ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ಗೆ (ಕೆಬಿಎ) ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಮಾಜಿ ಸಚಿವ ಮತ್ತು ಅಸೋಸಿಯೇಷನ್ ಅಧ್ಯಕ್ಷರಾಗಿರುವ ಕುಮಾರ್ ಬಂಗಾರಪ್ಪ, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಶುಕ್ರವಾರ ಮನವಿಪತ್ರ ಸಲ್ಲಿಸಿದರು.
ಏಳು ದಶಕಗಳಿಂದ ಪ್ರತಿಭಾವಂತ ಆಟಗಾರರನ್ನು ರೂಪಿಸಿರುವ ಕೆಬಿಎ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಹೆಚ್ಚಿಸಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಪಡುಕೋಣೆ, ಲಕ್ಷ್ಯ ಸೇನ್ ಸೇರಿ ಅನೇಕ ಶ್ರೇಷ್ಠ ಆಟಗಾರರು ಇದಕ್ಕೆ ಸಾಕ್ಷಿಯಾಗಿದ್ದಾರೆ. ರಾಜ್ಯದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಬ್ಯಾಡ್ಮಿಂಟನ್ ಕ್ರೀಡೆ ಸಾಕಷ್ಟು ಕೊಡುಗೆ ನೀಡಿದೆ. ತಮ್ಮ ನಾಯಕತ್ವದಲ್ಲಿ ಕ್ರೀಡಾ ಅಭಿವೃದ್ಧಿಗೆ ಬೆಂಬಲ ನೀಡಲಾಗುತ್ತಿದೆ.
ಹಾಗಾಗಿ, ಇಂದಿನ ಸ್ಪರ್ಧಾತ್ಮಕ ಕ್ರೀಡಾ ಯುಗದಲ್ಲಿ ಯುವ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಕೆಬಿಎಗೆ ಅತ್ಯಾಧುನಿಕ ಮೂಲಸೌಕರ್ಯ, ವೈಜ್ಞಾನಿಕ ತರಬೇತಿ ಮತ್ತು ಸಮಗ್ರ ಬೆಂಬಲ ಅಗತ್ಯವಿದೆ ಎಂದು ಸಿಎಂ ಗಮನಕ್ಕೆ ಕುಮಾರ್ ಬಂಗಾರಪ್ಪ ತಂದರು.
ಅಸೋಸಿಯೇಷನ್‌ನ ಮೂಲಸೌಕರ್ಯ ವಿಸ್ತರಣೆ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣಗಳು, ತರಬೇತಿ ಕೇಂದ್ರಗಳ ಸ್ಥಾಪಿಸುವ ಅವಶ್ಯಕತೆ ಇದೆ. ಜಿಲ್ಲೆ ಮತ್ತು ಗ್ರಾಮೀಣ ಪ್ರದೇಶಗಳ ಪ್ರತಿಭೆಗಳ ಉತ್ತೇಜನಕ್ಕೆ ಸರ್ಕಾರದ ಸಹಕಾರ ಬೇಕಿದೆ. ಹಾಗಾಗಿ, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಿಎಂಗೆ ಮನವಿ ಮಾಡಿದರು.
ಅಸೋಸಿಯೇಷನ್ ಕಾರ್ಯದರ್ಶಿ ಮುರಳೀಧರ್ ಸೇರಿ ಮತ್ತಿತರರಿದ್ದರು.