ಹಂಪಿ ಉತ್ಸವ; ಸ್ಮಾರಕಗಳ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ
ಕಮಲಾಪುರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ವಿಚಾರ ಸಂಕಿರಣವನ್ನು ಶಾಸಕ ಎಚ್.ಆರ್.ಗವಿಯಪ್ಪ ಉದ್ಘಾಟಿಸಿದರು. ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ಎಸ್. ತಳಕೇರಿ, ಉಪವಿಭಾಗಾಧಿಕಾರಿ ವಿವೇಕ್, ಹೊಸಪೇಟೆಯ ತಹಸೀಲ್ದಾರ್ ಶ್ರುತಿ, ಇತಿಹಾಸಕಾರರು, ಪ್ರಾಧ್ಯಪಕರು, ಸಂಶೋಧಕರು ಇದ್ದರು.
ಹಂಪಿ: ಮಕ್ಕಳಲ್ಲಿ ಇತಿಹಾಸದ ಅರಿವು ಮೂಡಿಸಲು ಮತ್ತು ಹಂಪಿ ಪರಂಪರೆಯನ್ನು ಪರಿಚಯಿಸಲು ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ತಿಂಗಳಿಗೊಂದು ವಿಶೇಷ ಉಪನ್ಯಾಸ ಏರ್ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಕಮಲ್ ಮಹಲ್ ವೇದಿಕೆಯಲ್ಲಿ ವಿಜಯನಗರ ಅಧ್ಯಯನ ಕುರಿತು ಶನಿವಾರ ಆಯೋಜಿಸಿದ್ದ 28ನೇ ವಾರ್ಷಿಕ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಹಂಪಿಯ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೇ ಭಾರತೀಯ ಪುರಾತತ್ವ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರವಾಸಿಗರು ಹಂಪಿಯ ದೇವಾಲಯಗಳು ಮತ್ತು ಸ್ಮಾರಕಗಳನ್ನು ಸುಗಮವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಸಂಪರ್ಕ ರಸ್ತೆಗಳನ್ನು ನಿರ್ಮಿಸಬೇಕಿದೆ. ಇದರಿಂದ ನೂರಾರು ಸ್ಮಾರಕಗಳನ್ನು ಪ್ರವಾಸಿಗರು ಸುಲಭವಾಗಿ ಸಂದರ್ಶಿಸಲು ಸಾಧ್ಯವಾಗುತ್ತದೆ ಎಂದರು.
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜ ಎ. ಮಾತನಾಡಿ, ವಿಜಯನಗರದ ಕುರಿತಾದ ಈ ವಿಚಾರ ಸಂಕಿರಣವು ಇತಿಹಾಸದ ಮರುಚಿಂತನೆ ಮತ್ತು ಅವಲೋಕನಕ್ಕೆ ಉತ್ತಮ ವೇದಿಕೆಯಾಗಿದೆ. ರಾಜ್ಯ ಪುರಾತತ್ವ ಇಲಾಖೆಯು ಗ್ರಾಮವಾರು ಪ್ರಾಚ್ಯ ಅವಶೇಷಗಳ ಸರ್ವೇಕ್ಷಣಾ ಕಾರ್ಯದ ಮೂಲಕ ಈಗಾಗಲೇ 119 ತಾಲೂಕುಗಳಲ್ಲಿ ಸಮೀಕ್ಷೆ ನಡೆಸಿದೆ. ಲಭ್ಯವಿರುವ ಪ್ರಾಚ್ಯ ಅವಶೇಷಗಳನ್ನು ಅಧಿಕೃತವಾಗಿ ದಾಖಲೀಕರಣಗೊಳಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ ಎಂದು ಹೇಳಿದರು.
