ಕೊರಟಗೆರೆ : ಸುಪ್ರೀಂ ಕೋರ್ಟ್ ಆದೇಶದಂತೆ ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ಜಾರಿಗೊಳಿಸದೇ 56,432 ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಮುಂದಾದ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಮಾದರ ಮಹಾಸಭಾ ಕೊರಟಗೆರೆ ತಾಲೂಕು ಘಟಕದ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕರ್ನಾಟಕ ಮಾದರ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ವಿಭೂತಿ ಸಿದ್ದೇಶ್ ಮಾತನಾಡಿ, ರಾಜ್ಯದ ಶೋಷಿತ ಸಮುದಾಯಗಳು 3 ದಶಕಗಳಿಂದ ಒಳ ಮೀಸಲಾತಿಗಾಗಿ ನಿರಂತರ ಹೋರಾಟ ನಡೆಸುತ್ತಿವೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಹಿಂದುಳಿದಿರುವಿಕೆ ಆಧಾರದ ಮೇಲೆ ಒಳ ಮೀಸಲಾತಿ ಜಾರಿಗೊಳಿಸಬೇಕಾಗಿದೆ. ಆದರೆ ರಾಜ್ಯ ಸರ್ಕಾರ ಸ್ಪಷ್ಟ ಕ್ರಮ ಕೈಗೊಳ್ಳದೇ ಕೇವಲ ಹೆಸರು ಮಾತ್ರಕ್ಕೆ ಒಳ ಮೀಸಲಾತಿ ಜಾರಿ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.\
ಜಿಲ್ಲಾ ಮಾದರ ಮಹಾಸಭಾ ಪದಾಧಿಕಾರಿ ದಾಡಿ ವೆಂಕಟೇಶ್ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಪ್ರವರ್ಗ-ಎ ಶೇ.6, ಪ್ರವರ್ಗ-ಬಿ ಶೇ.6 ಹಾಗೂ ಪ್ರವರ್ಗ-ಸಿ ಶೇ.5 ಮೀಸಲಾತಿ ನೀಡುವಂತೆ ತೀರ್ಮಾನಿಸಿ ಕೇಂದ್ರದ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ ಈ ನಿರ್ಧಾರ ಜಾರಿಯಾಗುವ ಮುನ್ನವೇ 56,432 ಹುದ್ದೆಗಳನ್ನು ಹಿಂದಿನ ಮೀಸಲಾತಿಯನ್ವಯ ಜಾರಿ ಮಾಡಲು ಮುಂದಾಗಿರುವುದು ಅನ್ಯಾಯ ಎಂದರು.