ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾದಿಂದ ಹರಪನಹಳ್ಳಿ ತಾಲೂಕು ಆಡಳಿತ ಕಚೇರಿ ಮುಂದೆ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಎಂ. ಮಾತನಾಡಿದರು. ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್, ಸದಸ್ಯರಾದ ಮಾದಿಹಳ್ಳಿ ಬೊಮ್ಮಲಿಂಗಪ್ಪ, ರಾಗಿಮಸಲವಾಡ ಹನುಮಂತನಾಯ್ಕ, ಗುಡಿಹಳ್ಳಿ ಶಿವರಾಮ ಇತರರಿದ್ದರು.
ಹರಪನಹಳ್ಳಿ:ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ತ್ವರಿತ ನಿರ್ಮಾಣ ಸೇರಿದಂತೆ ಇತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾದಿಂದ ತಾಲೂಕು ಆಡಳಿತ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಯಿತು.
ಜಿಲ್ಲಾ ಕಾರ್ಯದರ್ಶಿ ಸಂತೋಷ್ ಎಂ. ಮಾತನಾಡಿ, ಹಲುವಾಗಲು ಗ್ರಾಮ ಸಮೀಪದ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ನೆನಗುದಿಗೆ ಬಿದ್ದಿದೆ. ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೂ ಇದಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು, ಮಧ್ಯವರ್ತಿಗಳ ಹಸ್ತಕ್ಷೇಪದಿಂದ ಯೋಜನೆಗಳು ಸಮಪರ್ಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ದೂರಿದರು.
ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಹೊಸಕೋಟೆಯ ವಿವಿಧೋದ್ದೇಶ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಂದ ಪಿಗ್ಮಿ ಹಾಗೂ ಬಾಂಡ್ ಪಡೆದು ವಂಚನೆ ಮಾಡಲಾಗಿದೆ, ಪ್ರಸ್ತುತ ಉನ್ನತ ಮಟ್ಟದ ತನಿಖೆ ಕೈಗೊಂಡಿದ್ದು, ಕೂಡಲೆ ವಂಚಿತ ಫಲಾನುಭವಿಗಳ ಹಣ ಪಾವತಿಸಬೇಕು.
ತಾಲೂಕಿನಾದ್ಯಂತ ಫಸಲ್ ಬಿಮಾ ಯೋಜನೆಯಿಂದ ಅರ್ಹ ಫಲಾನುಭವಿಗಳಿಗೆ ವಿಮೆ ಪರಿಹಾರ ಸಿಗುತ್ತಿಲ್ಲ. ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ರಾಗಿ ಖರೀದಿಸಿ ಹಲವು ತಿಂಗಳಾದರೂ ರೈತರಿಗೆ ಹಣ ಪಾವತಿಯಾಗಿಲ್ಲ, ಕೂಡಲೆ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.