ಮರು ಸರ್ವೇ ವರದಿ ತೀರ್ಮಾನದವರೆಗೆ ಕಲ್ಲು ಗಣಿಗೆ ಬ್ರೇಕ್

ಅರಮೇರಿ ಹಾಗೂ ಕಡಂಗ ಮೂರುರು ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಭೆ ನಡೆಸಿದರು. ಸಂದೀಪ್,  ರಾಹುಲ್, ಪ್ರದೀಪ್ ಕುಮಾರ್, ಮಂಜುಳಾ ಇತರರಿದ್ದರು.
ಅರಮೇರಿ ಹಾಗೂ ಕಡಂಗ ಮೂರುರು ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಭೆ ನಡೆಸಿದರು. ಸಂದೀಪ್, ರಾಹುಲ್, ಪ್ರದೀಪ್ ಕುಮಾರ್, ಮಂಜುಳಾ ಇತರರಿದ್ದರು.
Published on
ವಿರಾಜಪೇಟೆ: ಅರಮೇರಿ ಮತ್ತು ಕಡಂಗ ಮೂರುರು ಗ್ರಾಮದಂಚಿನಲ್ಲಿ ನಡೆಸುತ್ತಿದ್ದ ಕಲ್ಲು ಗಣಿಗಾರಿಕೆಗೆ ತಾತ್ಕಾಲಿಕ ತಡೆ ನೀಡಲಾಗಿದ್ದು, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮತ್ತೊಮ್ಮೆ ಸರ್ವೇ ನಡೆಸಿ ಅಂತಿಮ ತೀರ್ಮಾನಕ್ಕೆ ಬರುವವರೆಗೂ ಗಣಿಗಾರಿಕೆ ನಡೆಸದಂತೆ ಪರವಾನಗಿದಾರರಿಗೆ ಇಲಾಖೆಯ ಹಿರಿಯ ವಿಜ್ಞಾನಿ ಸಂದೀಪ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗಣಿಗಾರಿಕೆಯ ವಿವಾದ ಗಂಭೀರ ಸ್ವರೂಪ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿಗಳು ಸಭೆ ನಡೆಸುವಂತೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಅರಮೇರಿ ಹಾಗೂ ಕಡಂಗ ಮೂರುರು ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಗುತ್ತಿಗೆದಾರರ ಸಭೆಯನ್ನು ಬುಧವಾರ ಕಡಂಗ ಮೂರುರು ಗ್ರಾಮದ ಮಹಿಳಾ ಸಮಾಜದ ಸಭಾಂಗಣದಲ್ಲಿ ಕರೆಯಲಾಗಿತ್ತು.
ಈ ಸಭೆ ಬಹುತೇಕ ಗೊಂದಲ, ವಾಗ್ವಾದಗಳಿಂದಲೇ ಕೂಡಿತ್ತು. ಗಣಿಗಾರಿಕೆ ನಡಸುತ್ತಿದ್ದವರಿಂದ ಉಪ ಗುತ್ತಿಗೆ ಪಡೆದವರು ಎನ್ನಲಾದ ಗುತ್ತಿಗೆದಾರರೊಬ್ಬರು ವಿನಾಕಾರಣ ಸಭೆಯಲ್ಲಿ ಗೊಂದಲ ನಡೆಸಿದ್ದರಿಂದ ಮಾತಿನ ಚಕಮಕಿ ಮತ್ತು ವಾಗ್ವದ ತೀವ್ರವಾಗಿತ್ತು. ಬಿಗುವಿನ ವಾತವಾರಣ ಕಂಡು ಬಂದಾಗ ಪೊಲೀಸರು ಮಧ್ಯಪ್ರವೇಶ ಮಾಡಿ ವಾತಾವರಣ ತಿಳಿಗೊಳಿಸಿದರು.
ಈ ಗೊಂದಲಗಳ ನಡುವೆ ಬೇಸತ್ತ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಭೆಯಿಂದ ನಿರ್ಗಮಿಸಿದರು. ಈ ವೇಳೆ ಗ್ರಾಮಸ್ಥರು ಅವರನ್ನು ಕರೆತಂದು ಈ ಕುರಿತು ಸ್ಪಷ್ಟ ನಿಲವು ಏನೆಂದು ತಿಳಿಸಿ ಎಂದು ಆಗ್ರಹಿಸಿದರು.
ಗ್ರಾಮ ನಿವಾಸಿ ನಿವೃತ್ತ ಶಿಕ್ಷಕ ಗೋವಿಂದ ರಾಜು ಮಾತನಾಡಿ, ಕಲ್ಲು ಗಣಿಗಾರಿಕೆ ನಡೆಯುವ 50 ರಿಂದ 100 ಮೀ. ಒಳಗೆ ನಮ್ಮ ಕುಟುಂಬದವರ ಹಲವು ಮನೆಗಳು ಇದ್ದು, ಕಾಫಿ, ತೋಟ, ಗದ್ದೆ ಎಲ್ಲವೂ ಇದೆ. ಇದರಿಂದ ಉಭಯ ಗ್ರಾಮದ ನೆಲ, ಜಲ, ಕೃಷಿ ಎಲ್ಲದಕ್ಕೂ ಅಪಾಯ ಇದೆ. ಕಲ್ಲು ಗಣಿಗಾರಿಕೆ ನಡೆಸಲು ಗ್ರಾಮದವರನ್ನು ನಿರ್ಲಕ್ಷಿಸಿ ಪರವಾನಗಿ ನೀಡಿದ್ದು ತಪ್ಪು. ಕೂಡಲೇ ಅದನ್ನು ಹಿಂಪಡೆಯಲು ಆಗ್ರಹಿಸಿದರು.
