ಡ್ರಗ್ಸ್​ ಹಾವಳಿ ನಿಯಂತ್ರಣಕ್ಕೆ ಜನರ ಸಹಕಾರ ಅತ್ಯಗತ್ಯ

Drugs free day
Drugs free day
Published on
ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಹಾಗೂ ಭಾಷೆಯಿಂದ ಗುರುತಿಸಿಕೊಂಡಿರುವ ಕರ್ನಾಟಕದಲ್ಲಿ ಮಾದಕ ವಸ್ತುಗಳ ಅಮಲು ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಜೂ. 26 ಮಾದಕ ವಸ್ತು ನಿಷೇಧ ದಿನ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಡ್ರಗ್ಸ್​ ಎಲ್ಲಿಂದ, ಹೇಗೆ ಬರುತ್ತಿದೆ, ಯಾರ ಕೈ ಸೇರುತ್ತಿದೆ, ಪೊಲೀಸರು ಏನೆಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ, ಡ್ರಗ್ಸ್​ ತಡೆಗೆ ಮುಂದಿನ ಯೋಜನೆಗಳೇನು, ಸಿಕ್ಕಿಬಿದ್ದ ಮಾದಕ ವಸ್ತುಗಳ ಪ್ರಮಾಣ ಎಷ್ಟು, ಬಂಧಿತ ಪೆಡ್ಲರ್​ಗಳೆಷ್ಟು... ಇತ್ಯಾದಿ ಸಮಗ್ರ ಚಿತ್ರಣವನ್ನು "ವಿಜಯವಾಣಿ' ಸಂವಾದದಲ್ಲಿ ಭಾಗವಹಿಸಿದ್ದ ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಮಾದಕ ದ್ರವ್ಯ ನಿಗ್ರಹ ಪಡೆಯ (ಎಎನ್​ಟಿಎಫ್​) ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕ ಡಾ. ಆರ್​. ಹಿತೇಂದ್ರ ತೆರೆದಿಟ್ಟಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್​ ಹಾವಳಿ ಮಿತಿಮೀರಿರುವುದು ನಿಜ. ಆದರೆ, ಇದನ್ನು ನಿಯಂತ್ರಿಸಲು ಪೊಲೀಸ್​ ಇಲಾಖೆಯೊಂದರಿಂದಲೇ ಸಾಧ್ಯವಿಲ್ಲ. ಸಾರ್ವಜನಿಕರ ಪಾತ್ರವೂ ಬಹಳ ಮುಖ್ಯವಾಗಿದೆ. ಕೆಲವು ಮನೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೈಡ್ರೋಪೋನಿಕ್​ ಗಾಂಜಾ ಬೆಳೆಯಲಾಗುತ್ತಿದೆ. ಮನೆಮನೆಗೆ ಹೋಗಿ ಪರಿಶೀಲಿಸುವುದು ಪೊಲೀಸರಿಂದ ಸಾಧ್ಯವಿಲ್ಲ. ಆದ್ದರಿಂದ ಜನಸಾಮಾನ್ಯರ ಸಹಕಾರ ಅತ್ಯಗತ್ಯ. ಡ್ರಗ್ಸ್​ ಬಗ್ಗೆ ಮಾಹಿತಿ ಕೊಟ್ಟರೆ ಪೆಡ್ಲರ್​ಗಳನ್ನು ಬಂಧಿಸುವುದು ಸುಲಭ ಎಂದು ಎಡಿಜಿಪಿ ಆರ್​. ಹಿತೇಂದ್ರ ಹೇಳಿದ್ದಾರೆ.
