ಟೌನ್‌ಶಿಪ್ ಪಿತಾಮಹರಿಂದಲೇ ಪ್ರತಿಭಟನೆ

 Protest led by the 'Father of the Township' himself
Protest led by the 'Father of the Township' himself
Published on
ಮಾಗಡಿ :ಬಿಡದಿ ಟೌನ್‌ಶಿಪ್ ಪಿತಾಮಹರೇ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮತ್ತು ಬಿಜೆಪಿ ನಾಯಕರೇ ಮೂಲ ಕಾರಣ ಕರ್ತರಾಗಿದ್ದು, ಇಂದು ಅವರೇ ಬೀದಿಗಿಳಿದು ನಾಟಕೀಯವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಟೌನ್‌ಶಿಪ್ ಪಿತಾಮಹರು ಯಾರು ಎಂಬುದನ್ನು ಜನರಿಗೆ ತಿಳಿಸಲು ಶನಿವಾರ ಸುದ್ದಿಗೋಷ್ಠಿ ಕರೆಯುತ್ತಿದ್ದೇನೆ. ಈ ಯೋಜನೆಗೆ ಸಂಬಂಧಿಸಿದಂತೆ ಸಂಪೂರ್ಣ ವಿವರಗಳನ್ನು ಅಲ್ಲಿ ಹಂಚಿಕೊಳ್ಳಲಿದ್ದೇನೆ. ಯಾರೋ ತಾವೇ ತಂದ ಯೋಜನೆ ವಿರುದ್ಧ ತಾವೇ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
ಟೌನ್‌ಶಿಪ್ ಯೋಜನೆಗೆ ಮೊದಲನೆಯದಾಗಿ ಎಚ್.ಡಿ. ಕುಮಾರಸ್ವಾಮಿ ಅವರು ಹಾಗೂ ಎರಡನೆಯದಾಗಿ ಬಿಜೆಪಿ ಅವರೇ ನೇರ ಕಾರಣಕರ್ತರು ಎಂದು ಸ್ಪಷ್ಟಪಡಿಸಿದರು.
ನಮ್ಮ ಜೀವನವೇಲ್ಲ ಪೊಲೀಸ್ ಇಟ್ಟುಕೊಂಡೆ ರಾಜಕಾರಣ ಮಾಡಿರುವುದು. ಈಗಲೂ ಪೊಲೀಸ್ ಇಟ್ಟುಕೊಂಡೆ ಮಾಡುತ್ತಿರುವುದು. ಅವರ ಆರೋಪಗಳು ಯಾವುದೇ ಗಂಭೀರವಾಗಿರುವುದಿಲ್ಲ. ಜವಾಬ್ದಾರಿಯುತ ಹಾಗೂ ಗೌರವಾನ್ವಿತ ಸ್ಥಾನದಲ್ಲಿರುವ ಕೇಂದ್ರ ಸಚಿವರು ಮಾತನಾಡುವಾಗ ತೂಕ ನೋಡಿ ಮಾತನಾಡಬೇಕು. ಆದರೆ ಅವರು ತಮ್ಮಿಷ್ಟ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿದ್ದರೂ ಟೌನ್‌ಶಿಪ್ ವಿಷಯದಲ್ಲಿ ಕೇವಲ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಯೋಜನೆಯನ್ನು ತಂದವರೇ ಇಬ್ಬರೂ ಸೇರಿ ರೈತರ ಪರ ಯಾರು ಎಂದು ತೋರಿಸಿಕೊಳ್ಳಲು ಸ್ಪರ್ಧೆಗೆ ಬಿದ್ದಿದ್ದಾರೆ. ಅವರವರಲ್ಲೇ ಸ್ಫರ್ಧೆ ಶುರುವಾಗಿದ್ದು, ಇಬ್ಬರೂ ಬಟ್ಟೆ ಬಿಚ್ಚಿಕೊಂಡು ನಡುಬೀದಿಯಲ್ಲಿ ಕುಣಿಯುತ್ತಿದ್ದಾರೆ. ಕುಣಿಯಲಿ ಬಿಡಿ, ನೋಡೋಣ ಎಂದು ವ್ಯಂಗ್ಯವಾಡಿದರು.
ಪಟ್ಟಣದಲ್ಲಿ ಕೆಶಿಪ್ ರಸ್ತೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಕೂಡಲೇ ಪೂರ್ಣಗೊಳಿಸಲಾಗುವುದು. ಪಟ್ಟಣದಲ್ಲಿನ ಬಹುತೇಕ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಮುಖಂಡರಾದ ಸಿಂಗ್ರಿಗೌಡ, ಸೀಗೆಕುಪ್ಪೆ ಲೋಕೇಶ್, ಮಾಡಬಾಳ್ ಆನಂದ್, ಪಿಸಿ ಪಾಳ್ಯ ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷ ಬಿಟಿ.ವೆಂಕಟೇಶ್, ಕೋರಮಂಗಲ ಶ್ರೀನಿವಾಸ್, ಬಸಂತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net