ಬಳಗೆರೆ ರೈತ ಸಿದ್ದಣ್ಣ ಮಾತನಾಡಿ, ತಾತ ಮುತ್ತಾತನ ಕಾಲದಿಂದಲೂ ವ್ಯವಸಾಯ ಮಾಡಿಕೊಂಡು ಜಮೀನಿನ ಸ್ವಾಧಿನದಲ್ಲಿರುವ ರೈತರಿಗೆ ಹಣ ಬಿಡುಗಡೆ ವೇಳೆ ಅರಣ್ಯ ಇಲಾಖೆ ಮಧ್ಯೆ ಪ್ರವೇಶದಿಂದ ತೊಡಕಾಗಿದ್ದು, ಈ ಸಮಸ್ಯೆ ಬಗೆಹರಿಸಲು ಪಟ್ಟು ಹಿಡಿದರು. ಅಪರ ಜಿಲ್ಲಾಧಿಕಾರಿಗಳು ಯೋಜನೆಯ ಪೂರ್ಣ ಮಾಹಿತಿ ಮಂಡಿಸಿ, ಮನವೊಲಿಸಿದರು.
ಹಿರಿಯ ಮುಖಂಡ ಸಿದ್ದಗಂಗಪ್ಪ ಮಾತನಾಡಿ, ನಮ್ಮ ಭಾಗದಲ್ಲಿ ಸರ್ವೇ ಮಾಡಿ ಬರಡು ಭೂಮಿ ಎಂದು ವರದಿ ನೀಡಿದ್ದಾರೆ. ನ್ಯಾಯಾಲಯದ ಮೊರೆ ಹೋಗಿರುವ ನಮಗೆ ನ್ಯಾಯಾಲಯಕ್ಕೆ ಅಧಿಕಾರಿಗಳು ನೀಡಿರುವ ವರದಿ ಸಿಕ್ಕಿದೆ. ಬೆಂಗಳೂರಿಗೆ ನಿತ್ಯ ತರಕಾರಿ ಸರಬರಾಜು ಮಾಡುವ ಫಲವತ್ತಾದ ಭೂಮಿ ನಮ್ಮದು. ಯಾವ ಕಡೆಯಿಂದ ಬರಡು ಭೂಮಿಯಾಯಿತು ತಿಳಿಯುತ್ತಿಲ್ಲ. ಜಮೀನು ಕಳೆದುಕೊಳ್ಳುವ ರೈತನ ಮನೆಗೆ ವಿದ್ಯಾರ್ಹತೆ ನೋಡಿ ಕೆಲಸ ನೀಡುವುದಾಗಿ ತಿಳಿಸಿದ್ದಾರೆ. ಭೂಮಿ ಇದ್ದರೆ ಕುಟುಂಬವೇ ವ್ಯವಸಾಯ ಮಾಡಿ ಜೀವನ ಮಾಡಬಹುದು. ಕೆಲ ಮನೆಗಳಲ್ಲಿ ಹೆಚ್ಚು ಜನರಿದ್ದು, ಒಬ್ಬರ ಸಂಬಳದಿಂದ ಜೀವನ ಮಾಡಬಹುದೇ?. ಮಿಕ್ಕವರು, ಅವಿದ್ಯಾವಂತರು, ವಯಸ್ಸಾದವರು ಏನು ಮಾಡಬೇಕು? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.