ಅಧಿಕಾರ ಹಂಚಿಕೆ ವಿಚಾರ; ನನಗೆ ಯಾವ ಆತುರವೂ ಇಲ್ಲ, ಎಲ್ಲವನ್ನೂ ಪಕ್ಷ ತೀರ್ಮಾನಿಸುತ್ತದೆ: DK ಶಿವಕುಮಾರ್

 DK Shivakumar
DK Shivakumar
Published on
ಬೆಂಗಳೂರು: ನನಗೆ ಯಾವ ಆತುರವೂ ಇಲ್ಲ, ಎಲ್ಲವನ್ನೂ ಪಕ್ಷ ತೀರ್ಮಾನಿಸುತ್ತದೆ ಎಂದು ಡಿಸಿಎಂ DK ಶಿವಕುಮಾರ್ ತಿಳಿಸಿದರು.
ಅರಮನೆ ಮೈದಾನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ನಿಮ್ಮ ಪಕ್ಷದ ಬಹಳಷ್ಟು ಕಾರ್ಯಕರ್ತರು ನಿಮ್ಮನ್ನು ಸಿಎಂ ಸ್ಥಾನದಲ್ಲಿ ನೋಡಲು ಬಯಸುತ್ತಿದ್ದಾರಲ್ಲಾ ಎಂದು ಕೇಳಿದಾಗ ಶಿವಕುಮಾರ್ ಅವರು ನನಗೆ ಯಾವುದೇ ಆತುರವಿಲ್ಲ ಎಂದರು.

ಸಾಕಷ್ಟು ಕೆಲಸಗಳಿರುವ ಕಾರಣ ದೆಹಲಿಗೆ ಹೋಗಬಹುದು

ನೀವು ಹಾಗೂ ಸಿಎಂ ದೆಹಲಿಗೆ ಹೋಗುತ್ತೀರಾ ಎಂದು ಕೇಳಿದಾಗ, "ನಾನು ದೆಹಲಿಗೆ ಹೋಗಬಹುದು. ನನಗೆ ದೆಹಲಿಯಲ್ಲಿ ಸಾಕಷ್ಟು ಕೆಲಸಗಳಿವೆ. ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ನಾನು ಸಂಸದರನ್ನು ಭೇಟಿ ಮಾಡಬೇಕಿದೆ. ದೇವರ ಕೃಪೆಯಿಂದ ಮೇಕೆದಾಟು ಯೋಜನೆ ಸಂಬಂಧ ನ್ಯಾಯಾಲಯದಲ್ಲಿ ನಮಗೆ ನ್ಯಾಯ ದೊರೆತಿದ್ದು, ಈ ಯೋಜನೆ ಪರಿಷ್ಕೃತ ಡಿಪಿಆರ್ ಸಿದ್ಧತೆಗೆ ಸೂಚಿಸಿದ್ದೇವೆ. ಮಹದಾಯಿ, ಕೃಷ್ಣಾ, ಎತ್ತಿನಹೊಳೆ ಸೇರಿದಂತೆ ನಮ್ಮ ಸಾಕಷ್ಟು ಯೋಜನೆಗಳ ಬಗ್ಗೆ ಸಂಸದರ ಜೊತೆ ಚರ್ಚೆ ಮಾಡುವುದಿದೆ. ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಸಿಎಂ ಜತೆ ಚರ್ಚೆ ಮಾಡುತ್ತೇನೆ" ಎಂದರು.

ನನ್ನ ಸಮುದಾಯ ಕಾಂಗ್ರೆಸ್

ಒಕ್ಕಲಿಗ ಸಮುದಾಯ ನಿಮ್ಮ ಪರವಾಗಿ ನಿಂತಿದೆಯಲ್ಲ ಎಂದು ಕೇಳಿದಾಗ, "ನಾನು ಸಮುದಾಯದ ದೃಷ್ಟಿಕೋನದ ಬಗ್ಗೆ ಚರ್ಚೆ ಮಾಡುವುದಿಲ್ಲ. ಪಕ್ಷ ನನಗೆ ಮುಖ್ಯ. ಕಾಂಗ್ರೆಸ್ ನನ್ನ ಸಮುದಾಯ. ನಾನು ಒಕ್ಕಲಿಗ ಸಮುದಾಯದಿಂದ ಬಂದಿದ್ದು, ಆ ಸಮುದಾಯದ ಜನ ನನ್ನನ್ನು ಪ್ರೀತಿಸಬಹುದು. ನನ್ನ ಬದ್ಧತೆ ಹಿಂದುಳಿದ, ಪರಿಶಿಷ್ಟ, ಅಲ್ಪಸಂಖ್ಯಾತ ಸೇರಿದಂತೆ ಸಮಾಜದ ಎಲ್ಲಾ ಸಮುದಾಯಗಳ ಪರವಾಗಿದೆ. ಒಕ್ಕಲಿಗರೂ ಕೂಡ ಹಿಂದುಳಿದ ವರ್ಗದ ಸಮುದಾಯದವರೇ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net