ಪಲ್ಸ್ ಪೋಲಿಯೋ ಲಸಿಕೆ ರಾಜ್ಯದಲ್ಲಿ ಶೇ. 103 ಗುರಿ ಸಾಧನೆ

ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ
ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ
Published on

ಪ್ರಮುಖ ಮುಖ್ಯಾಂಶಗಳು

  • *62.40 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ವಿತರಿಸುವ ಗುರಿ
  • * ರಾಜ್ಯಾದ್ಯಂತ 64.25 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗಿದೆ
  • * ಜಿಬಿಎ ವ್ಯಾಪ್ತಿಯಲ್ಲಿ 11.65 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ
ಬೆಂಗಳೂರು: ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೊ ಲಸಿಕೆ ವಿತರಣೆ ಅಭಿಯಾನದಲ್ಲಿ ಈ ವರ್ಷ ಶೇ. 103 ಗುರಿ ಸಾಧಿಸಿದ್ದು, ನಿಗದಿತ ಗುರಿಗಿಂತ ಅಧಿಕ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗಿದೆ.
ಇಲಾಖೆಯು ಐದು ವರ್ಷದೊಳಗಿನ 62.40 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ವಿತರಿಸುವ ಗುರಿ ಹಾಕಿಕೊಂಡಿತ್ತು. ಅದರಂತೆ ನಾಲ್ಕು ದಿನಗಳ ಕಾಲ ನಡೆದ ಲಸಿಕಾ ಕಾರ್ಯಕ್ರಮದಲ್ಲಿ 64.25 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗಿದೆ. ಇದರೊಂದಿಗೆ ಶೇ. 103 ಗುರಿ ಸಾಧನೆ ಮಾಡಲಾಗಿದೆ.
ಡಿ.21 ರಂದು 60.16 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ಒದಗಿಸಲಾಗಿತ್ತು. 22ರಂದು 2.17 ಲಕ್ಷ 23 ರಂದು 1.21 ಲಕ್ಷ ಹಾಗೂ 24ರಂದು 69 ಸಾವಿರ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗಿದೆ.
ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ವ್ಯಾಪ್ತಿಯಲ್ಲಿ ಗರಿಷ್ಠ ಮಕ್ಕಳಿಗೆ (11.65 ಲಕ್ಷ) ಪೋಲಿಯೊ ಹನಿ ಹಾಕಲಾಗಿದೆ. ಶಿವಮೊಗ್ಗ ಹೊರತುಪಡಿಸಿ ಎಲ್ಲ ಜಿಲ್ಲೆಗಳು ಶೇ. 100 ಹಾಗೂ ಅದಕ್ಕಿಂತ ಹೆಚ್ಚಿನ ಗುರಿ ಸಾಧನೆ ಮಾಡಿವೆ.
ಆರೋಗ್ಯ ಕೇಂದ್ರಗಳು ಹಾಗೂ ಶಾಲೆಗಳ ಜತೆಗೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮೆಟ್ರೊ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಇದೇ 21ರಂದು ಪೋಲಿಯೊ ಹನಿ ವಿತರಣೆ ಮಾಡಲಾಗಿತ್ತು. ಬಿಟ್ಟು ಹೋದ ಹಾಗೂ ಅಭಿಯಾನದಿಂದ ಹೊರಗುಳಿದ ಮಕ್ಕಳಿಗೆ ಮುಂದಿನ ಮೂರು ದಿನಗಳ ಅವಧಿಯಲ್ಲಿ ಮನೆ ಮನೆ ಭೇಟಿ ನೀಡಿ ಪೋಲಿಯೊ ಹನಿ ಹಾಕಲಾಗಿದೆ.

ಆರೋಗ್ಯ ಇಲಾಖೆ ಪೋಲಿಯೋ ಹನಿ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿತ್ತು. ಅದರಂತೆ ರಾಜ್ಯದ ಗುಡ್ಡಗಾಡು ಪ್ರದೇಶ ಸೇರಿ ಕಟ್ಟಕಡೆಯಲ್ಲಿ ವಾಸಿಸುವ ಕುಟುಂಬಗಳನ್ನು ತಲುಪಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗಿದೆ. ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದು, ಅದನ್ನು ಮುಂದುವರೆಸುವುದು ನಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net