ತಾಳಿಕೋಟೆಯ ಶ್ರೀಮಠದ ಸಿದ್ಧಲಿಂಗ ದೇವರ ಅಶ್ವಮೇಧ ರಥದ ಭವ್ಯ ಮೆರವಣಿಗೆ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀಖಾಸ್ಗತರ ಗಂಗಾಸ್ಥಳದಲ್ಲಿ ಸಾಗರೋಪಾದಿಯಲ್ಲಿ ಭಕ್ತ ಸಮೂಹ
ತಾಳಿಕೋಟೆ : ಶ್ರೀಖಾಸ್ಗತ ಮಹಾ ಶಿವಯೋಗಿಗಳ ಜಾತ್ರ್ಯೋತ್ಸವ ನಿಮಿತ್ತ ಸೋಮವಾರರಂದು ಜರುಗಿದ ಖಾಸ್ಗತ ಮಹಾಶಿವಯೋಗಿಗಳ ಗಂಗಾಸ್ಥಳ, ಶ್ರೀಗಳ ಭವ್ಯ ಮೆರವಣಿಗೆಯ ಮಹಾ ಕಾರ್ಯಕ್ರಮ ಮಠದ ಬಾಲಶಿವಯೋಗಿ ಶ್ರೀ ಸಿದ್ಧಲಿಂಗದೇವರ ಅಧ್ಯಕ್ಷತೆಯಲ್ಲಿ ಭಕ್ತಿಭಾವದಿಂದ ಜರುಗಿ ಭಾವೈಕ್ಯತೆಗೆ ಸಾಕ್ಷಿಯಾಯಿತು.
ಆನೆ ಅಂಬಾರಿಯ ಶ್ರೀ ವಿರಕ್ತಮಹಾಸ್ವಾಮಿಗಳ ಭಾವಚಿತ್ರದ ಭವ್ಯ ಮೆರವಣಿಗೆ ಹಾಗೂ ಅಶ್ವಮೇಧ ಬೆಳ್ಳಿಯ ರಥದ ಬಾಲಶಿವಯೋಗಿ ಶ್ರೀ ಸಿದ್ಧಲಿಂಗದೇವರು ಪಲ್ಲಕ್ಕಿ ಹಾಗೂ ರಥದ ಕಳಸದ ಮೆರವಣಿಗೆ ಪಟ್ಟಣದ ಪ್ರಮುಖ ಬಡಾವಣೆಯಲ್ಲಿ ಹಾಯ್ದು ಪುರಾತನ ಭೀಮನಬಾವಿಯಲ್ಲಿ ಗಂಗಾಸ್ಥಳ ಮಹಾ ಕಾರ್ಯಕ್ರಮ ಮುಗಿಸಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಹಾಯ್ದು ಶ್ರೀಮಠಕ್ಕೆ ಬಂದು ತಲುಪಿತು.
ಸುಮಂಗಲೆಯರು ತಮ್ಮ ಮನೆಯ ಅಂಗಳದಲ್ಲಿ ರಂಗೋಲಿ ಚಿತ್ರ ಬಿಡಿಸಿ ಮಹಾತ್ಮರ ಭವ್ಯ ಮೆರವಣಿಗೆಯನ್ನು ಸ್ವಾಗತಿಸಿದ್ದು ಇಡೀ ಭಕ್ತ ಸಮೂಹಕ್ಕೆ ಆನಂದವನ್ನುಂಟು ಮಾಡಿತು.
ಕಲಾ ತಂಡಗಳಿಂದ ಐತಿಹಾಸಿಕ ಮೆರಗು: ಅಂಬಾರಿಯ ಮೆರವಣಿಗೆಯುದ್ದಕ್ಕೂ ವಿವಿಧ ವಾದ್ಯ, ವೈಭವ ಅಲ್ಲದೇ ಗೊಂಬೆ ಕುಣಿತ, ಕರಡಿ ಮಜಲು, ಸನಾದಿಯ ನಾದ, ಶಿವ ತಾಂಡವ ವೇಷದಾರಿಯ ಕುಣಿತ ಒಳಗೊಂಡು ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.
ಪ್ರಸಾದ ವಿತರಣೆ : ಮೆರವಣಿಗೆಯಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಅಭಿಮಾನಿ ಬಳಗ, ನಮ್ಮ ಗೆಳೆಯರ ಬಳಗ ಸೇರಿ ವಿವಿಧ ಸಂಘಗಳಿಂದ ದಾರಿಯುದ್ದಕ್ಕೂ ವಿವಿಧ ತರಹದ ಪ್ರಸಾದ ತಂಪು ಪಾನಿಯಾ ವಿತರಿಸಲಾಯಿತು.
ಜಾತ್ರ್ಯೋತ್ಸವ ನಿಮಿತ್ತ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಮುಂಬಯಿ, ಪುಣೆ, ಹೈದ್ರಾಬಾದ್, ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಕಲಬುರ್ಗಿಯಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಪಾಲ್ಗೊಂಡಿತ್ತು.
ಈ ಮೆರವಣಿಗೆಯಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ಶ್ರೀ ವೇ. ಮುರುಘೇಶ ವಿರಕ್ತಮಠ, ವೇ. ವಿಶ್ವನಾಥ ವಿರಕ್ತಮಠ, ಮತ್ತಿತರರು ಪಾಲ್ಗೊಂಡಿದ್ದರು. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪಿಎಸ್‌ಐ ಜ್ಯೋತಿ ಖೋತ್ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ತಾಳಿಕೋಟೆಯ ಖಾಸ್ಗತೇಶ್ವರ ಮಹಾ ಮಠದ ಶ್ರೀ ಖಾಸ್ಗತೇಶ್ವರ ಮಹಾ ಶಿವಯೋಗಿಗಳ ರಥೋತ್ಸವ ಸೋಮವಾರ ಲಕ್ಷಾಂತರ ಭಕ್ತಸಮೂಹ ಮಧ್ಯೆ ವಿಜೃಂಭಣೆಯಿಂದ ಜರುಗಿತು.