ಗಸ್ತಿನಲ್ಲಿದ್ದ ಪಿಎಸ್​ಐ, ಚಾಲಕನ ಮೇಲೆ ಹಲ್ಲೆ

PSI on patrol assaults driver
PSI on patrol assaults driver
Published on
ಚಿಂತಾಮಣಿ: ಬೆಂಗಳೂರು ರಸ್ತೆಯ ಚಿನ್ನಸಂದ್ರ ಬಳಿ ಮಧ್ಯರಾತ್ರಿವರೆಗೂ ತೆರೆದಿದ್ದ ಜಮ್​ ಜಮ್​ ಹೋಟೆಲ್​ ಬಂದ್​ ಮಾಡುವಂತೆ ಸೂಚಿಸಿದ ಪಿಎಸ್​ಐ ನಾಗಮ್ಮ(28)ಮತ್ತು ಚಾಲಕ ವೇಣುಗೋಪಾಲ (50) ಮೇಲೆ ಆರು ಮಂದಿ ಹಲ್ಲೆ ಮಾಡಿದ್ದಾರೆ.
ಗುರುವಾರ ರಾತ್ರಿ ಗಸ್ತಿನಲ್ಲಿದ್ದಾಗ ಮಧ್ಯರಾತ್ರಿಯಾದರೂ ಹೋಟೆಲ್​ ತೆರೆದಿದ್ದನ್ನು ಗಮನಿಸಿ ಬಾಗಿಲು ಬಂದ್​ ಮಾಡುವಂತೆ ಮಾಲೀಕ ಶಾಹೀದ್​ಖಾನ್​ಗೆ ಹೇಳುತ್ತಿದ್ದಾಗ ತಾಲೂಕಿನ ಆಲಂಬಗಿರಿ ನಿವಾಸಿಗಳಾದ ನಾಗೇಂದ್ರ, ನವೀನ್​ ಮತ್ತು ನರೇಂದ್ರ ಯಾದವ್​ ಹಾಗೂ ಬೆಂಗಳೂರಿನ ಯಲಹಂಕದ ನಿವಾಸಿ ಪುನೀತ್​ ಹಾಗೂ ಇನ್ನಿಬ್ಬರು ಹಲ್ಲೆ ಮಾಡಿದ್ದಾರೆ.
ಗುಂಪಿನಿಂದ ಹಲ್ಲೆ: ಪಿಎಸ್​ಐ ನಾಗಮ್ಮ, ಚಾಲಕ ವೇಣುಗೋಪಾಲ ಚಿಂತಾಮಣಿ ನಗರ, ಬೂರಗಮಾಕಲಹಳ್ಳಿ, ಮಾಡಿಕೆರೆ ಕ್ರಾಸ್​, ಕುರುಟಹಳ್ಳಿ ಕ್ರಾಸ್​ನಿಂದ ಗಸ್ತು ಮುಗಿಸಿಕೊಂಡು ಜೀಪ್​ನಲ್ಲಿ ಚಿನ್ನಸಂದ್ರ ಬಳಿ ರಾತ್ರಿ ಸುಮಾರು 12.40ಕ್ಕೆ ಬಂದಿದ್ದಾರೆ. ತಡ ರಾತ್ರಿಯಾದರೂ ಹೋಟೆಲ್​ ತೆಗೆದಿದ್ದನ್ನು ಗಮನಿಸಿ ಅಲ್ಲಿಗೆ ತೆರಳಿದ್ದಾರೆ.
ಹೋಟೆಲ್​ ಬಳಿ ಸುಮಾರು 10 ಜನರ ಗುಂಪು ಇರುವುದನ್ನು ಗಮನಿಸಿ ಬಾಗಿಲು ಮುಚ್ಚಲು ಚಾಲಕ ಎಚ್​.ಸಿ.ವೇಣುಗೋಪಾಲ ಕೆಳಗಿಳಿದು ಸೂಚಿಸಿದಾಗ ಗುಂಪು ಚಾಲಕನೊಂದಿಗೆ ಮಾತಿನ ಚಕಮಕಿ ನಡೆಸಿ ಹಲ್ಲೆ ಮಾಡಿದೆ. ಆಗ ಪಿಎಸ್​ಐ ನಾಗಮ್ಮ ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಿಸುತ್ತಿರುವಾಗ ನಾಗೇಂದ್ರ ಎಂಬಾತ ಪಿಎಸ್​ಐ ಕೈಯಲ್ಲಿದ್ದ ಮೊಬೈಲ್​ ಕಿತ್ತುಕೊಂಡು ಹಲ್ಲೆ ಮಾಡಿದ್ದಾರೆ.
ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net