ಜಮಖಂಡಿ ನಗರದ ದೇಸಾಯಿ ವೃತ್ತದಲ್ಲಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ವಿಜಯ ತಿಪ್ಪರಡ್ಡಿ, ರಮೇಶ ಅಮಾತಿ, ಸಿದ್ದು ಧನಗರ, ಅವಿನಾಶ ಚಿನಗುಂಡಿ, ಆನಂದ ಕಾಂಬಳೆ ಇತರರಿದ್ದರು.
ಜಮಖಂಡಿ: ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ವತಿಯಿಂದ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನಗರದ ದೇಸಾಯಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಬಾಗಲಕೋಟೆ ಜಿಲ್ಲಾಧ್ಯಕ್ಷ ವಿಜಯ ತಿಪ್ಪರಡ್ಡಿ ಮಾತನಾಡಿ, ಕೇಂದ್ರ ಸರ್ಕಾರದ ನಿರ್ಲಕ್ಷೃದಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವ ರೀತಿಯಲ್ಲಿ ಪರೀಕ್ಷಾ ವ್ಯವಸ್ಥೆ ನಡೆಯುತ್ತಿದೆ. 2024ರಲ್ಲಿ ಪರೀಕ್ಷಾ ಸುಧಾರಣೆಗಾಗಿ ಸಮಿತಿ ರಚನೆ ಮಾಡಿದ್ದರೂ ಅದರ ವರದಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿಲ್ಲ. ಇದೇ ನಿರ್ಲಕ್ಷೃದಿಂದ ಈ ಬಾರಿಯೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.
ಬಡ ವಿದ್ಯಾರ್ಥಿಗಳ ಪಾಲಕರು ಲಕ್ಷಾಂತರ ರೂಪಾಯಿ ಸಾಲಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ವರ್ಷಗಟ್ಟಲೆ ಹಗಲಿರುಳು ಓದಿ ಪರೀಕ್ಷೆ ಬರೆದ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ದೊಡ್ಡ ಅನ್ಯಾಯವಾಗಿದೆ. ಪರೀಕ್ಷಾ ವೈಲ್ಯದ ನೈತಿಕ ಹೊಣೆ ಹೊತ್ತು ಪ್ರಧಾನಿ ಹಾಗೂ ಕೇಂದ್ರ ಶಿಕ್ಷಣ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ರಮೇಶ ಅಮಾತಿ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗಿದೆ. ಇದೇ ರೀತಿ ಅಕ್ರಮಗಳು ಮುಂದುವರಿದರೆ ದೇಶಾದ್ಯಂತ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಪಾರ್ಲಿಮೆಂಟ್ ಚಲೋ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿದ್ದು ಧನಗರ, ಅವಿನಾಶ ಚಿನಗುಂಡಿ, ಆನಂದ ಕಾಂಬಳೆ, ವಿಜಯ ಮಾಂಗ, ವಿಕಾಸ ಬೆಳಗಲಿ, ಶಿವರಾಜ ಮಂಟೂರ, ಅರ್ಪಿತಾ ಪಾಟೀಲ, ವರದಾ ಕುಲಕರ್ಣಿ, ವಿನೋದ ನಾವಿ, ಸಂಗಮೇಶ ಹೊಸಕೋಟಿ, ಪೂಜಾ ಹವಾಲ್ದಾರ ಸೇರಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.