ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಹೇಳಿಕೆ
Chief Minister D.K. Shivakumar presented the 71st Rajyotsava Awards to achievers from various fields across the state. Legislative Assembly Speaker G.S. Patil, Legislative Council Chairman Saleem Ahmed, and Minister Shivaraj Tangadagi were present.
ನಾಡಿನ ವಿವಿಧ ಕ್ಷೇತ್ರಗಳ ಸಾಧಕರಿಗೆ 71ನೇ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪ್ರದಾನ ಮಾಡಿದರು. ವಿಧಾನಸಭಾಧ್ಯಕ್ಷ ಜಿ.ಎಸ್.ಪಾಟೀಲ್, ಸಭಾಪತಿ ಸಲೀಂ ಅಹಮದ್, ಸಚಿವ ಶಿವರಾಜ್ ತಂಗಡಗಿ ಉಪಸ್ಥಿತರಿದ್ದರು.
Published on: 

ಬೆಂಗಳೂರು : ಭಾರತದ ಬಲ ಬೆಂಗಳೂರು ಎಂಬ ಪರಿಕಲ್ಪನೆಯಲ್ಲಿ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದ್ದು, ಇಲ್ಲಿ ಸ್ಥಾಪನೆಗೊಂಡಿರುವ, ಐಟಿ ಬಿಟಿ ಮತ್ತಿತರ ಖಾಸಗಿ ಸಂಸ್ಥೆಗಳಲ್ಲಿ ಹೆಚ್ಚಿನ ಪಾಲು ಉದ್ಯೋಗ ಸ್ಥಳೀಯ ಕನ್ನಡಿಗರಿಗೆ ದೊರೆಯಬೇಕು. ಆ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ಮಾರ್ಗದರ್ಶನ ನೀಡಿರುವುದಾಗಿ ಸಿಎಂ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಸಂಜೆ ನಡೆದ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಬೆಂಗಳೂರು ನಗರದಲ್ಲಿ ಸುಮಾರು 1.41 ಕೋಟಿ ಜನಸಂಖ್ಯೆಯಿದೆ. ಅದರಲ್ಲಿ 45 ಲಕ್ಷ ಜನರು ಹೊರಗಿನವರು. ಅವರೆಲ್ಲರಿಗೂ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಹೊರಗಿನಿಂದ ಬಂದವರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿವೆ. ಅದರಂತೆ ಸ್ಥಳೀಯರಿಗೆ ಕನಿಷ್ಟ ಶೇ.60ರಷ್ಟು ಉದ್ಯೋಗ ದೊರೆಯಬೇಕು. ಕನ್ನಡವನ್ನು ಉಳಿಸಿಕೊಂಡೇ ಜಗತ್ತನ್ನು ಗೆಲ್ಲುವ ಶಕ್ತಿ ನಮ್ಮ ಯುವಜನರಿಗೆ ಬರಬೇಕು. ವಿಜ್ಞಾನ, ತಂತ್ರಜ್ಞಾನ, ಸ್ಟಾರ್ಟ್‌ಅಪ್‌ಗಳು ಮತ್ತು ಡಿಜಿಟಲ್ ಕ್ಷೇತ್ರಗಳಲ್ಲಿಯೂ ಕನ್ನಡ ಬೆಳೆಯಬೇಕು. ಕನ್ನಡವು ಕೇವಲ ಭಾವನೆಯ ಭಾಷೆಯಾಗದೆ, ಜ್ಞಾನ ಮತ್ತು ಉದ್ಯೋಗದ ಭಾಷೆಯಾಗಬೇಕು ಎಂದು ಸಿಎಂ ಆಶಯ ವ್ಯಕ್ತಪಡಿಸಿದರು.

ರಾಜ್ಯದ ಎಲ್ಲೆಡೆ ಖಾಸಗಿ ಸಂಸ್ಥೆಗಳು, ಶಾಲಾ-ಕಾಲೇಜುಗಳು ಮತ್ತು ಕಚೇರಿಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಆಚರಿಸಬೇಕೆಂದು ಈಗಾಗಲೇ ಆದೇಶ ಹೊರಡಿಸಲಾಗಿದೆ. ಕನ್ನಡವನ್ನು ಪ್ರೀತಿಸುವುದು ಎಂದರೆ ಬೇರೆ ಭಾಷೆಗಳನ್ನು ದ್ವೇಷಿಸುವುದಲ್ಲ. ಎಲ್ಲ ಭಾಷೆಗಳಿಗೂ ಗೌರವ ನೀಡಬೇಕು. ಆದರೆ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬುದನ್ನು ಯಾರೂ ಮರೆಯಬಾರದು. ಜನರ ಬದುಕಿನ ಭಾಷೆಯಾಗಿ ಕನ್ನಡ ಬೆಳೆಯಬೇಕು ಎಂದು ಸಿಎಂ ಕರೆ ನೀಡಿದರು.

ಸಮಾರಂಭದಲ್ಲಿ ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಧಕರಿಗೆ ಪ್ರತ್ಯೇಕವಾಗಿ ಸನ್ಮಾನ ಮಾಡಿ ಪ್ರಶಸ್ತಿ ವಿತರಿಸಲಾಯಿತು. ವಯೋಸಹಜ ಮತ್ತು ಅನಾರೋಗ್ಯದ ಕಾರಣಕ್ಕಾಗಿ ಸಮಾರಂಭಕ್ಕೆ ಗೈರಾಗಿದ್ದ ನಾಲ್ಕೈದು ಜನ ಹಿರಿಯ ಪ್ರಶಸ್ತಿ ಪುರಸ್ಕೃತರಿಗೆ ಅವರ ಸ್ವಂತ ಊರಿಗೆ ಹೋಗಿ ಪ್ರಶಸ್ತಿ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಸಿಎಂ ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಜಿ.ಎಸ್.ಪಾಟೀಲ್, ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಪ್ರಧಾನ ಕಾರ್ಯದರ್ಶಿ ಮಂಜುಶ್ರೀ, ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ಉಪಸ್ಥಿತರಿದ್ದರು.

ಹಲವು ಹಿರಿಯರ ಶ್ರಮದಿಂದ ಉದಯವಾದ ನಾಡಿನ ಇತಿಹಾಸವನ್ನು ಅರಿತು ಭವಿಷ್ಯವನ್ನು ನಿರ್ಮಿಸಬೇಕು. ಕೇವಲ ನ.1ರಂದು ಮಾತ್ರ ಕನ್ನಡದ ಹಬ್ಬ ಅಥವಾ ಅಭಿಮಾನ ವ್ಯಕ್ತಪಡಿಸುವುದಲ್ಲ; ವರ್ಷ ಪೂರ್ತಿ ಈ ಅಭಿಮಾನ ಇರಬೇಕು.
ಶಿವರಾಜ ಎಸ್.ತಂಗಡಗಿ, ಕನ್ನಡ ಸಂಸ್ಕೃತಿ ಸಚಿವರು