ಡ್ರಗ್ಸ್​ ವಿರೋಧಿ ದಿನಾಚರಣೆ ನಿಮಿತ್ತ ಬೆಂಗಳೂರಿನ "ವಿಜಯವಾಣಿ' ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾದಕ ವಸ್ತುಗಳ ಮಾರಾಟ ಮತ್ತು ಸಾಗಣೆ ಕರ್ನಾಟಕವೊಂದರಲ್ಲೇ ಅಲ್ಲ, ಹಲವು ರಾಜ್ಯಗಳು, ದೇಶಗಳಲ್ಲಿ ಈ ದಂಧೆ ನಡೆಯುತ್ತಿದೆ. ಆದರೆ, ಇತ್ತೀಚೆಗೆ ಡ್ರಗ್ಸ್​ ವ್ಯಸನಿಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಮಾಜಿಕ ಸಮೀಕ್ಷೆ ಆಗಬೇಕಿದೆ: ಬೆಂಗಳೂರಿನಂತಹ ನಗರಗಳಿಗೆ ಸೀಮಿತವಾಗಿದ್ದ ಡ್ರಗ್ಸ್​, ಈಗ ಗ್ರಾಮೀಣ ಪ್ರದೇಶದವರೆಗೂ ವಿಸ್ತರಣೆಗೊಂಡಿದೆ. ಇದಕ್ಕೆ ಕಾರಣ ಏನು ಎಂಬುದರ ಬಗ್ಗೆ ದೊಡ್ಡ ಮಟ್ಟದ ಅಧ್ಯಯನ ನಡೆಯಬೇಕು. ಯಾವ ಕಾರಣಕ್ಕೆ ಯುವಕರು, ವಿದ್ಯಾರ್ಥಿಗಳು ಮಾದಕ ವಸ್ತು ವ್ಯಸನಿಗಳಾಗುತ್ತಿದ್ದಾರೆ ಎಂಬುದರ ಬಗ್ಗೆ ನಿಮ್ಹಾನ್ಸ್​ ಸಹಯೋಗದಲ್ಲಿ ಸಾಮಾಜಿಕ ಸಮೀಕ್ಷೆ ನಡೆಯಬೇಕಿದೆ. ಆಗ ಮಾತ್ರ ಕಾರಣ ಗೊತ್ತಾಗಿ ಪರಿಹಾರ ಹುಡುಕಲು ಸಾಧ್ಯ. ನಿಷೇಧಿತ ಮಾದಕ ವಸ್ತು ಕಡಿವಾಣಕ್ಕೆ ಪೊಲೀಸ್​ ಇಲಾಖೆ ಜತೆ ಶಿಕ್ಷಣ, ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆಗಳು, ಖಾಸಗಿ ಕಂಪನಿಗಳು, ಕಾರ್ಖಾನೆಗಳು ಕೈಜೋಡಿಸಿದಾಗ ಮಾತ್ರ ಡ್ರಗ್ಸ್​ಮುಕ್ತ ರಾಜ್ಯವನ್ನಾಗಿಸಲು ಸಾಧ್ಯ.
ಪೂರೈಕೆಗೆ ಕಡಿವಾಣ ಹಾಕಬೇಕು: ದೇಶ, ವಿದೇಶಗಳಲ್ಲಿ ಉತ್ಪಾದನೆ ಮಾಡಲಾಗುತ್ತಿರುವ ಗಾಂಜಾ, ಎಂಡಿಎಂಎ, ಸಿಂಥೆಟಿಕ್ಸ್​ ಡ್ರಗ್ಸ್​ ಪೂರೈಕೆ ಹಾಗೂ ಅದರ ಮೌಲ್ಯವನ್ನು ಕಡಿಮೆ ಮಾಡಬೇಕಾಗಿದೆ. ಅದಕ್ಕಾಗಿ ಸಾರ್ವಜನಿಕವಾಗಿ ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಕಳೆದ ಒಂದೆರಡು ವರ್ಷಗಳಲ್ಲಿ ರಾಜ್ಯದ ವಿವಿಧ ಶಾಲಾ-ಕಾಲೇಜು ಒಳಗೊಂಡಂತೆ 5 ಲಕ್ಷ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸೇವನೆಯಿಂದಾಗುವ ದುಷ್ಪರಿಣಾಮ, ಕೌಟುಂಬಿಕ ಮತ್ತು ಶಾರೀರಿಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ನಡೆಸಲಾಗಿದೆ.

