗೂ ನೀರಿಲ್ಲ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಂಗಾರು ವೈಫಲ್ಯದ ಪರಿಣಾಮ ಜಲ ಅಭಾವದಿಂದಾಗಿ ಈ ವರ್ಷ ರಾಜ್ಯದಲ್ಲಿ ಹಲವೆಡೆ ಗಣೇಶ ಮೂರ್ತಿಗಳ ವಿಸರ್ಜನೆಗೂ ಸಂಕಷ್ಟ ಎದುರಾಗಿದೆ. ಮಳೆ ಕೊರತೆಯಿಂದಾಗಿ ರಾಜ್ಯದ ಬಹುತೇಕ ಕಡೆ ಕೆರೆಕುಂಟೆ, ಕೊಳವೆಬಾವಿಗಳು ಬತ್ತಿವೆ. ಹೀಗಾಗಿ ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಬರ ಬರಸಿಡಿಲಾಗಿ ಎದುರಾಗಿದೆ. ಸಾಮಾನ್ಯವಾಗಿ ಭಾದ್ರಪದ ಮಾಸದಲ್ಲಿ ಮಳೆಯಾಗುತ್ತದೆ. ಆದರೆ, ಈ ವರ್ಷ ‘ಎಲ್​ನಿನೋ’ ಪ್ರಭಾವ ಮುಂಗಾರಿನ ಮೇಲೆ ನೇರ ಪರಿಣಾಮ ಬೀರಿದೆ. ಇದರಿಂದಾಗಿ ಜೂನ್​ನಿಂದಲೇ ಮಳೆ ಅಭಾವ ಕಾಡಲಾರಂಭಿಸಿದೆ. ಹೀಗಾಗಿ ಜಿಲ್ಲಾಡಳಿತ, ನಗರ ಪಾಲಿಕೆ, ಪಾಲಿಕೆಗಳು, ಪಟ್ಟಣ ಮತ್ತು ಗ್ರಾಪಂಗಳಿಗೆ ಮೂರ್ತಿಗಳ ವಿಸರ್ಜನೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾದ ಸ್ಥಿತಿ ನಿರ್ವಣವಾಗಿದೆ.
ರಾಜಧಾನಿಯಲ್ಲೂ ಕೊರತೆ: ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರತಿವರ್ಷ ಬೆಂಗಳೂರೊಂದರಲ್ಲೇ 10 ಲಕ್ಷಕ್ಕೂ ಅಧಿಕ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಬಾರಿಯೂ ಗಲ್ಲಿಗಲ್ಲಿಗಳಲ್ಲಿ ಗಣೇಶ ಮೂರ್ತಿ ಇಡಲು ಸಿದ್ಧತೆ ನಡೆದಿದೆ. ಆದರೆ ಈ ಬಾರಿ ಮಳೆ ಇಲ್ಲದೆ ಗಣೇಶ ಮೂರ್ತಿ ವಿಸರ್ಜನೆಗೆ ಸಮಸ್ಯೆ ಉಂಟಾಗಿದೆ. ಮೂರ್ತಿಗಳನ್ನು ಒಣಗಿದ ಕೆರೆಯ ಮಣ್ಣಿನಲ್ಲಿ ಅಥವಾ ಖಾಲಿ ಜಾಗದಲ್ಲಿ ವಿಸರ್ಜಿಸುವ ಸ್ಥಿತಿ ಇದೆ. ಹೀಗಾದಲ್ಲಿ ನಂತರದ ದಿನಗಳಲ್ಲಿ ಆ ಮೂರ್ತಿಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇದರಿಂದ ಧಾರ್ವಿುಕ ಭಾವನೆಗಳಿಗೆ ಧಕ್ಕೆ ಉಂಟಾಗಲಿದೆ. ಹಾಗಾಗಿ, ಪೂರ್ಣವಾಗಿ ನೀರಿರುವ ಜಾಗ ಅಥವಾ ಕಲ್ಯಾಣಿಗಳಲ್ಲಿ ಮಾತ್ರ ಮೂರ್ತಿಗಳನ್ನು ವಿಸರ್ಜಿಸುವಂತೆ ಜಿಬಿಎ ಮನವಿ ಮಾಡಿದೆ.

ಹೇಗಿದೆ ಕರ್ನಾಟಕದ ಪರಿಸ್ಥಿತಿ?

101 ತಾಲೂಕುಗಳು ಬರಪೀಡಿತ ಎಂದು ಘೋಷಣೆ
ಕೆಎಸ್​ಎನ್​ಡಿಎಂಸಿ ಪ್ರಕಾರ 182 ತಾಲೂಕಲ್ಲಿ ಬರ
ಈ ವರ್ಷ ರಾಜ್ಯದ ಶೇ.75 ಕೆರೆಗಳಲ್ಲಿ ನೀರು ಖಾಲಿ

ವಿಸರ್ಜನೆಗೆ ಹೀಗೆ ಮಾಡಿ

ನೀರಿನ ಅಭಾವ ಇದ್ದಲ್ಲಿ ಮನೆಯಲ್ಲೇ ದೊಡ್ಡ ಪಾತ್ರೆ/ ಬಕೆಟ್​ನಲ್ಲಿ ನೀರು ತುಂಬಿಸಿ ವಿಸರ್ಜಿಸಿ
ಮೂರ್ತಿ ಸಂಪೂರ್ಣವಾಗಿ ಕರಗಿದ ಬಳಿಕ ಆ ಮಣ್ಣಿನ ನೀರನ್ನು ಗಿಡ ಅಥವಾ ತೋಟಕ್ಕೆ ಹಾಕಿ
ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗುವ ವಾಹನಗಳನ್ನು ಬಳಸಿಕೊಳ್ಳಿ
ಜೇಡಿಮಣ್ಣಿನಿಂದ ಮಾಡಿದ ಸಣ್ಣ ಗಾತ್ರದ ಮೂರ್ತಿಗಳಿಗೆ ಆದ್ಯತೆ ನೀಡಿ, ಹಾನಿಕಾರಕ ರಾಸಾಯನಿಕದಿಂದ ತಯಾರಿಸಿದ ಮೂರ್ತಿ ಬಳಸದಂತೆ ಎಚ್ಚರವಹಿಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net