ಕೋದಂಡ ಸುರ ಅಯ್ಯಪ್ಪ ಮಾತನಾಡಿ, ಈ ಭಾಗದಲ್ಲಿ ಗಣಿಗಾರಿಕೆ ಅರಂಭಿಸಿದರಿಂದ ಮಣ್ಣು ಹರಿದು ಪಕ್ಕದಲ್ಲಿರುವ ಕೆರೆ ಭಾಗಶಃ ಮುಚ್ಚುತ್ತಿದೆ. ಸ್ಫೋಟದ ತೀವ್ರತೆಗೆ ನೀರಿನ ಹರಿವಿನ ನಾಳಗಳ ಪಥ ಬದಲಾವಣೆಗೊಂಡು ಸುತ್ತಲಿನ ಕುಡಿಯುವ ನೀರಿನ ಸೆಲೆಗಳು ಬತ್ತು ಆತಂಕವಿದೆ ಎಂದರು.
ಇಲ್ಲಿ ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸದಿರುವುದು ಸರಿಯಾದ ನಡೆಯಲ್ಲ. ಇನ್ನಾದರೂ ಪರವಾನಗಿ ನೀಡಿದ್ದನ್ನು ರದ್ದುಪಡಿಸಬೇಕು. ಅಲ್ಲದೆ, ಗಣಿಗಾರಿಕೆ ಸಂಬಂಧ ಹಿಂದೆ ನಡೆಸಿದ ಆಂತರಿಕ ಸರ್ವೇ ನಕಾಶೆ ವರದಿಗಳನ್ನು ಸಾಬೀತುಪಡಿಸುವಂತೆ ಆಗ್ರಹಿಸಿದರು.
ಈ ವೇಳೆ ವಿಜ್ಞಾನಿ ಸಂದೀಪ್ ಅವರು ಪರವಾನಗಿ ಪಡೆದ ವೇಣುಗೋಪಾಲ್ ಅವರನ್ನು ತರಾಟೆ ತೆಗೆದುಕೊಂಡರು. ಅಧಿಕೃತವಾಗಿ ಕಲ್ಲು ಗಣಿಗಾರಿಕೆ ಆರಂಭಿಸಲು ಇರುವ ಮಾನದಂಡಗಳ ಪರಿಶೀಲನೆ ಬಳಿಕ ಗಣಿಗಾರಿಕೆ ನಡೆಸಲು ಸೂಚಿಸಿದ್ದರೂ ನಿಯಮ ಮೀರಿ ಗಣಿಗಾರಿಕೆ ನಡೆಸುತ್ತಿದ್ದೀರಿ. ಜತೆಗೆ ಉಪಗುತ್ತಿಗೆ ನೀಡಿರುವುದೂ ನಿಯಮ ಬಾಹಿರ. ಪರವಾನಗಿ ರದ್ದುಪಡಿಸಲಾಗುತ್ತದೆ ಎಂದು ಎಚ್ಚರಿಸಿದರು.
ಅಲ್ಲದೆ, ಉಪಗುತ್ತಿಗೆ ಪಡೆದವರು ಇಲ್ಲಿ ಮಾತನಾಡುವುದು ಸೂಕ್ತವಲ್ಲ ಎಂದ ಅವರು, ಅರಮೇರಿ ಮತ್ತು ಕಡಂಗಮೂರುರು ಗ್ರಾಮದಂಚಿನ 200 ಮೀಟರ್ ವ್ಯಾಪ್ತಿಯಲ್ಲಿರುವ ವಸತಿ, ಗದ್ದೆ, ಕಾಫಿ ತೋಟಗಳ ಮರು ಸರ್ವೇ ನಡೆಸಿ ವರದಿ ಬಂದ ಬಳಿಕ ಗಣಿಗಾರಿಕೆ ಮುಂದುವರಿಸಬೇಕೇ ಅಥವಾ ಸ್ಥಗಿತ ಮಾಡಬೇಕೇ ಎಂಬ ವಿಚಾರದಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ. ಅಲ್ಲಿಯವರಗೆ ಗಣಿಗಾರಿಕೆ ನಡೆಸದಂತೆ ಸೂಚನೆ ನೀಡಿದರು.
ಸಹಾಯಕ ಭೂ ವಿಜ್ಞಾನ ಅಧಿಕಾರಿ ರಾಹುಲ್ ಬಲಟಿಕಾಳಂಡ ಮುದ್ದಣ್ಣ ಮತ್ತು ಮಾದಪ್ಪ ಪೋಳಂಡ ಮಾಚಯ್ಯ ಮತ್ತು ಪೂಣಚ್ಚ ಮಂಜುಳಾ ಅಯ್ಯಪ್ಪ ಬಲ್ಯಂಡ ಉದಯ ಮುಂತಾದವರು ಸಭೆಯಲ್ಲಿ ಮಾತನಾಡಿದರು. ಕಂದಾಯ ಪರಿವೀಕ್ಷಕ ಹರೀಶ್, ಹೆಚ್ಚುವರಿ ತಹಸೀಲ್ದಾರ್ ಪ್ರದೀಪ್ ಕುಮಾರ್, ಅರಮೇರಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಂಜುಳಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net