ಅಂಚೆ, ಕೊರಿಯರ್​ ಮೇಲೆ ನಿಗಾ

ಆನ್​ಲೈನ್​, ವಿದೇಶಿ ಕೊರಿಯರ್​, ಅಂಚೆ ಇಲಾಖೆ ಮೂಲಕ ಬರುತ್ತಿರುವ ವಸ್ತುಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಏರ್​ಪೋರ್ಟ್​ಗಳಲ್ಲಿ ಕಸ್ಟಮ್ಸ್​ ಅಧಿಕಾರಿಗಳು ನಿರಂತರ ತಪಾಸಣೆ ನಡೆಸುತ್ತಿದ್ದಾರೆ. ಕೆಲವು ಬಾರಿ ಒಂದೇ ಸಮಯದಲ್ಲಿ ವಿದೇಶಿ ಕೊರಿಯರ್​ಗಳು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಕೆಲವು ಬಾಕ್ಸ್​, ಪಾರ್ಸೆಲ್​ಗಳನ್ನು ತಪಾಸಣೆ ಮಾಡಲಾಗುವುದಿಲ್ಲ. ಅಧಿಕಾರಿಗಳ ಕಣ್ತಪ್ಪಿ ಹೋಗುತ್ತಿವೆ. ಕೆಲವು ಕೊರಿಯರ್​ಗಳು ಅನಾಮಧೇಯ, ವಿಳಾಸವಿಲ್ಲದವರ ಹೆಸರಿನಲ್ಲಿ ಬರುತ್ತಿವೆ. ಅವುಗಳನ್ನು ದಂಧೆಕೋರರು ತಡವಾಗಿ ಬಂದು ತೆಗೆದುಕೊಂಡು ಹೋಗುತ್ತಿರುವ ಪ್ರಕರಣಗಳು ನಡೆಯುತ್ತಿವೆ.
ಬೆಂಗಳೂರಲ್ಲೇ ಹೆಚ್ಚು ಯಾಕೆ?: ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್​ ಖರೀದಿಸುವವರ ಸಂಖ್ಯೆ ಹೆಚ್ಚಿದೆ. ಹಲವು ರಾಜ್ಯಗಳಿಂದ ಉದ್ಯೋಗ, ವ್ಯಾಪಾರಕ್ಕಾಗಿ ಕಾರ್ಮಿಕರು, ಉದ್ಯಮಿಗಳು ಬರುವುದು ಹೆಚ್ಚಾಗಿದೆ. ಆರ್ಥಿಕ ಸಬಲರ ಸಂಖ್ಯೆ ಹೆಚ್ಚಿದೆ. ವಿದೇಶಿ ವಹಿವಾಟೂ ಇಲ್ಲಿ ಜಾಸ್ತಿ. ಇದೆಲ್ಲದರ ಜತೆಗೆ ಕೋಟ್ಯಂತರ ಜನಸಂಖ್ಯೆ ಹೊಂದಿರುವ ಮಹಾನಗರಿ. ಆರ್ಥಿಕ ವ್ಯವಸ್ಥೆ ಉತ್ತಮವಾಗಿರುವ ಪರಿಣಾಮ ಡ್ರಗ್ಸ್​ ಮಾರಾಟ ಮತ್ತು ಪೂರೈಕೆ ಹೆಚ್ಚಿದೆ. ಮಂಗಳೂರಿನಲ್ಲೂ ಡ್ರಗ್ಸ್​ ದಂಧೆ ಜೋರಾಗಿದೆ. ಆರ್ಥಿಕವಾಗಿ, ಭೌಗೋಳಿಕವಾಗಿ ಯಾವ ನಗರ ಅಭಿವೃದ್ಧಿ ಹೊಂದಿವೆಯೋ ಅಲ್ಲಿ ಮಾದಕ ಚಟುವಟಿಕೆ ಹೆಚ್ಚಿದೆ.
