ಎಥೆನಾಲ್ ಉತ್ಪಾದಕರಿಗೆ ಸಬ್ಸಿಡಿ ಅಕ್ಕಿ: ಕೇಂದ್ರ ಸರ್ಕಾರದ ನೀತಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ! Priyank Kharge

 Priyank Kharge  ಸಾಂದರ್ಭಿಕ ಚಿತ್ರ
Priyank Kharge ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಆಹಾರ ಭದ್ರತೆಗಾಗಿ ತೆರಿಗೆದಾರರ ಹಣದಲ್ಲಿ ಭತ್ತ ಖರೀದಿಸಿ, ಸಂಗ್ರಹಿಸಿ, ಸಾಗಣೆ ವೆಚ್ಚ ಭರಿಸಿದ ಬಳಿಕ, ಭಾರತೀಯ ಆಹಾರ ನಿಗಮ (FCI) ಮೂಲಕ ಅದನ್ನು ಎಥೆನಾಲ್ ಉತ್ಪಾದಕರಿಗೆ ಸ್ವಾಧೀನ ವೆಚ್ಚಕ್ಕಿಂತ ಶೇ.40 ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ಮಾಹಿತಿ ತಂತ್ರಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರಶ್ನಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಭಾರತದ ಎಥೆನಾಲ್ ಗಣಿತವೇ ಸರಿಯಾಗಿ ಹೊಂದಿಕೆಯಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಆಹಾರ ಭದ್ರತೆಯ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣದಿಂದ ರೈತರಿಂದ ಭತ್ತ ಖರೀದಿಸಲಾಗುತ್ತದೆ. ತದನಂತರ ಧಾನ್ಯದ ಸಂಗ್ರಹಣೆ ಹಾಗೂ ಸಾಗಣೆಗೆ ಸರ್ಕಾರ ಮತ್ತೆ ಹೆಚ್ಚುವರಿ ವೆಚ್ಚ ಭರಿಸುತ್ತದೆ. ಇಷ್ಟೆಲ್ಲ ಖರ್ಚು ಮಾಡಿದ ನಂತರ ಅದೇ ಅಕ್ಕಿಯನ್ನು ಎಥೆನಾಲ್ ಉತ್ಪಾದಕರಿಗೆ ಸ್ವಾಧೀನ ವೆಚ್ಚಕ್ಕಿಂತ ಶೇ. 40 ರಷ್ಟು ರಿಯಾಯಿತಿ ದರದಲ್ಲಿ ನೀಡುವುದು ಯಾವ ರೀತಿಯ ಆರ್ಥಿಕ ನೀತಿ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ತೆರಿಗೆದಾರರ ಹಣದಿಂದ ಧಾನ್ಯಕ್ಕೆ ಸಬ್ಸಿಡಿ, ಅದರ ಖರೀದಿ, ಸಂಗ್ರಹಣೆ ಹಾಗೂ ಸಾಗಣೆಗೆ ಸರ್ಕಾರದ ವೆಚ್ಚ, ಕೊನೆಗೆ ಅದೇ ಧಾನ್ಯವನ್ನು ಎಥೆನಾಲ್ ಉತ್ಪಾದಕರಿಗೆ ಕಡಿಮೆ ಬೆಲೆಗೆ ಮಾರಾಟ ಹಾಗಾದರೆ ಈ ಇಡೀ ವ್ಯವಸ್ಥೆಯಿಂದ ನಿಜವಾಗಿ ಲಾಭ ಪಡೆಯುತ್ತಿರುವವರು ಯಾರು? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ತುರ್ತಾಗಿ ಸೃಷ್ಟಿಸಲಾದ ಎಥೆನಾಲ್ ಉತ್ಪಾದನಾ ಸಾಮರ್ಥ್ಯಕ್ಕೆ ಅಗತ್ಯವಾದ ಕಚ್ಚಾ ವಸ್ತು ಒದಗಿಸುವ ಉದ್ದೇಶಕ್ಕಾಗಿ ಆಹಾರ ಧಾನ್ಯವನ್ನು ಬೃಹತ್ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದನೆಗೆ ತಿರುಗಿಸಲಾಗುತ್ತಿದೆಯೇ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಸರ್ಕಾರವೇ ಎಥೆನಾಲ್ ಉತ್ಪಾದಕರಿಂದ ಹೆಚ್ಚಿನ ಬೆಲೆಗೆ ಎಥೆನಾಲ್ ಖರೀದಿಸಿ ಅದನ್ನು ಪೆಟ್ರೋಲ್‌ನಲ್ಲಿ ಮಿಶ್ರಣ ಮಾಡುತ್ತಿದೆ. ಧಾನ್ಯವನ್ನು ರಿಯಾಯಿತಿ ದರದಲ್ಲಿ ನೀಡಿ, ಬಳಿಕ ಅದೇ ಉದ್ಯಮಿಗಳಿಂದ ಹೆಚ್ಚಿನ ಬೆಲೆಗೆ ಎಥೆನಾಲ್ ಖರೀದಿಸುವುದರಿಂದ ಅಂತಿಮವಾಗಿ ಸಾಮಾನ್ಯ ಗ್ರಾಹಕನಿಗೆ ಆಗುವ ಲಾಭವೇನು ಎಂದು ಸಚಿವರು ಪ್ರಶ್ನಿಸಿದ್ದಾರೆ.
ಎಥೆನಾಲ್ ಮಿಶ್ರಣದಿಂದ ಪೆಟ್ರೋಲ್ ಬೆಲೆ ಸಾರ್ವಜನಿಕರಿಗೆ ಕಡಿಮೆಯಾಗಿದೆಯೇ? ವಾಹನಗಳ ಮೈಲೇಜ್ ಹಾಗೂ ನಿರ್ವಹಣಾ ವೆಚ್ಚದ ಮೇಲಾಗುವ ಪರಿಣಾಮಗಳನ್ನು ಯಾರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗಳನ್ನೂ ಅವರು ಎತ್ತಿದ್ದಾರೆ.
ಯಾರು ಯಾರಿಗೆ ಸಬ್ಸಿಡಿ ನೀಡುತ್ತಿದ್ದಾರೆ? ಈ ವ್ಯವಸ್ಥೆಯಲ್ಲಿ ನಿಜವಾದ ಲಾಭ ಯಾರಿಗೆ? ಎಂಬುದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. ಆಹಾರ ಭದ್ರತೆಗೆ ಮೀಸಲಿಟ್ಟ ಧಾನ್ಯವನ್ನು ಎಥೆನಾಲ್ ಉತ್ಪಾದನೆಗೆ ತಿರುಗಿಸುವ ನೀತಿಯ ಆರ್ಥಿಕ, ಸಾಮಾಜಿಕ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ಪಾರದರ್ಶಕವಾಗಿ ಲೆಕ್ಕ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net