ಇತ್ತೀಚಿನ ದಿನಗಳಲ್ಲಿ ಪೊಲೀಸರ ಕಿರುಕುಳ ಖಂಡಿಸಿ ಪ್ರತಿಭಟನೆ
ಚಡಚಣ ಪಟ್ಟಣದಲ್ಲಿ ಪೊಲೀಸರ ಕಿರುಕುಳ ಖಂಡಿಸಿ ಸರಾಫ ವರ್ತಕರು ತಮ್ಮ ಅಂಗಡಿ ಮುಂಗಟ್ಟು ಬಂದ್ ಮಾಡಿ ಮುಖ್ಯ ರಸ್ತೆಯಲ್ಲಿ ಬೃಹತ್ ರ‌್ಯಾಲಿ ಮುಖಾಂತರ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಉಪತಹಸೀಲ್ದಾರ್ ಹುಸನಪ್ಪ ಹೊಸಮನಿಗೆ ಮನವಿ ಸಲ್ಲಿಸಿದರು. ಪ್ರಕಾಶ ಬಂಡರಕವಟೆ, ಆರ್.ಜಿ. ಪಾವಲೆ, ಎಸ್.ಜಿ. ಪಾವಲೆ ಮತ್ತಿತರರಿದ್ದರು.
ಚಡಚಣ:ಪಟ್ಟಣದಲ್ಲಿ ಸರಾಫ (ಬಂಗಾರ) ವರ್ತಕರಿಗೆ ಇತ್ತೀಚಿನ ದಿನಗಳಲ್ಲಿ ಪೊಲೀಸರ ಕಿರುಕುಳ ಹೆಚ್ಚಾಗಿದ್ದು, ಅದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ, ಸರಾಫ ವರ್ತಕರ ಸಂಘದ ಸದಸ್ಯರು ಚಡಚಣ ಉಪ ತಹಸೀಲ್ದಾರ್ ಹುಸನಪ್ಪ ಹೊಸಮನಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕರವೇ ತಾಲೂಕಾಧ್ಯಕ್ಷ ಸೋಮಶೇಖರ ಕಂಬಾರ ಮಾತನಾಡಿ, ಪಟ್ಟಣವು ಮಹಾರಾಷ್ಟ್ರದ ಗಡಿ ಭಾಗದಲ್ಲಿದ್ದು, ಆ ರಾಜ್ಯದ ಕಳ್ಳರು ಯಾವುದೋ ಸ್ಥಳದಲ್ಲಿ ಬಂಗಾರ ಕಳವು ಮಾಡಿ ಅದನ್ನು ಎಲ್ಲಿ ಮಾರಾಟ ಮಾಡಿರುತ್ತಾರೋ ಎಂಬುದು ನಮಗೆ ಗೊತ್ತಿರುವುದಿಲ್ಲ. ಆದರೆ, ಪೊಲೀಸರು ಕಳ್ಳರೊಂದಿಗೆ ಏಕಾಏಕಿ ಬಂದು ಅವರು ತೋರಿಸಿದ ಅಂಗಡಿಗೆ ನುಗ್ಗಿ ಅಂಗಡಿ ಮಾಲೀಕರನ್ನು ಅಂಗಡಿ ಬಂದ್ ಮಾಡಿ ನಮ್ಮ ಜತೆ ಠಾಣೆಗೆ ಬಾ ಎಂದು ಕಳ್ಳನ ಜತೆಗೆ ಆರೋಪಿ ರೀತಿ ಅವರನ್ನೂ ವಾಹನದಲ್ಲಿ ಕರೆದುಕೊಂಡು ಹೋಗಿ, ಪೊಲೀಸ್ ಠಾಣೆಯಲ್ಲಿ ಕಳ್ಳನು ಎಷ್ಟು ಬಂಗಾರ ಹೇಳುತ್ತಾನೋ ಅಷ್ಟನ್ನು ಸರಾಫ ವರ್ತಕರಿಗೆ ಬಲವಂತವಾಗಿ ಒಪ್ಪಿಸಿ ಅಷ್ಟು ಬಂಗಾರ ವಶಪಡಿಸಿಕೊಳ್ಳುತ್ತಾರೆ. ಇದಕ್ಕೆ ಯಾವುದೇ ಎಫ್‌ಐಆರ್ ಅಥವಾ ಪ್ರಕರಣ ದಾಖಲಿಸಿದ ಪುರಾವೆ ನೀಡುವುದಿಲ್ಲ. ಹೀಗಾಗಿ ತಾಲೂಕಿನಾದ್ಯಂತ ಸರಾಫ ವರ್ತಕರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಪ.ಪಂ. ಸದಸ್ಯ ಚೇತನ ನಿರಾಳೆ ಮಾತನಾಡಿ, ಪೊಲೀಸರು ಸರಾಫ ವರ್ತಕರ ಮೇಲೆ ಈ ರೀತಿ ದೌರ್ಜನ್ಯವೆಸಗುತ್ತಿರುವುದು ಖಂಡನೀಯ. ಇನ್ನು ಮುಂದೆ ನಾವು ಯಾವುದೇ ರೀತಿಯ ದೌರ್ಜನ್ಯವನ್ನು ಸಹಿಸಿಕೊಳ್ಳುವುದಿಲ್ಲ. ಪೊಲೀಸರು ಇಂತಹ ಕಾನೂನುಬಾಹಿರ ಕೆಲಸಗಳನ್ನು ನಿಲ್ಲಿಸಬೇಕು. ಇಲ್ಲದೇ ಹೋದರೆ ಇಂದು ತಾಲೂಕಿನಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಮುಂದೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.