ಬೇಳೆ ಕಾಳುಗಳ ಬೆಲೆಯೂ ಏರಿಕೆ

prices-of-pulses-also-rise
prices-of-pulses-also-rise
Published on

ಪ್ರಮುಖ ಮುಖ್ಯಾಂಶಗಳು

  • * ಪ್ರತಿ ಕೆ.ಜಿ. 8-10 ರೂ. ಹೆಚ್ಚಳವಾಗಿದೆ.
ಬೆಂಗಳೂರು: ಗೌರಿ-ಗಣೇಶ ಹಬ್ಬಕ್ಕೆ ಹೂವು-ಹಣ್ಣು ಮಾತ್ರವಲ್ಲದೆ ಬೇಳೆ-ಕಾಳುಗಳ ದರವೂ ಏರಿಕೆಯಾಗಿದ್ದು, ಪ್ರತಿ ಕೆ.ಜಿ. 8-10 ರೂ. ಹೆಚ್ಚಳವಾಗಿದೆ. ಕಳೆದೊಂದು ವಾರದಿಂದ ದರ ನಿರಂತರ ಏರಿಕೆಯಾಗುತ್ತಿದ್ದು, ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ. ಮಿಲ್ಲಿಂಗ್ ಪಾಯಿಂಟ್‌ನಲ್ಲಿ ತೊಗರಿಕಾಳು ಕೆ.ಜಿ.ಗೆ 80-85 ರೂ.ನಿಂದ 87- 94 ರೂ.ವರೆಗೆ ಏರಿಕೆಯಾಗಿದೆ.
ಯಶವಂತಪುರ ಎಪಿಎಂಸಿಯಲ್ಲಿ ತೊಗರಿಬೇಳೆ ದರ ಕೆ.ಜಿ.ಗೆ 100/105 ರೂ.ನಿಂದ 115 ರೂ.ಗೆ ಏರಿಕೆಯಾಗಿದೆ. ಶಿವಲಿಂಗ ತೊಗರಿ ಬೇಳೆ 130 ರೂ.ನಿಂದ 140 ರೂ. ತಲುಪಿದೆ. ಬರ್ಮಾ, ತಾಂಜೇನಿಯಾದಿಂದ ಆಮದು ಮಾಡಿಕೊಳ್ಳುತ್ತಿರುವ ತೊಗರಿ ಬೇಳೆ ದರ ಸ್ವಲ್ಪ ಕಡಿಮೆಯಿದ್ದು, ಕೆ.ಜಿ.ಗೆ ಸಗಟು ದರದಲ್ಲಿ 100-115 ರೂ. ಇದೆ. ಉಳಿದ ಬೇಳೆಗಳ ದರ ದುಬಾರಿ ಇದೆ. ಚಿಲ್ಲರೆ ಮಾರಾಟಗಾರರು ಇದಕ್ಕೆ ಶೇ.10 ದರ ಹೆಚ್ಚಿಸಿ ಮಾರಾಟ ಮಾಡುತ್ತಿದ್ದಾರೆ. ಉಳಿದಂತೆ 75-80 ರೂ. ಇದ್ದ ಕಡ್ಲೆಕಾಳು ದರ ಕೆ.ಜಿ.ಗೆ 85-95 ರೂ.ವರೆಗೆ ಏರಿಕೆಯಾಗಿದೆ. 90-95 ರೂ. ಇದ್ದ ಹೆಸರು ಬೇಳೆ 100-105 ರೂ. ಆಗಿದೆ. ಹೆಸರು ಕಾಳು 115 ರೂ. ನಿಂದ 125 ರೂ.ಗೆ ಹೆಚ್ಚಳವಾಗಿದೆ. ಹಲಸಂದೆ ಕಾಳು 75 ರೂ.ನಿಂದ 85 ರೂ. ತಲುಪಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಬೇಳೆ ಕಾಳುಗಳ ಬೆಲೆ ಪ್ರತಿ ಕೆ.ಜಿ.ಗೆ 8-10 ರೂ. ಏರಿಕೆಯಾಗಿದೆ ಎನ್ನುತ್ತಾರೆ ಯಶವಂತಪುರ ಬೇಳೆಕಾಳು ಸಗಟು ಮಾರಾಟಗಾರರ ಸಂಘದ ಅಧ್ಯಕ್ಷ ರಮೇಶ್‌ಚಂದ್ರ ಲಾಹೋಟಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net