15-20 ರೂ.ಗೆ ಗಾಂಜಾ ಸೇಲ್​: ಬೆಳಗಾವಿ, ರಾಯಚೂರು, ಬೀದರ್​, ಕಲಬುರಗಿ ಭಾಗದಲ್ಲಿ 15-20 ರೂ.ಗೆ ಪ್ಯಾಕೆಟ್​ನಲ್ಲಿ ತುಂಬಿರುವ ಗಾಂಜಾ ಲಭ್ಯವಾಗುತ್ತಿದೆ. ಇಷ್ಟೊಂದು ಕಡಿಮೆ ಬೆಲೆಗೆ ಗಾಂಜಾ ದೊರೆಯುತ್ತಿರುವ ಪರಿಣಾಮ ಬಹುತೇಕರು ಇದರ ವ್ಯಸನಿಗಳಾಗುತ್ತಿದ್ದಾರೆ. ಮಲೆನಾಡು, ಕರಾವಳಿ ಭಾಗದ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಡ್ರೋನ್​ ಮೂಲಕ ನಿರಂತರ ಸರ್ವೇ ನಡೆಸುತ್ತಿದೆ. ಕೆಲ ಪ್ರದೇಶಗಳಲ್ಲಿ ಎಕರೆಗಟ್ಟಲೆ ಜಾಗದಲ್ಲಿ ಗಾಂಜಾ ಬೆಳೆಯುತ್ತಿರುವುದು ಆತಂಕಕಾರಿಯಾಗಿದೆ.
ಎಎನ್​ಟಿಎಫ್​ಗೆ ಪೊಲೀಸ್​ ಠಾಣೆ ಅಧಿಕಾರ: ರಾಜ್ಯದಲ್ಲಿ ಮಾದಕ ವಸ್ತು ಚಟುವಟಿಕೆ ನಿಯಂತ್ರಣಕ್ಕೆ ಇತ್ತೀಚೆಗೆ ಎಎನ್​ಟಿಎಫ್​ ಕಾರ್ಯಪಡೆ ರಚಿಸಲಾಗಿದ್ದು, ಕಾರ್ಯಾಚರಣೆ ಚುರುಕುಗೊಳಿಸಲಿದೆ. ಎಫ್​ಐಆರ್​ ದಾಖಲಿಸಿ ತನಿಖೆ ನಡೆಸುವುದು ಸೇರಿ ಪೊಲೀಸ್​ ಠಾಣೆಗಿರುವ ಅಧಿಕಾರವನ್ನು ಎಎನ್​ಟಿಎಫ್​ಗೂ ಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಶೇ. 20ರಷ್ಟು ಸಿಬ್ಬಂದಿ ಕೊರತೆ ಇದ್ದರೂ ಡ್ರಗ್ಸ್​ ಪ್ರಕರಣದಲ್ಲಿ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎನ್​ಡಿಪಿಎಸ್​ ಕಾಯ್ದೆಯಡಿ ದಾಖಲಾಗಿರುವ ಅಂದಾಜು 12 ಸಾವಿರ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ. ಅವುಗಳ ತ್ವರಿತ ವಿಲೇವಾರಿಗಾಗಿ ಪ್ರತ್ಯೇಕ ವಿಶೇಷ ನ್ಯಾಯಾಲಯ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಂಗಳೂರಿನಲ್ಲಿ 2, ಮಂಗಳೂರು, ಕಲಬುರಗಿ, ಬೆಳಗಾವಿ ಜಿಲ್ಲೆಯಲ್ಲಿ ತಲಾ 1 ಕೋರ್ಟ್​ ರಚನೆಯಾಗಬೇಕಿದೆ. ಸರ್ಕಾರ ಅನುಮತಿ ಕೊಟ್ಟಿದ್ದು, ಹೈಕೋರ್ಟ್​ನಿಂದ ಗ್ರೀನ್​ ಸಿಗ್ನಲ್​ ಸಿಕ್ಕ ನಂತರ ಸ್ಥಾಪನೆಯಾಗಲಿವೆ.
  • ಜನರು ಮಾಹಿತಿ ಕೊಟ್ಟರೆ ಹೆಡೆಮುರಿ ಕಟ್ಟುವುದು ಸುಲಭ
  • ಕೋರ್ಟ್​ನಲ್ಲಿ 12 ಸಾವಿರ ಎನ್​ಡಿಪಿಎಸ್​ ಪ್ರಕರಣ ಬಾಕಿ
ಯಾವ ವರ್ಷ ಎಷ್ಟು ಮಂದಿ ಸೆರೆ?
