ಹೊಸ ಜಿಲ್ಲೆ ವಿಜಯನಗರ ಪ್ರಗತಿಗೆ 394 ಕೋಟಿ ರೂ. ಒದಗಿಸಿ

ಹಂಪಿಯ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ಸಚಿವ ಜಮೀರ್ ಅಹ್ಮದ್ ಅವರು ಕಾಣಿಕೆ ನೀಡಿ ಸ್ವಾಗತಿಸಿದರು. ಶಾಸಕ ಎಚ್.ಆರ್. ಗವಿಯಪ್ಪ ಇದ್ದರು.
ಹಂಪಿಯ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ಸಚಿವ ಜಮೀರ್ ಅಹ್ಮದ್ ಅವರು ಕಾಣಿಕೆ ನೀಡಿ ಸ್ವಾಗತಿಸಿದರು. ಶಾಸಕ ಎಚ್.ಆರ್. ಗವಿಯಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಎಂಗೆ ಸಚಿವ ಜಮೀರ್ ಖಾನ್ ಮನವಿ
  • ಇನ್ನು ಮುಂದೆ ಪ್ರತಿ ವರ್ಷ ನವೆಂಬರ್ ತಿಂಗಳಲ್ಲೇ ಹಂಪಿ ಉತ್ಸವ ಆಚರಣೆ
ಹಂಪಿ (ಎಂ.ಪಿ.ಪ್ರಕಾಶ ವೇದಿಕೆ): ವಿಜಯನಗರವು ನೂತನ ಜಿಲ್ಲೆಯಾಗಿದ್ದು, ಇದರ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ಮುಂಬರುವ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಸರ್ಕಾರ ಮೀಸಲಿಡಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಒತ್ತಾಯಿಸಿದರು.
ಶುಕ್ರವಾರ ರಾತ್ರಿ ಹಂಪಿ ಉತ್ಸವದ ಮೊದಲ ದಿನದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸಚಿವನಾದ ಮೇಲೆ ಕಳೆದ ಮೂರು ವರ್ಷಗಳಿಂದ ಅತ್ಯಂತ ವಿಜೃಂಭಣೆಯಿಂದ ಈ ಉತ್ಸವವನ್ನು ಆಚರಿಸಲಾಗುತ್ತಿದೆ. ಹಿಂದೆ ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಉತ್ಸವ ನಡೆಯುತ್ತಿತ್ತು, ಆದರೆ ವಿವಿಧ ಕಾರಣಗಳಿಂದಾಗಿ ದಿನಾಂಕಗಳು ಬದಲಾಗಿದ್ದವು. ಇನ್ನು ಮುಂದೆ ಈ ಉತ್ಸವವನ್ನು ನವೆಂಬರ್‌ನಲ್ಲೇ ನಡೆಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದರು.
