ಮಾನ್ಸೂನ್ ಶುಕ್ತಿ ಕುಗ್ಗಿಸಿದ ದೀರ್ಘಕಾಲದ ಒಣ ಹವೆ:ರಾಜ್ಯದ 166 ತಾಲೂಕುಗಳಲ್ಲಿ ಮಳೆ ಅಭಾವ- dry weather has reduced the monsoon's effectiveness

.ದೀರ್ಘಕಾಲದ ಒಣ ಹವೆಯು ಮುಂಗಾರು ಶಕ್ತಿ ಕುಗ್ಗಿಸಿದೆ
.ದೀರ್ಘಕಾಲದ ಒಣ ಹವೆಯು ಮುಂಗಾರು ಶಕ್ತಿ ಕುಗ್ಗಿಸಿದೆ
Published on

ಬೆಂಗಳೂರು: ಮುಂಗಾರು ಪ್ರವೇಶಿಸಿ ಎರಡೂವರೆ ತಿಂಗಳು ಮುಗಿಯುತ್ತಿರುವ ನಡುವೆಯೂ ರಾಜ್ಯದಲ್ಲಿ ಮಳೆ ಅಭಾವ ಮತ್ತಷ್ಟು ಮುಂದುವರಿದಿದೆ.ಇದುವರೆಗೆ 166 ತಾಲೂಕುಗಳಲ್ಲಿ ಮಳೆ ಕುಂಠಿತವಾಗಿದೆ.

ರಾಜ್ಯಾದ್ಯಂತ ಜೂ.1 ರಿಂದ ಆ.13ವರೆಗೆ ವಾಡಿಕೆಯಂತೆ 579 ಮಿಮೀ ಮಳೆಯಾಗುವ ಬದಲು 411 ಮಿಮೀ ಸುರಿದಿದ್ದು, ಒಟ್ಟಾರೆ ಶೇ.29 ಮಳೆ ಕೊರತೆಯಾಗಿದೆ. ಮಳೆ ಕುಂಠಿತದಲ್ಲಿ ಮೈಸೂರು ಮೊದಲ ಸ್ಥಾನದಲ್ಲಿದ್ದರೆ, ಚಾಮರಾಜನಗರ, ಕೋಲಾರ, ಹಾವೇರಿ, ಬಳ್ಳಾರಿ, ಕೊಪ್ಪಳ, ಕಲಬುರಗಿ ಕ್ರಮವಾಗಿ ನಂತರ ಸ್ಥಾನದಲ್ಲಿವೆ.
ಕರಾವಳಿಯಲ್ಲಿ ವಾಡಿಕೆಯಂತೆ 2,401 ಮಿಮೀ ಸುರಿಯಬೇಕಿತ್ತು. ಆದರೆ, 1,839 ಮಿಮಿ ಮಳೆ ಬಿದ್ದಿದ್ದು, ಶೇ.23 ಅಭಾವವಾಗಿದೆ. ಮಲೆನಾಡಿನ ಜಿಲ್ಲೆಗಳಲ್ಲಿ 1,177 ಮಿಮೀ ಬದಲಾಗಿ 791 ಮಿಮಿ ಮಳೆಯಾಗಿದ್ದು, ಶೇ.33 ಕುಂಠಿತವಾಗಿದೆ. ದಕ್ಷಿಣ ಕರ್ನಾಟಕದಲ್ಲಿ 178 ಮಿಮೀ ಮಳೆಯಾಗಬೇಕಿತ್ತು. 114 ಮಿಮೀ ಸುರಿದಿದ್ದು, ಶೇ.36 ಮಳೆ ಕುಂಠಿತವಾದರೆ, ಉತ್ತರ ಕರ್ನಾಟಕದಲ್ಲಿ 273 ಮಿಮೀ ಬದಲಾಗಿ 199 ಮಿಮೀ ಬಿದ್ದಿದ್ದು, ಶೇ.27 ಕೊರತೆಯಾಗಿದೆ.
ಮಳೆ ಅಭಾವದಿಂದ ಈಗಾಗಲೇ ರಾಜ್ಯದಲ್ಲೆಡೆ ಬರ ಎದುರಾಗಿದೆ. ಇದರಿಂದಾಗಿ ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ.ದೀರ್ಘಕಾಲದ ಒಣ ಹವೆಯು ಮುಂಗಾರು ಶಕ್ತಿಯನ್ನು ಕುಗ್ಗಿಸಿದೆ. ಮಳೆಗಾಲದಲ್ಲೂ ಬಿಸಿಲಿನ ವಾತಾವರಣ ನಿರ್ಮಾಣವಾಗಿದೆ.ನೀಲಿ ಆಕಾಶ,ಮೋಡಗಳು ಇಲ್ಲದಿರುವ ಪರಿಣಾಮ ಕೆಲ ಜಿಲ್ಲೆಗಳಲ್ಲಿ ಉಷ್ಣಾಂಶವೂ ಹೆಚ್ಚಳವಾಗಿದೆ. ಆಗಸ್ಟ್, ಸೆಪ್ಟೆಂಬರ್‌ನಲ್ಲಿ ರಾಜ್ಯಾದ್ಯಂತ ಇನ್ನಷ್ಟು ಮಳೆ ಕೊರತೆ ಮಾತ್ರವಲ್ಲದೆ ವಾಡಿಕೆಗಿಂತ ತಾಪಮಾನವೂ ಹೆಚ್ಚಳವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಒಣಹವೆ ಮುಂದುವರಿಕೆ:
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದೆ. ಈ ವೇಳೆ ಕೆಲ ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆಯಾಗಲಿದೆ. ಮುಂದಿನ 2 ತಿಂಗಳು ರಾಜ್ಯದಲ್ಲಿ ಮಳೆ ಕೊರತೆ ಸಂಭವನೀಯತೆ ಶೇ.50 ಇದೆ. ಆಗಸ್ಟ್‌ನಲ್ಲಿ ಮಾತ್ರ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಮಳೆ ಬೀಳಬಹುದು. ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾಗಲಿದೆ. ಹವಾಮಾನ ಅಸಮತೋಲನಕ್ಕೆ ‘ಎಲ್ ನಿನೋ ಕಾರಣ ಎಂದು ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net