ಪುರಾತತ್ವ ಇಲಾಖೆಯ ನಿರ್ದೇಶಕ ಡಾ.ಆರ್. ಶೇಜೇಶ್ವರ ಮಾತನಾಡಿದರು. ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ಎಸ್. ತಳಕೇರಿ, ಉಪವಿಭಾಗಾಧಿಕಾರಿ ವಿವೇಕ್, ಹೊಸಪೇಟೆಯ ತಹಸೀಲ್ದಾರ್ ಶ್ರುತಿ ಹಾಗೂ ವಿವಿಧ ಇತಿಹಾಸಕಾರರು, ಪ್ರಾಧ್ಯಾಪಕರು ಮತ್ತು ಸಂಶೋಧಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಗತ್ಯವಿದೆ ಆಳ ಅಧ್ಯಯನ
ಸೆಮಿನಾರ್‌ನಲ್ಲಿ ಮಾತನಾಡಿದ ಕನ್ನಡ ವಿವಿ ಕುಲಸಚಿವ ಡಾ.ವಿರುಪಾಕ್ಷಿ ಪೂಜಾರಹಳ್ಳಿ, ಹಂಪಿಯ ಕುರಿತು ಬಹುಶಿಸ್ತು ಮತ್ತು ಅಂತರ್ ಶಿಸ್ತು ನೆಲೆಯಲ್ಲಿ ಹೊಸ ಅಧ್ಯಯನಗಳು ನಡೆಯಬೇಕಾದ ಅಗತ್ಯವಿದೆ. ವಿಜಯನಗರ ಕಾಲದಲ್ಲಿ ರಚನೆಯಾದ ಸಾಹಿತ್ಯ ಕೃತಿಗಳನ್ನು ಇತಿಹಾಸ ರಚನೆಗೆ ಪೂರಕ ಆಧಾರಗಳನ್ನಾಗಿ ಬಳಸಿಕೊಂಡು ಮರುಚಿಂತನೆ ಮಾಡಬೇಕು. ವಿಜಯನಗರದ ಇತಿಹಾಸದ ಕುರಿತು ಸಂಸ್ಕೃತ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿರುವ ಸಾಹಿತ್ಯ ಕೃತಿಗಳನ್ನು ದೇಶದ ವಿವಿಧ ಭಾಷೆಗಳಿಗೆ ಅನುವಾದಿಸಬೇಕು.
ವಿಜಯನಗರವನ್ನು ಆಳಿದ ನಾಲ್ಕು ವಂಶಗಳಲ್ಲಿ ಸಂಗಮ ಮತ್ತು ತುಳುವ ವಂಶಗಳ ಬಗ್ಗೆ ಹೆಚ್ಚು ಸಂಶೋಧನೆಗಳಾಗಿವೆ. ಆದರೆ, ಸಾಳುವ ಮತ್ತು ಅರವೀಡು ಮನೆತನಗಳ ಕುರಿತು ಸಮಗ್ರ ಅಧ್ಯಯನ ನಡೆಸುವ ಯೋಜನೆ ರೂಪಿಸಬೇಕು. ಅಲ್ಲದೆ, ವಿಜಯನಗರ ಕಾಲದ ದೇಶಿ ಮತ್ತು ವಿದೇಶಿ ವಾಣಿಜ್ಯ ವ್ಯವಹಾರಗಳ ಬಗ್ಗೆಯೂ ಪುನರ್ ಮೌಲ್ಯೀಕರಣ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ಮಾಧ್ಯಮಗಳ ಅಬ್ಬರದ ಕಾಲದಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎನ್ನುವ ಗೊಂದಲ ಉಂಟಾಗುತ್ತಿದೆ. ವಿಜಯನಗರದ ಇತಿಹಾಸವನ್ನು ಯುವಜನರಿಗೆ ಸರಿಯಾಗಿ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕನ್ನಡ ವಿವಿಯಿಂದ ಹಂಪಿಯ ಕುರಿತು ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿವಿಯು ಅನುದಾನದ ಕೊರತೆಯಿಂದ ಸೊರಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸರ್ಕಾರದೊಂದಿಗೆ ಚರ್ಚಿಸಲಾಗಿದೆ.
ಹಂಪಿಯ ಉತ್ಖನನದಲ್ಲಿ ಇತಿಹಾಸಕಾರರ ಪಾತ್ರ ಮಹತ್ತರವಾದುದು. ಇನ್ನು ಹೆಚ್ಚಿನ ಸಂಶೋಧನೆ ಮತ್ತು ಅಧ್ಯಯನಗಳು ನಡೆಯಲಿ.