ಜಿಲ್ಲಾಧಿಕಾರಿ ಕಚೇರಿ, ಅರಣ್ಯ ಇಲಾಖೆ ಕಚೇರಿ ಸೇರಿದಂತೆ ವಿವಿಧ ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ 394 ಕೋಟಿ ರೂ. ಅನುದಾನದ ಅಗತ್ಯವಿದೆ. ನಮ್ಮದು ಹೊಸ ಜಿಲ್ಲೆಯಾಗಿದ್ದರಿಂದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯಬೇಕು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಆರ್ಥಿಕ ಒತ್ತಡವಿದ್ದರೂ ಸಹ, ಜಿಲ್ಲೆಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹಣ ಒದಗಿಸಬೇಕೆಂದು ಸಿಎಂಗೆ ಮನವಿ ಮಾಡಿದರು.
ಸಚಿವ ಶಿವರಾಜ ತಂಗಡಗಿ ಮಾತನಾಡಿ, ಹಂಪಿ ಉತ್ಸವವು ನಾಡಿನ ಅತಿದೊಡ್ಡ ಉತ್ಸವವಾಗಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಆರಂಭವಾದ ಉತ್ಸವ ಎಂಬ ಹೆಗ್ಗಳಿಕೆ ಹೊಂದಿದೆ. ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪಕ್ಕೆ ವಿಜಯನಗರ ನೀಡಿದ ಕೊಡುಗೆ ಅಪಾರವಾಗಿದ್ದು, ಅದನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವುದು ಈ ಉತ್ಸವದ ಉದ್ದೇಶವಾಗಿದೆ.
ಕೃಷ್ಣದೇವರಾಯರು ಅಂದು ಕಲೆ ಮತ್ತು ಸಂಸ್ಕೃತಿಗೆ ನೀಡಿದ ಮಾನ್ಯತೆಯನ್ನು ಇಂದು ಸಿಎಂ ಸಿದ್ದರಾಮಯ್ಯ ಮುಂದುವರಿಸುತ್ತಿದ್ದಾರೆ. ಕರ್ನಾಟಕ ಎಂದು ನಾಮಕರಣ ಮಾಡಿದ ಸಂದರ್ಭದಲ್ಲಿ ಅಂದಿನ ಸಿಎಂ ದೇವರಾಜ ಅರಸು ಅವರು ಹಂಪಿಯಿಂದಲೇ ಚಾಲನೆ ನೀಡಿದ್ದರು. ಕರ್ನಾಟಕ ಸುವರ್ಣ ಮಹೋತ್ಸವದಂದು ಹಂಪಿಯಿಂದಲೇ ನಾಡದೇವಿಯ ಮೆರವಣಿಗೆಯನ್ನು ನಡೆಸಲಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಸಚಿವ ಬೈರತಿ ಸುರೇಶ, ನಟ ಶಿವರಾಜ್‌ಕುಮಾರ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ಸಂಸದ ರಾಜಶೇಖರ ಹಿಟ್ನಾಳ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಶಾಸಕರಾದ ಬಿ. ನಾಗೇಂದ್ರ, ನಾರಾ ಭರತ್ ರೆಡ್ಡಿ, ಎಚ್.ಆರ್. ಗವಿಯಪ್ಪ, ನೇಮಿರಾಜ್ ನಾಯ್ಕ, ಡಾ. ಎನ್.ಟಿ. ಶ್ರೀನಿವಾಸ, ಬಿ.ಎಂ. ನಾಗರಾಜ, ಲತಾ ಮಲ್ಲಿಕಾರ್ಜುನ, ಕೃಷ್ಣ ನಾಯ್ಕ, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಹಾಗೂ ಮಾಜಿ ಶಾಸಕ ಭೀಮಾನಾಯ್ಕ ಉಪಸ್ಥಿತರಿದ್ದರು.