ವಿದೇಶಿ ಡ್ರಗ್ಸ್​ ಸೇರಿ ಸ್ಥಳೀಯ ಮಟ್ಟದಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿರುವ ಬಗ್ಗೆ 2023ರಲ್ಲಿ 6,767 ಪ್ರಕರಣ ದಾಖಲಾಗಿವೆ. 3,900 ಮಂದಿಯನ್ನು ಬಂಧಿಸಲಾಗಿದೆ. 2024ರಲ್ಲಿ 4100 ಪ್ರಕರಣ, 2000 ಮಂದಿ ಬಂಧನ, 2025ರಲ್ಲಿ 6800 ಪ್ರಕರಣ, 2500 ಮಂದಿಯನ್ನು ಬಂಧಿಸಲಾಗಿದೆ. 2026ರ ಮೇವರೆಗೆ 5000 ಪ್ರಕರಣ ದಾಖಲಾಗಿದ್ದು, 720 ಮಂದಿಯನ್ನು ಬಂಧಿಸಲಾಗಿದೆ.

ಎಲ್ಲಿಂದ ಬರುತ್ತೆ ಗಾಂಜಾ?

ಎನ್​ಸಿಬಿ ವರದಿ ಪ್ರಕಾರ ರಾಜ್ಯಕ್ಕೆ ನೋಯ್ಡಾ, ರಾಜಸ್ಥಾನ, ಹರಿಯಾಣ, guಜರಾತ್​, ಮಧ್ಯಪ್ರದೇಶ ರಾಜ್ಯಗಳಿಂದ ಹೆಚ್ಚು ಗಾಂಜಾ ಪೂರೈಕೆಯಾಗುತ್ತಿದೆ. ಕೆಲ ಆರೋಪಿಗಳನ್ನು ಪಿರಿಯಾಪಟ್ಟಣ, ಮೈಸೂರು ಭಾಗದಲ್ಲಿ ಬಂಧಿಸಿ ತನಿಖೆ ಕೈಗೊಳ್ಳಲಾಗಿತ್ತು. ಆಗ ಈ ವಿಷಯ ಬೆಳಕಿಗೆ ಬಂದಿದೆ.
ಶ್ರೀಲಂಕಾ ಮೂಲಕ ದೇಶದ ಒಳಗೆ ಜಿಹಾದಿ ಹೆಸರಿನ ಡ್ರಗ್ಸ್​ ಪೂರೈಕೆಯಾಗುತ್ತಿದೆ ಎಂಬ ಆರೋಪವಿದೆ. ಶ್ರೀಲಂಕಾ ಮೂಲಕ ಗಡಿ ಪ್ರದೇಶದ ರಾಜ್ಯಕ್ಕೆ ಹೆರಾಯಿನ್​ ಬರುತ್ತಿದೆ. ಚೆನ್ನೈ, ದಕ್ಷಿಣ ಭಾರತದ ಕೆಲ ರಾಜ್ಯಗಳಿಂದ ದೇಶದ ವಿವಿಧ ಕಡೆ ಹೆರಾಯಿನ್​ ಬರುತ್ತಿದೆ. ಕರ್ನಾಟಕ ಸೇರಿ ಕೋಸ್ಟಲ್​ ರಾಜ್ಯಗಳಲ್ಲಿ ಪೊಲೀಸರು ಅಲರ್ಟ್​ ಆಗಿದ್ದಾರೆ. ಆನ್​ಲೈನ್​, ಸಾಮಾಜಿಕ ಜಾಲತಾಣ, ಟೆಲಿಗ್ರಾಂ, ಮೆಸೆಂಜರ್​ ಮೂಲಕ ಈ ದಂಧೆ ನಡೆಯುತ್ತಿದೆ. 100ಕ್ಕೂ ಹೆಚ್ಚು ಮೆಸೆಂಜರ್​ ತಾಣಗಳು ಇವೆ. ಇವುಗಳ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net