ದೊಡ್ಡಬಳ್ಳಾಪುರ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟಿಸಿದರು. ಶಾಸಕ ಧೀರಜ್ ಮುನಿರಾಜು, ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧಾ, ಎ.ಸಿ.ದುರ್ಗಾ ಶ್ರೀ, ಡಿವೈಎಸ್ಪಿ ಪಾಂಡುರಂಗ, ಪ್ರಾಂಶುಪಾಲ ಸದಾಶಿವ ರಾಮಚಂದ್ರಗೌಡ, ತಹಸೀಲ್ದಾರ್ ಮಲ್ಲಪ್ಪ ಯರಗೋಳ, ಕೈಗಾರಿಕಾ ಇಲಾಖೆ ಜಂಟಿ ಅಧಿಕಾರಿ ನರೇಂದ್ರ ಬಾಬು, ಮಹೇಶ್ ಕುಮಾರ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಜಗನ್ನಾಥ, ಮುಖಂಡ ಮುನಿಕೃಷ್ಣಪ್ಪ ಇತರರು ಇದ್ದರು.
ದೊಡ್ಡಬಳ್ಳಾಪುರ : ಕೈಗಾರಿಕಾ ವಿಸ್ತರಣೆಯಿಂದ ಭೂಮಿ ಕಳೆದುಕೊಂಡ ಕುಟುಂಬದ ಮಕ್ಕಳ ಉದ್ಯೋಗ ಅವಕಾಶಕ್ಕೆ ಆದ್ಯತೆ ನೀಡಲಾಗುವುದು ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದರು.
ನಗರದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೌಶಲಾಭಿವೃದ್ಧಿ ಇಲಾಖೆ, ತಾಲೂಕು ಆಡಳಿತ, ತಾಲೂಕು ಕೈಗಾರಿಕೆಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲೇ ಅತಿ ಹೆಚ್ಚು ಕೈಗಾರಿಕಾ ಪ್ರದೇಶ ಹೊಂದಿರುವ ಭಾಗ ದೊಡ್ಡಬಳ್ಳಾಪುರ. ಸುಮಾರು 10 ಸಾವಿರ ಎಕರೆ ಭೂಮಿ ಕೈಗಾರಿಕಾ ಪ್ರದೇಶಕ್ಕೆ ಒಳಪಟ್ಟಿದೆ. ಹಾಗಾಗಿ ಭೂ ವಂಚಿತ ಕುಟುಂಬಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು ಎಂದರು. ಉದ್ಯೋಗ ಆಕಾಂಕ್ಷಿಗಳು ಯಾವುದೇ ರೀತಿಯ ತರಬೇತಿ ಪಡೆಯಬೇಕಾದಲ್ಲಿ ಜಿಲ್ಲಾಡಳಿತಕ್ಕೆ ಸಂಪರ್ಕಿಸಬಹುದು. ಅಗತ್ಯ ತರಬೇತಿ ನೀಡಲು ಸರ್ಕಾರ ಸಿದ್ಧವಿದೆ. ತಾಲೂಕಿನಲ್ಲಿ ಆಯೋಜಿಸಿರುವ ಉದ್ಯೋಗ ಮೇಳ ಯುವಜನತೆಗೆ ಉಪಯುಕ್ತವಾಗಿದೆ. ಮುಂದಿನ ದಿನದಲ್ಲಿ ಜಿಲ್ಲಾಮಟ್ಟದ ಉದ್ಯೋಗ ಮೇಳ ಏರ್ಪಡಿಸಲು ಚಿಂತನೆ ನಡೆದಿದೆ ಎಂದು ಹೇಳಿದರು.
ಡಿಪ್ಲೊಮಾ ಕಾಲೇಜು ಅಗತ್ಯ : ಶಾಸಕ ಧೀರಜ್ ಮುನಿರಾಜು ಮಾತನಾಡಿ, ತಾಲೂಕಿನಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಕೀರ್ತಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಾತ್ರವಾಗಿದೆ. ಈಗಾಗಲೇ 10,000ಕ್ಕೂ ಹೆಚ್ಚು ಉದ್ಯೋಗ ಅವಕಾಶಗಳಿವೆ. ಹೊಸಕೋಟೆ, ದೇವನಹಳ್ಳಿಯಲ್ಲಿ ಡಿಪ್ಲೊಮಾ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರದಿಂದ ದೊಡ್ಡಬಳ್ಳಾಪುರಕ್ಕೂ ಡಿಪ್ಲೊಮಾ ಕಾಲೇಜು ಮಂಜೂರಾತಿಯಾದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇಂಜಿನಿಯರಿಂಗ್ ಓದುವ ಮಕ್ಕಳು ಉದ್ಯೋಗ ಅವಕಾಶಗಳು ಇಲ್ಲವೆಂದು ಚಿಂತೆಗೆ ಒಳಗಾಗುತ್ತಾರೆ. ಆದರೆ, ಹೆಚ್ಚು ಉದ್ಯೋಗ ಅವಕಾಶಗಳಿವೆ. ಡಿಪ್ಲೊಮಾ ಕಾಲೇಜು ತೆರೆಯುವುದರಿಂದ ಓದಿನ ನಂತರ ಉದ್ಯೋಗಕ್ಕೆ ಅನುಕೂಲವಾಗುತ್ತದೆ. ಬಜೆಟ್ನಲ್ಲಿ 6 ತಿಂಗಳಿಗೊಮ್ಮೆ ಪ್ರತಿ ತಾಲೂಕಿನಲ್ಲಿ ಉದ್ಯೋಗ ಮೇಳ ನಡೆಸಲು ಅನುದಾನ ಮೀಸಲಿಡಬೇಕು ಎಂದರು.