ಮಂಗಳವಾರ ಬೆಳಗ್ಗೆ ಅಳ್ನಾವರ ರೈಲು ನಿಲ್ದಾಣದಲ್ಲಿ ಎರಡು ಪ್ರಮುಖ ರೈಲುಗಳನ್ನು ಬಹಳ ಹೊತ್ತು ನಿಲುಗಡೆ ಮಾಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಬೆಂಗಳೂರು -ಬೆಳಗಾವಿ ಎಕ್ಸಪ್ರೆಸ್ (ಗಾಡಿ ಸಂಖ್ಯೆ-20653) 6.16ಕ್ಕೆ ಅಳ್ನಾವರಕ್ಕೆ ಆಗಮಿಸಿ 11.07ಕ್ಕೆ ಹಾಗೂ ರಾಣಿ ಚನ್ನಮ್ಮ ಎಕ್ಸಪ್ರೆಸ್ (ಗಾಡಿ ಸಂಖ್ಯೆ-16589) ಬೆಳ್ಳಿಗ್ಗೆ 8.14ಕ್ಕೆ ಆಗಮಿಸಿ 10.54ಕ್ಕೆ ಬೆಳಗಾವಿಯತ್ತ ಪ್ರಯಾಣ ಆರಂಭಿಸಿದವು. ಅತಿಯಾದ ವಿಳಂಬದಿಂದ ಪ್ರಯಾಣಿಕರು ಹಾಗೂ ಸ್ಟೇಷನ್ ಮಾಸ್ಟರ್ ನಡುವೆ ಮಾತಿನ ಚಕಮಕಿ ನಡೆಯಿತು. ದೂರದ ಊರುಗಳಿಗೆ ತೆರಳಬೇಕಿದ್ದ ಹಲವಾರು ಪ್ರಯಾಣಿಕರು ವಿಳಂಬದಿಂದ ಬೇಸತ್ತು ಖಾಸಗಿ ವಾಹನಗಳು ಮತ್ತು ಬಸ್ ಮೂಲಕ ಬೆಳಗಾವಿ ಸೇರಿದಂತೆ ತಮ್ಮ ಸ್ವಸ್ಥಾನಗಳಿಗೆ ಪ್ರಯಾಣ ಮುಂದುವರಿಸಿದರು.