ಸಿಎಂಗಾಗಿ ವರುಣಾದಿಂದ ಬಂದ ಕಲಾವಿದರು

ಮುಖ್ಯಮಂತ್ರಿಗಳ ತವರು ಕ್ಷೇತ್ರವಾದ ವರುಣಾದಿಂದ ಆಗಮಿಸಿದ್ದ ಶಿವಮಲ್ಲು ತಂಡದವರಿಂದ ಪ್ರದರ್ಶನಗೊಂಡ ವೀರಮಲ್ಲು ಕುಣಿತ ಈ ಬಾರಿಯ ವಿಶೇಷವಾಗಿತ್ತು. ಕಲಾವಿದರೊಂದಿಗೆ ಹೆಜ್ಜೆ ಹಾಕುವಂತೆ ಸಚಿವ ಜಮೀರ್ ಖಾನ್, ಸಂಸದ ತುಕಾರಾಮ್ ಸೇರಿದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ಆದರೆ ಸಿಎಂ ಅವರು ನೃತ್ಯ ಮಾಡಲು ನಿರಾಕರಿಸಿದರೂ, ಕಲಾವಿದರ ಪ್ರದರ್ಶನವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಎಂ.ಪಿ. ಪ್ರಕಾಶ ಅವರು ಈ ಉತ್ಸವವನ್ನು ಆರಂಭಿಸಿದರು. ನಾವು ನಮ್ಮ ಇತಿಹಾಸವನ್ನು ಅರಿಯುವುದು ಅತ್ಯಗತ್ಯ. ಜಗತ್ತಿಗೆ ಸುವರ್ಣ ಯುಗವನ್ನು ಪರಿಚಯಿಸಿದ ವಿಜಯನಗರದ ಇತಿಹಾಸವನ್ನು ಎಲ್ಲರಿಗೂ ತಿಳಿಸುವ ಕೆಲಸವಾಗುತ್ತಿದೆ. ಕೃಷ್ಣದೇವರಾಯನ ಆಡಳಿತದ ಗತವೈಭವವನ್ನು ಸಾರುವ ಕಾರ್ಯ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು 1983 ರಿಂದ 2026ರವರೆಗೆ ಕೃಷ್ಣದೇವರಾಯರಂತೆ ನಾಡಿಗೆ ಸುವರ್ಣ ಆಡಳಿತ ನೀಡಿದ್ದಾರೆ.

"

ಕನ್ನಡಾಭಿಮಾನಿಗಳಿಗೆ ನಮಸ್ಕಾರ. ನನಗೆ ಶೂಟಿಂಗ್ ಕೆಲಸವಿತ್ತು. ಆದರೆ ಮುಖ್ಯಮಂತ್ರಿಗಳು ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪ್ರೀತಿಯ ಆಹ್ವಾನಕ್ಕೆ ಗೌರವ ನೀಡಿ ಬಂದಿರುವೆ. ಅವರ ಪ್ರೀತಿ ಮತ್ತು ವಿಶ್ವಾಸಕ್ಕಾಗಿ ಅತ್ಯಂತ ಸಂತೋಷದಿಂದ ಈ ಉತ್ಸವಕ್ಕೆ ಬಂದಿದ್ದು, ನಿಮಗೆಲ್ಲರಿಗೂ ಉತ್ತಮ ಮನರಂಜನೆ ನೀಡುವೆ.

ಐತಿಹಾಸಿಕ ಹಂಪಿ ಉತ್ಸವ ನಮ್ಮೆಲ್ಲರ ಹೆಮ್ಮೆ. ರಾಜ್ಯ ಸರ್ಕಾರವು ನಾಡಿನ ಗತವೈಭವವನ್ನು ಸಾರುವ ನಿಟ್ಟಿನಲ್ಲಿ ಈ ಉತ್ಸವವನ್ನು ಆಯೋಜಿಸಿದೆ. ಇದು ಇಡೀ ನಾಡು ಮೆಚ್ಚಿಕೊಂಡಿರುವ ಮಹತ್ವದ ಉತ್ಸವವಾಗಿದೆ.

ಜೈನ ಮತ್ತು ವೈಷ್ಣವ ಸಮಾಜಗಳನ್ನು ಒಗ್ಗೂಡಿಸಿದ ಕೀರ್ತಿ ವಿಜಯನಗರದ ಅರಸರಿಗೆ ಸಲ್ಲುತ್ತದೆ. ಹಂಪಿಯ ಕಾರಣದಿಂದಲೇ ಕರ್ನಾಟಕವು ದೇಶದಲ್ಲೇ ಸಂಪದ್ಭರಿತ ರಾಜ್ಯ ಎಂಬ ಖ್ಯಾತಿ ಪಡೆದಿದೆ. ವಿಜಯನಗರ ಸಾಮ್ರಾಜ್ಯದ ನೀರಾವರಿ ಯೋಜನೆಗಳ ಪ್ರೇರಣೆಯಿಂದಲೇ ಮೈಸೂರು ಅರಸರು ನೀರಾವರಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net