

ದೊಡ್ಡಬಳ್ಳಾಪುರ:
ನಗರದ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಆ.15ರಂದು 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ಮಲ್ಲಪ್ಪ.ಕೆ.ಯರಗೋಳ ತಿಳಿಸಿದರು.
ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಸಮಾರಂಭದ ಧ್ವಜಾರೋಹಣ, ನಿರೂಪಣೆ, ರಾಷ್ಟ್ರಗೀತೆ ಹಲವು ಕಾರ್ಯಕ್ರಮಗಳ ಸಿದ್ಧತೆ ಬಗ್ಗೆ ಸಭೆ ನಡೆಸಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಿದೆ. ವಿದ್ಯಾರ್ಥಿಗಳನ್ನು ತಾಲೀಮಿಗೆ ಕರೆತಂದು ಅವರ ಯೋಗ ಕ್ಷೇಮ, ಉಪಹಾರ, ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ವಿಚಾರದಲ್ಲಿ ಲೋಪ ಉಂಟಾಗದಂತೆ ಹಾಗೂ ಯಾವುದೇ ಒತ್ತಡಕ್ಕೆ ಮಣಿಯದೆ ಅರ್ಹರನ್ನು ಸನ್ಮಾನಿಸಬೇಕಿದೆ. ಈ ಹಿಂದೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸನ್ಮಾನಿತರಾದವರಿಗೆ ಮತ್ತೆ ಸನ್ಮಾನ ಮಾಡುವುದು ಬೇಡ. ಧ್ವಜ ಸ್ಥಂಭ ಹಾಗೂ ಧ್ವಜಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಬೇಕು. ಕ್ರೀಡಾಂಗಣದ ಸ್ವಚ್ಛತೆ,ಸಾಂಸತಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ ಸೇರಿದಂತೆ ಹಲವು ಸಲಹೆ ಸೂಚನೆ ನೀಡಿದರು.
ಆಹ್ವಾನ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ವಿವಿಧ ಕ್ಷೇತ್ರಗಳಾದ ಸರ್ಕಾರಿ ಸೇವೆ, ಪೊಲೀಸ್ ಸೇವೆ, ಜನಪದ ಕಲೆ, ಸಾಹಿತ್ಯ, ವ್ಯವಸಾಯ, ಸಮಾಜ ಸೇವೆ, ಮಾಧ್ಯಮ, ಶಿಕ್ಷಣ ಕ್ಷೇತ್ರ, ಕ್ರೀಡೆ, ಎನ್ಸಿಸಿ, ಯೋಧರು, ಪೌರ ಸೇವಕರು ಈ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ (ಸೇವೆ) ಮಾಡಿರುವವರನ್ನು ಸನ್ಮಾನಿಸಲಾಗುತ್ತಿದೆ. ಅರ್ಹ ಸಾಧಕರು ವೈಯಕ್ತಿಕ ಮತ್ತು ಸಾಧನೆ ಮಾಹಿತಿಯನ್ನು ಆ.10ರೊಳಗಾಗಿ ದೊಡ್ಡಬಳ್ಳಾಪುರ ತಾಲೂಕು ಕಚೇರಿಗೆ ಸಲ್ಲಿಸಬೇಕಿದೆ.